ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್‌: ಎಸ್ಒಪಿ ರೂಪಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ನೀಡುವಾಗ ನ್ಯಾಯಾಲಯಗಳು ಪಾಲಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಹಾಗೂ ಹಾಗೂ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿಸಿದೆ. ಅಲ್ಲದೆ, ಅಧಿಕಾರಿಗಳನ್ನು ಅಪಮಾನಿಸದಂತೆ ಹಾಗೂ ಉಡುಗೆ ತೊಡುಗೆಗಳ ಬಗ್ಗೆ ಅನಗತ್ಯ ಟೀಕೆ ಮಾಡದಂತೆ ನ್ಯಾಯಾಲಯಗಳಿಗೆ ಸೂಚಿಸಿದೆ.
ಎಸ್‌ಒಪಿಯನ್ನು ಎಲ್ಲಾ ಹೈಕೋರ್ಟ್‌ಗಳು ಪಾಲಿಸಬೇಕಿದ್ದು ಅಧಿಕಾರಿಗಳಿಗೆ ಮನಬಂದಂತೆ ಸಮನ್ಸ್‌ ನೀಡಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ ಮಿಶ್ರಾ ಅವರಿದ್ದ ಪೀಠ ಒತ್ತಿ ಹೇಳಿದೆ.

ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅಧಿಕಾರಿಗಳ ಖುದ್ದು ಹಾಜರಾತಿಗೆ ನ್ಯಾಯಾಲಯಗಳು ಸೂಚಿಸಬೇಕು ಆದರೆ, ಮೊದಲ ಆಯ್ಕೆಯಾಗಿ 24 ಗಂಟೆಗಳ ಮೊದಲು ಅಧಿಕಾರಿಗಳಿಗೆ ವೀಡಿಯೊ ಕಾನ್ಫರೆನ್ಸಿಂಗ್ ಲಿಂಕ್ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಹೇಳಿತು.
ಅಧಿಕಾರಿಗಳ ವೇಷಭೂಷಣದ ಬಗ್ಗೆ ನ್ಯಾಯಾಲಯಗಳು ಮಾಡುವ ಟೀಕೆಗಳಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಪ್ರತಿಕ್ರಿಯಿಸಿರುವ ತಮ್ಮದೇ ಕಚೇರಿಯ ವಸ್ತ್ರಸಂಹಿತೆಯನ್ನು ಅಧಿಕಾರಿಗಳು ಪಾಲಿಸುತ್ತಿದ್ದರೆ ನ್ಯಾಯಾಲಯಗಳು ಅವರನ್ನು ಟೀಕಿಸುವಂತಿಲ್ಲ ಎಂದು ಹೇಳಿದೆ.

ಪ್ರಮುಖ ಸುದ್ದಿ :-   ಚಲಿಸುವ ರೈಲಿನಲ್ಲೇ ಪತ್ನಿಗೆ ತ್ರಿವಳಿ ತಲಾಖ್ ನೀಡಿದ ವ್ಯಕ್ತಿ ; ಪತ್ನಿಗೆ ಥಳಿಸಿ ಪರಾರಿ...!

ಒಬ್ಬ ಅಧಿಕಾರಿಯ ದೃಷ್ಟಿಕೋನ ನ್ಯಾಯಾಲಯದ ದೃಷ್ಟಿಕೋನಕ್ಕಿಂತ ಭಿನ್ನವಾಗಿದೆ ಎಂಬ ಕಾರಣಕ್ಕೆ ಅವರಿಗೆ ಸಮನ್ಸ್‌ ನೀಡುವಂತಿಲ್ಲ. ಆದರೂ, ಸತ್ಯ ಮರೆಮಾಚಿದರೆ ಆಗ ಅಧಿಕಾರಿಗಳ ಖುದ್ದು ಉಪಸ್ಥಿತಿ ಅಗತ್ಯವಾಗಬಹುದು ಎಂದು ನ್ಯಾಯಾಲಯ ಹೇಳಿದೆ.
ಅಗತ್ಯವಿಲ್ಲದಿದ್ದಾಗ ಅಥವಾ ಸರ್ಕಾರಿ ಅಧಿಕಾರಿಗಳನ್ನು ಆಲಿಸುವುದು ಇಲ್ಲದೇ ಇದ್ದಾಗ ಇಡೀ ವಿಚಾರಣೆಯ ಅವಧಿಯವರೆಗೂ ಅವರನ್ನು ನಿಲ್ಲುವಂತೆ ಸೂಚಿಸಬಾರದು. ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳಲು ಅನುವಾಗುವಂತೆ ಮುಂಚಿತವಾಗಿಯೇ ಸಮನ್ಸ್‌ ಆದೇಶ ನೀಡಬೇಕು. ಹಾಗೂ ಅಧಿಕಾರಿಗಳ ಹಾಜರಿಗೆ ಮೊದಲ ಆಯ್ಕೆ ವೀಡಿಯೊ ಕಾನ್ಫರೆನ್ಸ್‌ ಆಗಿರಬೇಕು ಎಂದು ಪೀಠ ಹೇಳಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement