ಜಮಖಂಡಿ: ಶಾಲಾ ವಾರ್ಷಿಕೋತ್ಸವ ಮುಗಿಸಿ ವಾಪಸಾಗುವ ವೇಳೆ ಅಪಘಾತ ; 4 ವಿದ್ಯಾರ್ಥಿಗಳು ಸಾವು

ಬಾಗಲಕೋಟೆ : ಶಾಲಾ ವಾಹನ ಮತ್ತು ಟ್ರ್ಯಾಕ್ಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮಕ್ಕಳು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಹಳಿ ನಡೆದಿದೆ ಎಂದು ವರದಿಯಾಗಿದೆ.
ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದು, ಉಳಿದ ಮೂವರು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾರೆ‌. ಎಂಟಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಗಾಯ‌ವಾಗಿದೆ. ಮೃತ ವಿದ್ಯಾರ್ಥಿಗಳನ್ನು ಶ್ವೇತಾ ಪಾಟೀಲ (16) , ಸಾಗರ ಕಡಕೋಳ (17), ಗೋವಿಂದ ಜಂಬಗಿ (13), ಬಸವರಾಜ ಕೊಟಗಿ (17) ಎಂದು ಗುರುತಿಸಲಾಗಿದೆ.

ಅಲಗೂರು ಗ್ರಾಮದ ವರ್ಧಮಾನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಸಿ ಊರಿಗೆ ಮರಳುತ್ತಿದ್ದಾಗ ತಡರಾತ್ರಿ 12 ಗಂಟೆಯ ಸುಮಾರಿಗೆ ಅಪಘಾತವಾಗಿದೆ ಎಂದು ಹೇಳಲಾಗಿದೆ. ಗಾಯಾಳುಗಳನ್ನು ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಬಾಗಲಕೋಟೆ ಎಸ್‌ಪಿ ಘಟನಾ ಸ್ಥಳ ಹಾಗೂ ಗಾಯಾಳುಗಳು ದಾಖಲಾದ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement