ಹೇಮಂತ್ ಸೊರೇನ್ ಇ.ಡಿ. ವಶಕ್ಕೆ; ಜಾರ್ಖಂಡ್ ನೂತನ ಸಿಎಂ ಆಗಿ ಚಂಪೈ ಸೊರೇನ್ ಆಯ್ಕೆ

ರಾಂಚಿ : ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರನ್ನು ಬುಧವಾರ ಸಂಜೆ ಜಾರಿ ನಿರ್ದೇಶನಾಲಯವು ಅವರು ಹುದ್ದೆ ತ್ಯಜಿಸಿದ ಕೆಲವೇ ನಿಮಿಷಗಳಲ್ಲಿ ಕಸ್ಟಡಿಗೆ ತೆಗೆದುಕೊಂಡಿತು.  ಅವರ  ರಾಜೀನಾಮೆ ನಂತರ ಅವರ ಆಪ್ತ ಹಾಗೂ ಪಕ್ಷದ ಹಿರಿಯ ನಾಯಕ ಚಂಪೈ ಸೊರೇನ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ.
ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡಿದ ಕೆಲವೇ ನಿಮಿಷಗಳಲ್ಲಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಹೇಮಂತ್ ಸೊರೇನ್ ಅವರನ್ನು ಬಂಧಿಸಲಾಯಿತು.
ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿರುವ ಹೇಮಂತ ಸೊರೇನ್‌ ರಾಜೀನಾಮೆ ನೀಡಿದ ನಂತರವೇ ಬಂಧನ ಮೆಮೋಗೆ ಸಹಿ ಹಾಕುವುದಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
₹ 600 ಕೋಟಿ ಭೂ ಹಗರಣಕ್ಕೆ ಸಂಬಂಧಿಸಿದ ಆಪಾದಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಏಳು ಸಮನ್ಸ್‌ಗಳಿಗೆ ಹಾಜರಾಗದೆ ತಪ್ಪಿಸಿಕೊಂಡಿದ್ದ ಸೊರೇನ್, ಕೆಲ ಸಮಯದಿಂದ ಬಂಧನದ ನಿರೀಕ್ಷೆಯಲ್ಲಿದ್ದರು.

ಬುಧವಾರ ರಾಜಭವನಕ್ಕೆ ತೆರಳಿದ ಸೊರೇನ್ ಅಲ್ಲಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರಿಗೆ ರಾಜೀನಾಮೆ ನೀಡಿದ್ದಾರೆ. ಬುಧವಾರ ಮಧ್ಯಾಹ್ನ ರಾಂಚಿಯಲ್ಲಿರುವ ಹೇಮಂತ್ ಸೊರೆನ್ ಮನೆಗೆ ಆಗಮಿಸಿದ ಇಡಿ ಅಧಿಕಾರಿಗಳು ಸತತ ವಿಚಾರಣೆ ನಡೆಸಿದ್ದರು. ಸುದೀರ್ಘ ವಿಚಾರಣೆ ಬಳಿಕ ಹೇಮೆಂತ್ ಸೊರೇನ್ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಕಾರಣ ಬಂಧನಕ್ಕೂ ಮೊದಲು ರಾಜ್ಯಪಾಲರ ಅನುಮತಿ ಕಡ್ಡಾಯವಾಗಿದೆ. ಹೀಗಾಗಿ ಇ.ಡಿ. ಅಧಿಕಾರಿಗಳು ಎಲ್ಲಾ ಅನುಮತಿ ಪತ್ರದೊಂದಿಗೆ ಸೊರೇನ್ ನಿವಾಸಕ್ಕೆ ತೆರಳಿ ವಿಚಾರಣೆ ನಡೆಸಿ ಇದೀಗ ತಮ್ಮ ವಶಕ್ಕೆ ಪಡೆದಿದ್ದಾರೆ.
ಭೂಹಗರಣ ಸಂಬಂಧ ಪ್ರಕರಣದಡಿಯಲ್ಲಿ ಸತತ 7 ಗಂಟೆಗಳ ವಿಚಾರಣೆ ನಡೆಸಿದ ಇ.ಡಿ. ಅಧಿಕಾರಿಗಳು ಹೇಮಂತ್ ಸೊರೇನ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಇಡಿ ಅಧಿಕಾರಿಗಳು ನೇರವಾಗಿ ರಾಜ್ಯಪಾಲರ ಭವನಕ್ಕೆ ಕರೆದೊಯ್ದಿದ್ದು, ಈ ವೇಳೆ ಹೇಮಂತ್ ಸೊರೇನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಂಗಳವಾರ, ಅವರು ಆಡಳಿತಾರೂಢ ಮೈತ್ರಿಕೂಟದ ಶಾಸಕರೊಂದಿಗೆ ಸಭೆ ನಡೆಸಿದರು, ಅಲ್ಲಿ ಅವರ ಉತ್ತರಾಧಿಕಾರಿಯ ಬಗ್ಗೆ ಚರ್ಚಿಸಲಾಯಿತು.

ಪ್ರಮುಖ ಸುದ್ದಿ :-   ಸೋಮವಾರಪೇಟೆ : ವಿದ್ಯಾರ್ಥಿನಿ ತಲೆ ಕಡಿದು ರುಂಡದೊಂದಿಗೆ ಪರಾರಿಯಾಗಿದ್ದ ಆರೋಪಿ ಅರೆಸ್ಟ್

.ಈ ಬೆಳವಣಿಗೆ ಬೆನ್ನಲ್ಲೇ ಇತ್ತ ಜಾರ್ಖಂಡ್ ಮುಕ್ತಿ ಮೋರ್ಚಾ, ಕಾಂಗ್ರೆಸ್ ಸೇರಿದಂತೆ ಮೈತ್ರಿ ಪಕ್ಷಗಳು ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ವಾನುತಮತದಿಂದ ಚಂಪೈ ಸೊರೇನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಸಾರಿಗೆ ಸಚಿವರಾಗಿರುವ ಚಂಪೈ ಸೊರೇನ್ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ. ಅವರಿಗೆ 41 ಶಾಸಕರ ಬೆಂಬಲ ಇದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಹುದ್ದೆಗೆ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಅವರು ಆಯ್ಕೆಯಾಗಲಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದಕ್ಕೆ ಪಕ್ಷದಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಹೇಮಂತ್ ಸೊರೇನ್ ಕುಟುಂಬಸ್ಥರೇ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ಹೇಮಂತ್ ಅವರು ತಮ್ಮ ಆಪ್ತ ಹಾಗೂ ಸಂಪುಟದ ಹಿರಿಯ ಸಚಿವ ಚಂಪೈ ಸೊರೇನ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ.
ಚಂಪೈ ಸೊರೇನ್ ಅವರು ರಾಜ್ಯಪಾಲರ ಭೇಟಿ ಮಾಡಿ ಪ್ರಮಾಣ ವಚನಕ್ಕೆ ಅನುಮತಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement