ಮಾಂಸ ಮಾರಾಟಕ್ಕಾಗಿ ವಿಷದ ಕಾಳು ತಿನ್ನಿಸಿ 8 ನವಿಲುಗಳ ಹತ್ಯೆ : ಒಬ್ಬನ ಬಂಧನ, ಇನ್ನಿಬ್ಬರಿಗಾಗಿ ಹುಡುಕಾಟ

ಬೆಳಗಾವಿ : ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಳ್ಳಿಗಳಲ್ಲಿ ಮಾಂಸಕ್ಕಾಗಿ ನವಿಲುಗಳಿಗೆ ವಿಷ ಹಾಕಿ ಕೊಲ್ಲುತ್ತಿದ್ದ ತಂಡವನ್ನು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಪತ್ತೆ ಹಚ್ಚಿದ್ದು ಒಬ್ಬನನ್ನು ಬಂಧಿಸಲಾಗಿದೆ ಹಾಗೂ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಝಳಕಿ ನಿವಾಸಿ ಮಂಜುನಾಥ ಪವಾರ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಪರಾರಿಯಾಗಿದ್ದು ಇನ್ನಿಬ್ಬರ ಬಂಧನಕ್ಕೆ ಎರಡು ತಂಡಗಳನ್ನು ಮಾಡಿ ಹುಡುಕಾಟ ನಡೆಸಿದ್ದಾರೆ.
ಇವರ ತಂಡವು ರಾಷ್ಟ್ರ ಪಕ್ಷಿಗಳನ್ನು ಕೊಂದು ಮಾರಾಟ ಮಾಡುತ್ತಿತ್ತು. ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ನವಿಲುಗಳು ಸತ್ತಿರುವುದನ್ನು ಕಂಡು ಗ್ರಾಮಸ್ಥರು ಶಾಕ್ ಆಗಿದ್ದರು. ಅರಣ್ಯ ಇಲಾಖೆ ಮತ್ತು ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಸುದ್ದಿ ಮುಟ್ಟಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಆಗಮಿಸಿ ಮೃತ ನವಿಲುಗಳನ್ನು ವಶಕ್ಕೆ ತೆಗೆದುಕೊಂಡಿದ್ದರು. ತಕ್ಷಣ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಮೃತ ನವಿಲುಗಳನ್ನು ಬೆಳಗಾವಿ ಪಶು ಚಿಕಿತ್ಸಾಲಯಕ್ಕೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಾಗೂ ಹೊಲದಲ್ಲಿ ಬಿದ್ದಿದ್ದ ಕಾಳುಗಳನ್ನು ಸಹ ಪರೀಕ್ಷೆಗಾಗಿ ಸಂಗ್ರಹಿಸಿದ್ದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ : ಗೃಹ ಸಚಿವ ಡಾ..ಪರಮೇಶ್ವರ

ಸ್ಥಳದಲ್ಲಿ ಸಿಕ್ಕ ಸಾಕ್ಷಿಗಳ ಆಧಾರದ ಮೇಲೆ ಮತ್ತು ರೈತರು ನೀಡಿದ ಮಾಹಿತಿ ಮೇರೆಗೆ ಆರೋಪಿಗಳ ಪತ್ತೆಗೆ ಎರಡು ತಂಡ ರಚಿಸಿ ಶೋಧ ಕಾರ್ಯಕ್ಕೆ ಮುಂದಾದರು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ಅರಣ್ಯ ಇಲಾಖೆ ಇಲಾಖೆ ಒಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಮಂಜುನಾಥ ಮಾಂಜರಿ ಗ್ರಾಮದ ಹೊರ ವಲಯದಲ್ಲಿ ಇಟ್ಟಿಗೆ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ. ಮಾಂಸಕ್ಕಾಗಿ ಇವರೆಲ್ಲ ಮೆಕ್ಕೆಜೋಳದ ಕಾಳುಗಳಲ್ಲಿ ವಿಷ ಹಾಕಿ ನವಿಲುಗಳನ್ನು ಕೊಲ್ಲುತ್ತಿದ್ದರು. ಕೊಂದ ಬಳಿಕ ನವಿಲುಗಳನ್ನು ತೆಗೆದುಕೊಂಡು ಹೋಗಿ ಅದರ ಮಾಂಸ ಮಾರುತ್ತಿದ್ದರು. ಸದ್ಯ ಮಂಜುನಾಥನನ್ನು ಬಂಧಿಸಿ ವಿಚಾರಣೆ ನಡೆಸಿ ಹಿಂಡಲಗಾ ಜೈಲಿಗೆ ಕಳುಹಿಸಿದ್ದಾರೆ.

ರಾಯಬಾಗ ಎಸಿಎಫ್ ಸುನೀತಾ ನಿಂಬರಗಿ ಮಾತನಾಡಿ, ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದಾಗ ಮೂರು ಹೆಣ್ಣು, ಐದು ಗಂಡು ನವಿಲು ಮೃತದೇಹ ಪತ್ತೆಯಾಗಿದ್ದವು. ಮೃತ ನವಿಲು ತಂದು ಮರಣೋತ್ತರ ಪರೀಕ್ಷೆ ಮಾಡಿಸಿದ್ದೇವೆ. ಝಳಕಿ ಗ್ರಾಮದ ನಿವಾಸಿ ಮಂಜುನಾಥ ಪವಾರ ಎಂಬಾತನನ್ನು ಬಂಧಿಸಿದ್ದೇವೆ. ಇನ್ನಿಬ್ಬರು ಆರೋಪಿಗಳು ಪರಾರಿಯಾಗಿದ್ದು ಅವರಿಗಾಗಿ ಶೋಧಕಾರ್ಯ ನಡೆಸಿದ್ದೇವೆ. ನವಿಲು ಮಾಂಸಕ್ಕಾಗಿ ವಿಷ ಹಾಕಿ ಅವುಗಳನ್ನು ಕೊಂದಿದ್ದಾರೆ. ಮೆಕ್ಕೆಜೋಳದ ಕಾಳುಗಳಲ್ಲಿ ವಿಷ ಹಾಕಿ ಕೊಂದಿದ್ದಾರೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ತನಿಖೆ ಬಳಿಕ ಇನ್ನಷ್ಟು ಮಾಹಿತಿ ತಿಳಿಯಲಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement