ತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ 62 ಸಾವಿರ ಕೋಟಿಗೂ ಹೆಚ್ಚು ನಷ್ಟ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ರಾಜ್ಯದಿಂದ 4.30 ಲಕ್ಷ ಕೋಟಿ ರೂ.ಗಳಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಆದರೂ ನಮಗೆ ತೆರಿಗೆ ಹಣ ಹಂಚಿಕೆ ಕಡಿತ ಮಾಡಿ ಮೋಸಲ ಮಾಡಲಾಗುತ್ತಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕಕ್ಕೆ 62,098 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸಂಬಂಧ ಇಂದು ಸೋಮವಾರ, ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ರಾಜ್ಯದ ಪಾಲಿನ ತೆರಿಗೆ ಹಣವನ್ನು ನೀಡದ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಫೆಬ್ರವರಿ 7 ರಂದು ದೆಹಲಿಯ ಜಂತರ್​ ಮಂತರ್​​ನಲ್ಲಿ ಧರಣಿ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ಜಿಎಸ್‌ಟಿ ಅವೈಜ್ಙಾನಿಕ ಎಂದು ನಾವು ಹೇಳಿದ್ದೆವು. ಆದರೂ ಅವರು ಜಿಎಸ್‌ಟಿ ಜಾರಿ ಮಾಡಲಾಗಿದೆ. ನಮ್ಮ ತೆರಿಗೆ ಬೆಳವಣಿಗೆ 15% ಇತ್ತು. ನಷ್ಟವಾದರೆ ಪರಿಹಾರದ ರೂಪದಲ್ಲಿ ತುಂಬಿಕೊಡುತ್ತೇವೆ ಎಂದು ಹೇಳಿದ್ದರು. ಜಿಎಸ್ ಟಿ ಪರಿಹಾರವನ್ನು ಜೂನ್ 22ಕ್ಕೆ ನಿಲ್ಲಿಸಿದ್ದರಿಂದ ಅದು ನಮಗೆ ಬರುತ್ತಿಲ್ಲ, ಈಗ ನಾವು 15% ತೆರಿಗೆ ಬೆಳವಣಿಗೆ ತಲುಪಲು ಸಾಧ್ಯ ಆಗುತ್ತಿಲ್ಲ. ಅದಕ್ಕೆ ಜಿಎಸ್ ಟಿ ಪರಿಹಾರ ಮುಂದುವರೆಸಿ ಎಂದು ಹೇಳಿದ್ದೇವೆ. ಕರ್ನಾಟಕದಿಂದ 4.30 ಲಕ್ಷ ಕೋಟಿ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಮಹಾರಾಷ್ಟ್ರದ ನಂತರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ ಎಂದರು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ: ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರಕ್ಕೆ ನಾವು 100 ರೂ. ತೆರಿಗೆ ಕಟ್ಟಿದರೆ ನಮಗೆ ಶೇ. 12-13ರಷ್ಟು ಹಣ ಮಾತ್ರ ವಾಪಸ್ ಬರುತ್ತಿದೆ. 15ನೇ ಹಣಕಾಸು ಆಯೋಗದಿಂದ ತೆರಿಗೆ ಪಾಲು ₹62,098 ಕೋಟಿ ಬರಬೇಕಿದೆ. ಸೆಸ್ ಮತ್ತು ಸರ್ಚಾರ್ಜ್‌ನಿಂದ ₹55,000 ಕೋಟಿ ಬಾಕಿ ಇದೆ. 15ನೇ ಹಣಕಾಸು ಆಯೋಗ ವಿಶೇಷ ಅನುದಾನದಿಂದ ₹11,495 ಕೋಟಿ ಬಾಕಿ ಇದೆ. ಆದರೂ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲವೆಂದು ರಾಜ್ಯ ಬಿಜೆಪಿ ನಾಯಕರು ಹೇಳುತ್ತಾರೆ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರದ ವಿರುದ್ಧ ಈವರೆಗೆ ರಾಜ್ಯ ಸರ್ಕಾರ ಧರಣಿ ನಡೆಸಿರಲಿಲ್ಲ. ಆದರೆ ಈಗ ಅನಿವಾರ್ಯವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದು ರಾಜಕೀಯ ಪ್ರೇರಿತ ಪ್ರತಿಭಟನೆಯಲ್ಲ, ಅನಿವಾರ್ಯತೆಯ ಪ್ರತಿಭಟನೆ ಎಂದು ಹೇಳಿದರು.
ಸಂವಿಧಾನ ಅಳವಡಿಸಿಕೊಂಡ ಬಳಿಕ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಂದ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ಹೋಗುತ್ತದೆ. ಹಣಕಾಸು ಆಯೋಗ ನಿರ್ಧರಿಸಿದಂತೆ ಈ ಹಣ ರಾಜ್ಯಗಳಿಗೆ ನೀಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ 5498 ಕೋಟಿ ರೂಪಾಯಿ ವಿಶೇಷ ಅನುದಾನಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಇದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿರಸ್ಕರಿಸಿದ್ದರು. ಕೇಂದ್ರ ಸರ್ಕಾರ ತಿರಸ್ಕರಿಸಿದ್ದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಮುಖ ಸುದ್ದಿ :-   ಏಪ್ರಿಲ್‌ 30 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

14ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ 42ರಷ್ಟು ಹಣ ನೀಡಬೇಕು. 15ನೇ ಹಣಕಾಸು ಆಯೋಗದಂತೆ ರಾಜ್ಯಕ್ಕೆ ಶೇ 41ರಷ್ಟು ಹಣ ನೀಡಬೇಕು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕವೇ ಈ ಆಯೋಗ ರಚನೆ ಆಗಿತ್ತು ಎಂದು ಸಿದ್ದರಾಮಯ್ಯ ನೆನಪಿಸಿದರು.
ರಾಜ್ಯದಲ್ಲಿನ ಭೀಕರ ಬರದಿಂದ 35 ಸಾವಿರ ಕೋಟಿ ರೂಪಾಯಿ ಬೆಳೆ ನಷ್ಟವಾಗಿದ್ದು, ಕೇಂದ್ರಕ್ಕೆ 17,901 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ರಾಜ್ಯವು ಮನವಿ ಮಾಡಿದೆ. ಆದರೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ(NDRF) ಈವರೆಗೆ ರಾಜ್ಯಕ್ಕೆ ಒಂದು ರೂಪಾಯಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement