ಪ್ರಧಾನಿ ಮೋದಿ ಪದವಿ ವಿವಾದ: ಅರವಿಂದ ಕೇಜ್ರಿವಾಲ್, ಸಂಜಯ ಸಿಂಗ್ ವಿರುದ್ಧದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ತಡೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಪದವಿಗೆ ಸಂಬಂಧಿಸಿದ ಹೇಳಿಕೆಗಳಿಗಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಸಂಸದ ಸಂಜಯ್ ಸಿಂಗ್ ವಿರುದ್ಧ ಹೂಡಲಾಗಿದ್ದ ಮಾನನಷ್ಟ ಮೊಕದ್ದಮೆಗೆ ಸುಪ್ರೀಂ ಕೋರ್ಟ್ ಮಂಗಳವಾರ ತಡೆ ನೀಡಿದೆ.
ಈ ವೇಳೆ ಮಧ್ಯಂತರ ಪರಿಹಾರ ಕೋರಿ ಈ ಇಬ್ಬರೂ ಸಲ್ಲಿಸಿರುವ ಮನವಿಯನ್ನು ತ್ವರಿತವಾಗಿ ವಿಲೇವಾರಿ ಮಾಡುವಂತೆ ನ್ಯಾಯಮೂರ್ತಿಗಳಾದ ಬಿ.ಆರ್‌. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ಪೀಠ ತಿಳಿಸಿದೆ. ಪ್ರಕರಣವನ್ನು ಗುಜರಾತ್ ರಾಜ್ಯದ ಹೊರಗಿನ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸುವಂತೆ ಕೋರಿ ಸಿಂಗ್ ಅವರು ಸಲ್ಲಿಸಿದ್ದರು. ಆದರೆ ವರ್ಗಾವಣೆ ಮನವಿಯನ್ನು ಅದು ಪುರಸ್ಕರಿಸಿಲ್ಲ.

ಮೋದಿ ಅವರ ಪದವಿಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ನೀಡದ ಹಿನ್ನೆಲೆಯಲ್ಲಿ ಈ ಇಬ್ಬರೂ ತನ್ನ ಘನತೆಗೆ ಹಾನಿ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಗುಜರಾತ್‌ ವಿಶ್ವವಿದ್ಯಾಲಯ ಮೊಕದ್ದಮೆ ಹೂಡಿದೆ. ಪ್ರಧಾನಿ ಮೋದಿ ಅವರ ಪದವಿಯ ವಿವರಗಳನ್ನು ಒದಗಿಸುವಂತೆ ಸೂಚಿಸಿದ್ದ ಮುಖ್ಯ ಮಾಹಿತಿ ಆಯೋಗದ (ಸಿಐಸಿ) ಆದೇಶವನ್ನು ಹೈಕೋರ್ಟ್ ಈ ಹಿಂದೆ ಬದಿಗೆ ಸರಿಸಿತ್ತು.

ಪ್ರಮುಖ ಸುದ್ದಿ :-   ʼಆಪರೇಷನ್ ಸಿಂಧೂರʼದಲ್ಲಿ ಭಾರತಕ್ಕೆ ಭಾರಿ ಯಶಸ್ಸು; ತನ್ನ ಸೋಲು ಮುಚ್ಚಿಕೊಳ್ಳಲು ಸುಳ್ಳು ಕಥೆ ಕಟ್ಟಿದ ಪಾಕ್‌ ಸೇನೆ : ನೂರೀನ್ ನಿಯಾಝಿ

ಮಾಹಿತಿ ಹಕ್ಕು ಕಾಯಿದೆ ಅಡಿಯಲ್ಲಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸಿಐಸಿ ಕೋರಲಾಗಿರುವ ವಿವರಗಳನ್ನು ಬಹಿರಂಗಪಡಿಸುವಂತೆ ಗುಜರಾತ್ ವಿಶ್ವವಿದ್ಯಾಲಯಕ್ಕೆ ಆದೇಶಿಸಿತ್ತು. ಈ ನಿರ್ಧಾರ ಪ್ರಶ್ನಿಸಿ ವಿವಿ, ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿತ್ತು. ಮೇಲ್ಮನವಿ ಪುರಸ್ಕರಿಸಿದ್ದ ಹೈಕೋರ್ಟ್‌ ಆರ್‌ಟಿಐ ಕಾಯಿದೆಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಕೇಜ್ರಿವಾಲ್‌ಗೆ ₹25,000 ದಂಡ ವಿಧಿಸಿತ್ತು. ಈ ತೀರ್ಪು ಮರು ಪರಿಶೀಲನೆ ಕೋರಿ ಕೇಜ್ರಿವಾಲ್‌ ಅರ್ಜಿ ಸಲ್ಲಿಸಿದ್ದರು.
ಮರುಪರಿಶೀಲನಾ ಅರ್ಜಿಯನ್ನುಹೈಕೋರ್ಟ್‌ ಏಕಸದಸ್ಯ ಪೀಠ ತಿರಸ್ಕರಿಸಿತ್ತು. ಏಕಸದಸ್ಯ ಪೀಠದ ತೀರ್ಪನ್ನು ಪ್ರಶ್ನಿಸಿ ಕೇಜ್ರಿವಾಲ್ 2023ರ ಡಿಸೆಂಬರ್‌ನಲ್ಲಿ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಸಲ್ಲಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement