ಫೆಬ್ರವರಿ 22ರಂದು ಸ್ವರ್ಣವಲ್ಲೀ ಮಠದಲ್ಲಿ ಶಿಷ್ಯ ಸ್ವೀಕಾರ ಸಮಾರಂಭ : ಫೆ. 18 ರಿಂದ ವಿವಿಧ ಕಾರ್ಯಕ್ರಮಗಳು

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ ಶಿಷ್ಯ ಸ್ವೀಕಾರ ಮಹೋತ್ಸವ ಸ್ವರ್ಣವಲ್ಲೀ ಮಠದಲ್ಲಿ ಫೆ. ೨೨ರಂದು ನಡೆಯಲಿದ್ದು, ಈ ನಿಮಿತ್ತ ಫೆ.೧೮ರಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಗಳನ್ನು ಆಯೋಜಿಸಲಾಗಿದೆ ಎಂದು ಸ್ವರ್ಣವಲ್ಲೀ ಮಹಾ ಸಂಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ ಹೇಳಿದರು.
ಇಲ್ಲಿನ ಯೋಗ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಧರ್ಮಸಭೆಗಳು, ಗ್ರಂಥ ಲೋಕಾರ್ಪಣೆ, ಪ್ರವಚನ, ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಶಂಕರಾಚಾರ್ಯರ ಪರಂಪರೆಯ ಶ್ರೀ ಸ್ವರ್ಣವಲ್ಲೀ ಮಠದಲ್ಲಿ ೫೪ನೇ ಯತಿಗಳಾಗಿರುವ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಮಠದ ಪೀಠಾಧಿಪತಿಗಳಾಗಿ ೩೩ ವರ್ಷಗಳಿಂದ ಧಾರ್ಮಿಕವಾಗಿ ಹಾಗೂ ಸಮಾಜಮುಖಿಯಾಗಿ ಕಾರ್ಯಕ್ರಮಗಳ ಮೂಲಕ ನಾಡಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ಸ್ವರ್ಣವಲ್ಲೀ ಪೀಠಕ್ಕೆ ಉತ್ತರಾಧಿಕಾರಿಗಳ ಅನ್ವೇಷಣೆ ನಡೆಸಲಾಗಿತ್ತು. ಈಗ ಯಲ್ಲಾಪುರ ತಾಲೂಕಿನ ಈರಾಪುರ ಗಂಗೆಮನೆಯ ವೇದಮೂರ್ತಿ ನಾಗರಾಜ ಭಟ್ಟ ಅವರನ್ನು ಶಿಷ್ಯರಾಗಿ ಸ್ವೀಕರಿಸಲು ತೀರ್ಮಾನಿಸಲಾಗಿದ್ದು, ಶಿಷ್ಯ ಸ್ವೀಕಾರ ಮಹೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ ಎಂದರು.

ಧಾರ್ಮಿಕ ಕಾರ್ಯಕ್ರಮಗಳು:
ಶಿಷ್ಯ ಸ್ವೀಕಾರ ಮಹೋತ್ಸವದ ಪ್ರಥಮ ದಿನದ ಕಾರ್ಯಕ್ರಮ ಫೆ.೧೮ರಂದು ನಡೆಯಲಿದ್ದು, ಅಂದು ಗಣಪತಿ ಪೂಜೆ, ಗೋದಾನ, ಕೂಷ್ಮಾಂಡ ಹವನ, ಒಂದು ಲಕ್ಷ ಗಾಯತ್ರೀ ಜಪ, ದಶಾಂಶ ಹವನ ನಡೆಯಲಿದೆ. ವೇದಗಳ ಪಾರಾಯಣ, ಮಹಾರುದ್ರ ಜಪ ಪ್ರಾರಂಭವಾಗಲಿದೆ. ೧೯ರಂದು ಮಹಾರುದ್ರ ಜಪ, ಹವನ, ೩.೨೦ಲಕ್ಷ ಅಕ್ಷರಾಯುತ ಶ್ರೀಲಕ್ಷ್ಮೀನೃಸಿಂಹ ಮಂತ್ರ ಜಪ ಪ್ರಾರಂಭವಾಗಲಿದೆ. ೨೦ರಂದು ಗಣಪತ್ಯಥರ್ವ ಶೀರ್ಷ ಜಪ, ಹವನ, ಲಕ್ಷ್ಮೀ ನೃಸಿಂಹಜಪ ನಡೆಯಲಿದೆ. ಫೆ.೨೧ರಂದು ಸನ್ಯಾಸ ಗ್ರಹಣ ಸಂಕಲ್ಪ, ಗಣೋತೊ ಪೂಜಾ, ನಾಂದಿ ಶ್ರಾದ್ಧ, ಮಾತೃಕಾಪೂಜಾ, ಸಾವಿತ್ರೀ ಪ್ರವೇಶ, ಶತಚಂಡಿ ಹವನ, ವಿರಜಾ ಹೋಮ ಮತ್ತಿತರ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.
೨೨ಕ್ಕೆ ಯೋಗ ಪಟ್ಟ:
ಫೆ.೨೨ರಂದು ೧೧ ಯತಿಗಳ ಸಮ್ಮುಖದಲ್ಲಿ ಯೋಗ ಪಟ್ಟದ ಕಾರ್ಯಕ್ರಮಗಳು ನಡೆಯಲಿದೆ. ಜಲಾಶಯಗಮನ, ಪ್ರೇಷೋಚ್ಚಾರಣೆ, ಕಾಷಾಯ ವಸ್ತ್ರ ಧಾರಣೆ, ಪ್ರಣವ ಮಹಾವಾಕ್ಯೋಪದೇಶ, ನಾಮಕರಣ, ಪರ್ಯಂ ಕಶೌಚ, ಯೋಗ ಪಟ್ಟ, ಬ್ರಹ್ಮವಿದ್ಯಾಶೀರ್ವಚನ, ಅಕ್ಷರಾಯುತ ಶ್ರೀಲಕ್ಷ್ಮೀ ನೃಸಿಂಹ ಮಂತ್ರ ಹವನ ಮೊದಲಾದ ಕಾರ್ಯಕ್ರಮಗಳು ನಡೆಯಲಿವೆ.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

ಸಭಾ ಕಾರ್ಯಕ್ರಮಗಳು…
ಮಠದ ಸುಧರ್ಮಾ ಸಭಾಭವನದಲ್ಲಿ ಫೆ. ೧೮ರಂದು ಮಧ್ಯಾಹ್ನ ೩:೩೦ ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶ್ರೀಗಳ ಪೀಠಾರೋಹಣದಿಂದ ಈ ವರೆಗಿನ ಪ್ರಮುಖ ಸನ್ನಿವೇಶಗಳ ಚಿತ್ರ ಸಂಪುಟ `ಸ್ವರ್ಣಶ್ರೀ’ ಗ್ರಂಥ ಲೋಕಾರ್ಪಣೆಗೊಳ್ಳಲಿದೆ. ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಮಾಜಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಅನಂತಕುಮಾರ ಹೆಗಡೆ, ಶಾಸಕರಾದ ಆರ್.ವಿ. ದೇಶಪಾಂಡೆ, ಶಿವರಾಮ ಹೆಬ್ಬಾರ, ಭೀಮಣ್ಣ ನಾಯ್ಕ, ದಿನಕರ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಶಾಂತಾರಾಮ ಸಿದ್ದಿ, ಗಣಪತಿ ಉಳ್ವೇಕರ ಪಾಲ್ಗೊಳ್ಳಲಿದ್ದಾರೆ.
ಫೆ. ೨೧ರಂದು ಮಧ್ಯಾಹ್ನ ೩ ಗಂಟೆಗೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ಸ್ವರ್ಣವಲ್ಲೀ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಚಾಮರಾಜಪೇಟೆಯ ಕೂಡ್ಲಿ ಶೃಂಗೇರಿ ಮಠದ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ, ಶಿರಳಗಿಯ ಶ್ರೀ ಬ್ರಹ್ಮಾನಂದ ಭಾರತೀ ಸ್ವಾಮೀಜಿ, ಹೊಳೆನರಸೀಪುರದ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಬ್ರಹ್ಮಾನಂದ ಸ್ವಾಮೀಜಿ ನಿದಿಧ್ಯಾಸನ ಕುರಿತು ಪ್ರವಚನ ನೀಡಲಿದ್ದಾರೆ. `ಆಲೋಕಯಾಂಬ ಲಲಿತೇ’ ಗ್ರಂಥವನ್ನು ಪ್ರಕಾಶಾನಂದೇಂದ್ರ ಸ್ವಾಮೀಜಿ ಲೋಕಾರ್ಪಣೆ ಮಾಡಲಿದ್ದಾರೆ. `ಯತಿಧರ್ಮ ಮತ್ತು ಲೋಕಧರ್ಮ’ ಕುರಿತು ಮೈಸೂರಿನ ಭಾರತೀ ಯೋಗಧಾಮದ ಯೋಗಾಚಾರ್ಯ ಕೆ.ಎಲ್.ಶಂಕರನಾರಾಯಣ ಜೋಯಿಸ್ ಉಪನ್ಯಾಸ ನೀಡಲಿದ್ದಾರೆ.

ಫೆ. ೨೨ರಂದು ಮಧ್ಯಾಹ್ನ ೩:೩೦ ಘಂಟೆಗೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ನಡೆಯುವ ಧರ್ಮಸಭಾ ಕಾರ್ಯಕ್ರಮದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. `ಯೋಗವಾಸಿಷ್ಠ’ ಪ್ರಥಮ ಸಂಪುಟ ಗ್ರಂಥ ಬಿಡುಗಡೆಗೊಳ್ಳಲಿದೆ. ಮೈಸೂರಿನ ಕೃಷ್ಣರಾಜನಗರದ ಯೋಗಾನಂದೇಶ್ವರ ಸರಸ್ವತೀ ಮಠದ ಶ್ರೀ ಶಂಕರ ಭಾರತೀ ಸ್ವಾಮೀಜಿ ಯಡತೊರೆ, ಹರಿಹರಪುರದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ, ಕೂಡ್ಲಿ ಶೃಂಗೇರಿ ಮಠದ ವಿದ್ಯಾವಿಶ್ವೇಶ್ವರ ಭಾರತೀ ಸ್ವಾಮೀಜಿ, ಹೊಳೆನರಸೀಪುರದ ಪ್ರಕಾಶಾನಂದೇಂದ್ರ ಸರಸ್ವತೀ ಸ್ವಾಮೀಜಿ, ಕಾಸರಗೋಡು ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀಮನ್ನೆಲೆಮಾವಿನಮಠದ ಮಾಧವಾನಂದ ಭಾರತೀ ಸ್ವಾಮೀಜಿ, ತುರುವೇಕೆರೆಯ ಪ್ರಣವಾನಂದ ತೀರ್ಥ ಸ್ವಾಮೀಜಿ, ತಮಿಳುನಾಡಿನ ಕಾಂಚಿಪುರಂನ ಆತ್ಮಬೋಧ ತೀರ್ಥ ಸ್ವಾಮೀಜಿ, ಅಂಜನಾನಂದ ತೀರ್ಥ ಸ್ವಾಮೀಜಿ, ಸ್ವರ್ಣವಲ್ಲೀ ಮಠದ ನೂತನ ಶ್ರೀಗಳ ದಿವ್ಯ ಉಪಸ್ಥಿತಿ ಇರಲಿದೆ. ಕೇಂದ್ರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ, ಇನ್ನೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ಫೆ. ೧೮ ರಿಂದ ೨೨ರ ವರೆಗೆ ಪ್ರತಿನಿತ್ಯ ೫.೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. ಫೆ. ೧೮ರಂದು ನಾರಾಯಣ ದಾಸರ ಕೀರ್ತನೆ, ಫೆ. ೧೯ ರಂದು ವಿಶೇಷ ಭಜನಾ ತಂಡಗಳಿಂದ ಭಜನೆ, ಈಶ್ವರ ದಾಸರ ಕೀರ್ತನೆ, ಫೆ. ೨೦ರಂದು ವಿ.ಶಂಕರ ಭಟ್ಟ ಉಂಚಳ್ಳಿಯವರ ಕೀರ್ತನೆ, ಫೆ. ೨೧ರಂದು ೫:೩೦ರಿಂದ ಭಕ್ತಿ ಸಂಗೀತ ನಡೆಯಲಿದೆ. ಗಾಯಕ ಪ್ರಸನ್ನ ಗುಡಿ ಭಕ್ತಿ ಸಂಗೀತ ಪ್ರಸ್ತುತಪಡಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಸಿ.ಎಸ್. ಹೆಗಡೆ, ಕಾರ್ಯದರ್ಶಿ ಜಿ.ವಿ. ಹೆಗಡೆ ಗೊಡ್ವೆಮನೆ, ಪ್ರಮುಖರಾದ ಆರ್.ಎನ್. ಭಟ್ಟ ಸುಗಾವಿ, ಉಮಾಪತಿ ಭಟ್ಟ ಮತ್ತಿಗಾರ, ಎಸ್.ಎನ್. ಭಟ್ಟ ಮತ್ತಿತರರು ಇದ್ದರು.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement