ಅಮೆರಿಕದ ಅಧ್ಯಕ್ಷೀಯ ರೇಸ್ ನಿಂದ ಹಿಂದೆ ಸರಿದ ವಿವೇಕ ರಾಮಸ್ವಾಮಿ

ನ್ಯೂಯಾರ್ಕ್‌: ಅಮೆರಿಕದ ಅಧ್ಯಕ್ಷ ಸ್ಥಾನದ (US Presidential Election 2024) ರೇಸ್‌ನಲ್ಲಿದ್ದ ಭಾರತೀಯ ಮೂಲದ ಬಯೋಟೆಕ್ ಉದ್ಯಮಿ ವಿವೇಕ ರಾಮಸ್ವಾಮಿ ಅವರು ಮಂಗಳವಾರ ಸ್ಪರ್ಧೆಯಿಂದ ಹೊರಗೆ ಬಂದಿದ್ದಾರೆ. ಈಗ ಅವರು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ.
ಭಾರತೀಯ ಮೂಲದ ಅಮೆರಿಕನ್​ ಪ್ರಜೆ, ಆರೋಗ್ಯ ಮತ್ತು ಬಯೋಟೆಕ್​ ವಲಯದ ಖ್ಯಾತ ಉದ್ಯಮಿ ಹಾಗೂ ಲೇಖಕ ವಿವೇಕ​ ರಾಮಸ್ವಾಮಿ (Vivek Ramaswamy) ಅವರು ರೇಸ್‌ನಲ್ಲಿದ್ದರು. ಆದರೆ ಅಯೋವಾದ ಲೀಡ್‌ ಆಫ್ ಕಾಕಸ್‌ಗಳಲ್ಲಿ ನಿರಾಶಾದಾಯಕ ಬೆಂಬಲ ಪಡೆದ ನಂತರ ಶ್ವೇತಭವನದ ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದರು.

ವಿವೇಕ ರಾಮಸ್ವಾಮಿ ಅವರು ಫೆಬ್ರವರಿ 2023 ರಲ್ಲಿ ಅಧ್ಯಕ್ಷೀಯ ಸ್ಪರ್ಧೆಗೆ ಪ್ರವೇಶಿಸಿದಾಗ ರಾಜಕೀಯ ವಲಯಗಳಲ್ಲಿ ತುಲನಾತ್ಮಕವಾಗಿ ಅಪರಿಚಿತರು, ವಲಸೆ ಮತ್ತು ಅಮೆರಿಕಾ ಫಸ್ಟ್‌ ವಿಧಾನದ ಬಗ್ಗೆ ತಮ್ಮ ಬಲವಾದ ಅಭಿಪ್ರಾಯಗಳ ಮೂಲಕ ರಿಪಬ್ಲಿಕನ್ ಮತದಾರರಲ್ಲಿ ಗಮನ ಮತ್ತು ಬೆಂಬಲವನ್ನು ಗಳಿಸುವಲ್ಲಿ ಯಶಸ್ವಿಯಾದರು. ಅವರ ಪ್ರಚಾರ ಕಾರ್ಯತಂತ್ರವು ಮಾಜಿ ಅಧ್ಯಕ್ಷ ಟ್ರಂಪ್ ಅವರ ನೀತಿಯ ವಿಷಯದಲ್ಲಿ ನಿಕಟವಾಗಿ ಪ್ರತಿಬಿಂಬಿಸುತ್ತದೆ. ಹಿಂದಿನ ಚುನಾವಣೆಗಳಲ್ಲಿ ಟ್ರಂಪ್ ಅವರನ್ನು ಯಶಸ್ಸಿನತ್ತ ಮುನ್ನಡೆಸಿದ್ದ ಸಂಪ್ರದಾಯವಾದಿ ನೆಲೆಯನ್ನು ಟ್ಯಾಪ್ ಮಾಡಲು ಅವರು ಪ್ರಯತ್ನಿಸಿದರು.

ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

“ಈ ಕ್ಷಣದಿಂದ ನಾನು ಅಧ್ಯಕ್ಷೀಯ ಪ್ರಚಾರವನ್ನು ಅಮಾನತುಗೊಳಿಸಲಿದ್ದೇನೆ. ವಿಜಯಕ್ಕಾಗಿ ನಾನು ಡೊನಾಲ್ಡ್ ಟ್ರಂಪ್ ಅವರನ್ನು ಅಭಿನಂದಿಸುತ್ತೇನೆ. ಈಗ ಅವರು ಅಧ್ಯಕ್ಷರಾಗುವ ಸ್ಪರ್ಧೆಯಲ್ಲಿ ನನ್ನ ಸಂಪೂರ್ಣ ಅನುಮೋದನೆ ಹೊಂದಿರುತ್ತಾರೆ” ಎಂದು ರಾಮಸ್ವಾಮಿ ಹೇಳಿದರು. ರಾಮಸ್ವಾಮಿ ಈ ಹಿಂದೆ ಟ್ರಂಪ್ ಅವರನ್ನು ʼ21ನೇ ಶತಮಾನದ ಅತ್ಯುತ್ತಮ ಅಧ್ಯಕ್ಷʼ ಎಂದು ಹೊಗಳಿದ್ದರು.

ಅಮೆರಿಕದ ಅತ್ಯಂತ ಹಳೇ ಪಕ್ಷವಾಗಿರುವ ರಿಪಬ್ಲಿಕನ್​ ಪಾರ್ಟಿ ಸದಸ್ಯರಾಗಿರುವ ವಿವೇಕ ರಾಮಸ್ವಾಮಿ ಅವರು ಈ ಹಿಂದೆ ಮಾಧ್ಯಮದೊಂದಿಗೆ ಮಾತನಾಡುತ್ತ, “ಅಮೆರಿಕ ದೇಶದ ಆದರ್ಶಗಳನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ನಾನು ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಿ, ಗೆಲ್ಲಲು ಬಯಸುತ್ತೇನೆ ಎಂದು ಹೇಳಿದ್ದರು.
ವಿವೇಕ​ ರಾಮಸ್ವಾಮಿಯವರು ಚಿಕ್ಕವಯಸ್ಸಿನಲ್ಲಿಯೇ ಅಮೆರಿಕದಲ್ಲಿ ಪ್ರಭಾವಿ ವ್ಯಕ್ತಿ ಎಂದು ಎನಿಸಿಕೊಂಡವರು. ಅವರ ತಂದೆ-ತಾಯಿ ಮೂಲತಃ ಕೇರಳದವರಾಗಿದ್ದು, ಅಮೆರಿಕಕ್ಕೆ ವಲಸೆ ಬಂದವರು. ಆದರೆ, ವಿವೇಕ ರಾಮಸ್ವಾಮಿ ಅವರು ಅಮೆರಿಕದಲ್ಲಿಯೇ ಜನಿಸಿದವರು ಹಾಗೂ ಬೆಳೆದವರು. ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement