ಅಯೋಧ್ಯೆ ರಾಮಮಂದಿರದ ವಿಚಾರದಲ್ಲಿ ಶೃಂಗೇರಿ ಮಠದ ವಿರುದ್ಧ ಅಪಪ್ರಚಾರ : ಸ್ಪಷ್ಟನೆ ನೀಡಿದ ಮಠ

ಚಿಕ್ಕಮಗಳೂರು: ಜನವರಿ 22ರಂದು ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಮಧ್ಯೆ ಶೃಂಗೇರಿ ಶ್ರೀಗಳ ಭಾವಚಿತ್ರ ಹಾಗೂ ಹೆಸರು ಬಳಸಿ ಅಯೋಧ್ಯೆಯ ಪವಿತ್ರ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನ ಮಹೋತ್ಸವ ವಿರೋಧಿಸುವಂತೆ ಶೃಂಗೇರಿ ಶ್ರೀಗಳು ಹೇಳಿದ್ದಾರೆ ಎಂದು ಅಪಪ್ರಚಾರ ನಡೆದ ಹಿನ್ನೆಲೆಯಲ್ಲಿ ಈ ಬಗ್ಗೆ ಶೃಂಗೇರಿ ಮಠ (sringeri sharada peetha) ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ ಸ್ಪಷ್ಟನೆ ನೀಡಿರುವ ಶೃಂಗೇರಿ ಮಠ, ಇಂತಹ ಯಾವುದೇ ಅಪಪ್ರಚಾರಗಳಿಗೆ ಕಿವಿ ಕೊಡಬಾರದು ಎಂದು ಹೇಳಿದೆ. ಶೃಂಗೇರಿ ಶ್ರೀಗಳ ಭಾವಚಿತ್ರ ಹಾಗೂ ಹೆಸರನ್ನು ಕೆಲ ಧರ್ಮದ್ವೇಷಿಗಳು ದುರ್ಬಳಕೆ ಮಾಡಿಕೊಂಡಿದ್ದು, ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು, ರಾಮಮಂದಿರ ವಿರೋಧಿಸುವ ಯಾವುದೇ ಸಂದೇಶ ನೀಡಿಲ್ಲ ಎಂದು ಶ್ರೀಮಠ ತಿಳಿಸಿದೆ.

ರಾಮಮಂದಿರ ಪ್ರಾಣ ಪ್ರತಿಷ್ಠಾಪನ ಮಹೋತ್ಸವವನ್ನು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ವಿರೋಧಿಸುತ್ತಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ಮಾಡಲಾಗಿದೆ. ಈ ಹಿಂದೆ ಶ್ರೀರಾಮ ತಾರಕ ಮಹಾಮಂತ್ರ ಜಪಿಸುವಂತೆ ಭಕ್ತರಿಗೆ ಶೃಂಗೇರಿ ಶ್ರೀಗಳು ಕರೆ ನೀಡಿದ್ದನ್ನು, ಅವರು ಪ್ರತಿಷ್ಠಾಪನೆ ಮಹೋತ್ಸವ ವಿರೋಧಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ. ಹೀಗಾಗಿ ಯಾವುದೇ ಅಪಪ್ರಚಾರಗಳಿಗೆ ಕಿವಿ ಕೊಡಬಾರದು ಎಂದು ಮಠದ ಆಡಳಿತಾಧಿಕಾರಿ ಮನವಿ ಮಾಡಿದ್ದಾರೆ..
ಸುಮಾರು ಐದುನೂರು ವರ್ಷಗಳ ಸುದೀರ್ಘವಾದ ಹೋರಾಟದ ನಂತರ ಶ್ರೀರಾಮಚಂದ್ರನ ಅವತಾರ ಕ್ಷೇತ್ರವಾದ ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನಿಗೆ ಭವ್ಯವಾದ ದೇವಸ್ಥಾನದ ನಿರ್ಮಾಣವು ನೆರವೇರಿ ಇದೇ ಶೋಭಕೃತ್ ಪುಷ್ಯ ಶುಕ್ಲದ್ವಾದಶಿ (22-1-2024) ಸೋಮವಾರದಂದು ಪ್ರಾಣಪ್ರತಿಷ್ಠಾಮಹೋತ್ಸವವು ಅತ್ಯಂತ ವೈಭವೋಪೇತವಾಗಿ ಸಂಪನ್ನಗೊಳ್ಳಲಿದೆ. ಈ ವಿಷಯವು ಸಮಸ್ತ ಆಸ್ತಿಕಸ್ತೋಮಕ್ಕೂ ಅತ್ಯಂತಾನಂದದಾಯಕವಾಗಿದೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ಆದರೆ ಇಂತಹ ಸಂದರ್ಭದಲ್ಲಿ ಕೆಲವರು ಧರ್ಮದ್ವೇಷಿಗಳು ಸಾಮಾಜಿಕ ಜಾಲತಾಣದಲ್ಲಿ “www.dainikjagran.com” ಎಂಬ ಹೆಸರನ್ನು ಉಪಯೋಗಿಸಿಕೊಂಡು ಶೃಂಗೇರಿ ಶಾರದಾಪೀಠದ ಪ್ರಸ್ತುತ ಅಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಛಾಯಾಚಿತ್ರದ ಜೊತೆಗೆ ಶ್ರೀಗಳು ಈ ಪವಿತ್ರಪ್ರಾಣಪ್ರತಿಷ್ಠಾ ಮಹೋತ್ಸವವನ್ನು ವಿರೋಧಿಸುತ್ತಿದ್ದಾರೆ ಎಂಬ ಅರ್ಥವು ಬರುವ ಹಾಗೆ ಸಂದೇಶವನ್ನು ಹಾಕಿ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಶ್ರೀಭಾರತೀತೀರ್ಥ ಮಹಾಸ್ವಾಮಿಗಳವರು ಇಂತಹ ಯಾವುದೇ ಸಂದೇಶ ನೀಡಿರುವುದಿಲ್ಲ. ಇದು ಕೇವಲ ಧರ್ಮದ್ವೇಷಿಗಳಾದ ಕೆಲವರು ಮಾಡುತ್ತಿರುವ ಸುಳ್ಳು ಪ್ರಚಾರವಾಗಿದೆ. ಆದ್ದರಿಂದ ಆಸ್ತಿಕಮಹಾಜನರು ಯಾವುದೇ ಕಾರಣಕ್ಕೆ ಇಂತಹ ಅಪಪ್ರಚಾರಗಳಿಗೆ ಬೆಲೆ ಕೊಡಬಾರದು. ಹಾಗೆಯೇ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಅಧಿಕೃತವಾದ www.sringeri.net ಎಂಬ ವೆಬ್‌ಸೈಟಿನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ವಿಷಯಗಳನ್ನು ಮಾತ್ರವೇ ಪ್ರಾಮಾಣಿಕವಾಗಿ ಪರಿಗಣಿಸಬೇಕೆಂದು ಈ ಮೂಲಕ ನಿವೇದಿಸುತ್ತಿದ್ದೇವೆ ಎಂದು ಸ್ಪಷ್ಟನೆ ಹೇಳಿದೆ.

“sharadapeetham” ಯೂಟ್ಯೂಬ್ ಚ್ಯಾನೆಲ್ ಮೂಲಕ ಕಳೆದ ದೀಪಾವಳಿಯ (12-11-2023) ಸಂದರ್ಭದಲ್ಲಿ ಈ ಪವಿತ್ರ ಪ್ರಾಣಪ್ರತಿಷ್ಠಾ ಮಹೋತ್ಸವವನ್ನು ಮನಸ್ಸಿನಲ್ಲಿಟ್ಟುಕೊಂಡು ಶ್ರೀರಾಮತಾರಕ ಮಹಾಮಂತ್ರವನ್ನು ಜಪಿಸುವಂತೆ ಎಲ್ಲಾ ಆಸ್ತಿಕರಿಗೂ ಶೃಂಗೇರಿ ಜಗದ್ಗುರುಗಳು ಸಂದೇಶವನ್ನು ನೀಡಿದ್ದರು. ಅದನ್ನನುಸರಿಸಿ ಆಸ್ತಿಕರು ಅತ್ಯಧಿಕ ಸಂಖ್ಯೆಯಲ್ಲಿ ಮಂತ್ರಜಪವನ್ನು ಮಾಡುತ್ತಿರುವುದು ಈ ಸಂದರ್ಭದಲ್ಲಿ ಗಮನಾರ್ಹವಾಗಿದೆ. ಹಾಗೆಯೇ ಅತ್ಯಂತ ಪವಿತ್ರವೂ ಅಪರೂಪವು ಆದ ಈ ಪ್ರಾಣಪ್ರತಿಷ್ಠಾಮಹೋತ್ಸವದ ಸುಸಂದರ್ಭದಲ್ಲಿ ಎಲ್ಲಾ ಆಸ್ತಿಕರು ಯಥಾಯೋಗ್ಯವಾಗಿ ಭಾಗವಹಿಸಿ ಶ್ರೀರಾಮನ ಪರಿಪೂರ್ಣಕೃಪೆಗೆ ಪಾತ್ರರಾಗಿ ಕೃತಾರ್ಥರಾಗಬೇಕೆಂದು ಜಗದ್ಗುರು ಮಹಾಸ್ವಾಮಿಗಳವರು ಆಶೀರ್ವದಿಸಿದ್ದಾರೆ ಎಂದು ಶ್ರೀಮಠ ತಿಳಿಸಿದೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement