ಗೋಕರ್ಣ ಮಹಾಬಲೇಶ್ವರ ದೇಗುಲ ಮೇಲ್ವಿಚಾರಣಾ ಸಮಿತಿಯ ಸದಸ್ಯರ ಬದಲಾವಣೆ: ರಾಜ್ಯ ಸರ್ಕಾರದ ಆದೇಶ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು : ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಚಟುವಟಿಕೆಗಳ ನಿರ್ವಹಣೆಗಾಗಿ ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ರಚಿಸಲಾಗಿದ್ದ ಮೇಲ್ವಿಚಾರಣಾ ಸಮಿತಿಯ ನಾಲ್ವರು ಸದಸ್ಯರನ್ನು ತೆಗೆದುಹಾಕಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ. ಮೇಲ್ವಿಚಾರಣಾ ಸಮಿತಿಯಲ್ಲಿದ್ದ ಇಬ್ಬರು ಉಪಾಧಿವಂತರಯ ಹಾಗೂ ಇಬ್ಬರು ವಿದ್ವಾಂಸರನ್ನು ಬದಲಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ರದುಪಡಿಸಿದೆ.
ಮಠದ ಮೇಲ್ವಿಚಾರಣಾ ಸಮಿತಿಯ ನಾಲ್ವರು ಸದಸ್ಯರನ್ನು ಬದಲಿಸಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು 2023ರ ಜುಲೈ 12ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಶಿವಮೊಗ್ಗ ಜಿಲ್ಲೆಯ ಹೊಸನಗರದ ಶ್ರೀರಾಮಚಂದ್ರಾಪುರ ಮಠ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿದೆ.

“ಸರ್ಕಾರ ಬದಲಾಗಿದೆ ಎಂದ ಮಾತ್ರಕ್ಕೆ ಸುಪ್ರೀಂ ಕೋರ್ಟ್‌ ಆದೇಶವನ್ನು ಧಿಕ್ಕರಿಸಲಾಗದು. ಸರ್ಕಾರ ಬದಲಾದ ಮಾತ್ರಕ್ಕೆ ಹಿಂದಿನ ಸರ್ಕಾರ ಮಾಡಿದ ಎಲ್ಲವನ್ನೂ ರದ್ದುಪಡಿಲಾಗದು. ಇದು ಸರ್ಕಾರದ ಕಾರ್ಯ/ನಿರ್ಧಾರ ಮುಂದುವರಿಕೆ ತತ್ವಕ್ಕೆ ವಿರುದ್ಧವಾಗಿದೆ” ಎಂದು ನ್ಯಾಯಾಲಯ ಹೇಳಿದೆ.
“ಹಿಂದಿನ ಸರ್ಕಾರವು ಶಾಸನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರೆ ಅದನ್ನು ಬದಲಿಸಬಹುದು. ರಾಜ್ಯ ಸರ್ಕಾರವು 2023ರ ಜುಲೈ 12ರಂದು ಹೊರಡಿಸಿರುವ ತಿದ್ದುಪಡಿಯಲ್ಲಿ ಲೋಪ ಇದೆ ಎಂದು ನ್ಯಾಯಾಲಯಕ್ಕೆ ಅರಿವಾಗಿದೆ. ರಾಜ್ಯ ಸರ್ಕಾರದ ನಡೆ ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸುವ ಕ್ರಮವಾಗಿರುವುದರಿಂದ ಅದನ್ನು ರದ್ದುಪಡಿಸಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ” ಎಂದು ನ್ಯಾಯಾಲಯ ತಿಳಿಸಿದೆ.

ಪ್ರಮುಖ ಸುದ್ದಿ :-   ಪೆನ್‌ಡ್ರೈವ್ ಕೇಸ್‌ನಲ್ಲಿ ಎಚ್‌.ಡಿ. ಕುಮಾರಸ್ವಾಮಿ ಹೆಸರು ಹೇಳಲು ನನಗೆ 100 ಕೋಟಿ ರೂ. ಆಫರ್ ನೀಡಿದ್ದ ಡಿ.ಕೆ.ಶಿವಕುಮಾರ : ದೇವರಾಜೇ ಗೌಡ ಸ್ಫೋಟಕ ಹೇಳಿಕೆ

ಸುಪ್ರೀಂ ಕೋರ್ಟ್‌ ನಿರ್ದೇಶನದಂತೆ ಗೋಕರ್ಣ ದೇಗುಲಕ್ಕೆ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಶ್ರೀಕೃಷ್ಣ ಅವರ ನೇತೃತ್ವದಲ್ಲಿ ವೇದಮೂರ್ತಿ ದತ್ತಾತ್ರೇಯ, ಮಹಾಬಲ ಉಪಾಧ್ಯ, ಮುರಳೀಧರ ಪ್ರಭು, ವಿದ್ವಾನ್‌ ಪರಮೇಶ್ವರ ಅವರನ್ನು ಒಳಗೊಂಡ ಮೇಲ್ವಿಚಾರಣಾ ಸಮಿತಿಯನ್ನು 2021ರ ಮೇ 4ರಂದು ಹಿಂದಿನ ಬಿಜೆಪಿ ಸರ್ಕಾರ ರಚಿಸಿತ್ತು. ಈ ನೇಮಕಾತಿಯನ್ನು ಕಾಂಗ್ರೆಸ್‌ ಸರ್ಕಾರವು ಬದಲಿಸಿ, ನಾಲ್ವರು ಸದಸ್ಯರ ಬದಲಿಗೆ ಬೇರೆಯವರನ್ನು ನೇಮಕ ಮಾಡಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಅರ್ಜಿದಾರರ ಪರ ವಕೀಲ ಪಿ ಎನ್‌ ಮನಮೋಹನ ಅವರು “ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಸಮಿತಿಗೆ ಸದಸ್ಯರನ್ನು ನಾಮ ನಿರ್ದೇಶನ ಮಾಡಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಅನುಮತಿ ಪಡೆಯದೇ ಸರ್ಕಾರವು ಸದಸ್ಯರನ್ನು ತೆಗೆದು ಹಾಕಲಾಗದು” ಎಂದು ವಾದಿಸಿದ್ದರು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಎಜಿ ಶಶಿಕಿರಣ ಶೆಟ್ಟಿ ಅವರು “ಸಮಿತಿಯಲ್ಲಿ ಮಾರ್ಪಾಡು ಮಾಡುವ ಅಧಿಕಾರವನ್ನು ಸರ್ವೋಚ್ಚ ನ್ಯಾಯಾಲಯದ ಆದೇಶದಲ್ಲಿ ನಿರ್ಬಂಧಿಸಲಾಗಿಲ್ಲ. ರಾಜ್ಯ ಸರ್ಕಾರವು ಸದಸ್ಯರನ್ನು ಬದಲಿಸುವ ಅಧಿಕಾರ ಹೊಂದಿದೆ. ಸರ್ಕಾರದ ಆದೇಶದಿಂದ ಬಾಧಿತರಾಗಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಬಹುದು” ಎಂದು ವಾದಿಸದರು.

ಪ್ರಮುಖ ಸುದ್ದಿ :-   ಪ್ರಧಾನಿಯವರು ಪತ್ರಿಕಾಗೋಷ್ಠಿಗಳನ್ನು ಏಕೆ ನಡೆಸುವುದಿಲ್ಲ? : ಹೆಚ್ಚು ಸಲ ಕೇಳಿದ ಪ್ರಶ್ನೆಗೆ ಕೊನೆಗೂ ಉತ್ತರಿಸಿದ ನರೇಂದ್ರ ಮೋದಿ

ಪ್ರಕರಣದ ಹಿನ್ನೆಲೆ
ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಡಿನೋಟಿಫೈ ಪ್ರಕರಣದ ಸಿವಿಲ್‌ ದಾವೆಯಲ್ಲಿ ಸುಪ್ರೀಂ ಕೋರ್ಟ್‌ 2021ರ ಏಪ್ರಿಲ್‌ 19ರಂದು ಮಧ್ಯಂತರ ಆದೇಶ ನೀಡಿತ್ತು. ಈ ಆದೇಶದ ಅನುಸಾರ ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ 2021ರ ಮೇ 4ರಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ ಎನ್‌ ಕೃಷ್ಣ ನೇತೃತ್ವದಲ್ಲಿ ಅಧ್ಯಕ್ಷರನ್ನೂ ಒಳಗೊಂಡಂತೆ 8 ಸದಸ್ಯರ ಮೇಲ್ವಿಚಾರಣಾ ಸಮಿತಿ ರಚಿಸಲಾಗಿತ್ತು.
ಈ ಸಮಿತಿಯಲ್ಲಿದ್ದ ಉಪಾಧಿವಂತರಾದ ಮಹಾಬಲ ಉಪಾಧ್ಯ, ದತ್ತಾತ್ರೇಯ ಹಿರೇಗಂಗೆ ಮತ್ತು ವಿದ್ವಾಂಸರಾದ ಪರಮೇಶ್ವರ ಮಾರ್ಕಾಂಡೆ ಹಾಗೂ ಮುರಳೀಧರ ಪ್ರಭು ಅವರನ್ನು ಬದಲಾವಣೆ ಮಾಡಿ ರಾಜ್ಯ ಸರ್ಕಾರ, 2023ರ ಜುಲೈ 12ರಂದು ಆದೇಶ ಹೊರಡಿಸಿತ್ತು. ಅಲ್ಲದೇ ಉಪಾಧಿವಂತರ ಸ್ಥಾನಕ್ಕೆ ಗಣಪತಿ ಶಿವರಾಮ ಹಿರೇಭಟ್ಟ, ಸುಬ್ರಹ್ಮಣ್ಯ ಚಂದ್ರಶೇಖರ ಅಡಿ ಹಾಗೂ ವಿದ್ವಾಂಸರ ಸ್ಥಾನಕ್ಕೆ ಪರಮೇಶ್ವರ ಸುಬ್ರಹ್ಮಣ್ಯ ಪ್ರಸಾದ ರಮಣಿ ಹಾಗೂ ಮಹೇಶ ಗಣೇಶ ಹಿರೇಗಂಗೆ ಅವರನ್ನು ನಾಮ ನಿರ್ದೇಶನ ಮಾಡಿತ್ತು. ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement