ಮಂಗನ ಕಾಯಿಲೆ ಲಸಿಕೆ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ : ದಿನೇಶ ಗುಂಡೂರಾವ್‌

ಉಡುಪಿ : ಮಂಗನ ಕಾಯಿಲೆಗೆ ಲಸಿಕೆ ಕುರಿತು ಐಸಿಎಂಆರ್ ಜೊತೆ ಚರ್ಚೆ ನಡೆಸಲಾಗಿದ್ದು, ಲಸಿಕೆ ತಯಾರಿಕೆಗೆ ಐಸಿಎಂಆರ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಉಡುಪಿಯಲ್ಲಿ ಶನಿವಾರ ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ನಂತರ ಮಾಧ್ಯಮದವರ ಜೊತೆಗೆ ಮಾತನಾಡಿದರು. ಐಸಿಎಂಆರ್ ನವರು ವ್ಯಾಕ್ಸಿನ್ ತಯಾರಿಕೆಗೆ ಒಪ್ಪಿಗೆ ನೀಡಿದ್ದು, ಹೈದರಾಬಾದ್ ಸಂಸ್ಥೆ ಸಂಶೋಧನೆ ಮಾಡಿ ವ್ಯಾಕ್ಸಿನ್ ತಯಾರಿಸುತ್ತದೆ. ಮುಂದಿನ ವರ್ಷಕ್ಕೆ ಮಂಗನ ಕಾಯಿಲೆಗೆ ಒಳ್ಳೆಯ ಚುಚ್ಚುಮದ್ದು ಸಿಗಬಹುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದರು.ಮಳೆಗಾಲ ಆರಂಭ ಮತ್ತು ಅಂತ್ಯದಲ್ಲಿ ಮಂಗನ ಕಾಯಿಲೆ ಹೆಚ್ಚಳವಾಗುತ್ತದೆ.‌ ಮಾರ್ಚ್ ವರೆಗೆ ಜನ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದರು.‌

ಮಂಗನ ಕಾಯಿಲೆಗೆ ಎಬಿಎಆರ್ ಕೆ ಫಂಡ್ ನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲು ಈಗಾಗಲೇ ಸೂಚಿಸಲಾಗಿದೆ. ಅಲ್ಲದೇ ಕೆ.ಎಫ್.ಡಿ ಪಾಸಿಟಿವ್ ಬಂದವರನ್ನ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲು ಕಡ್ಡಾಯಗೊಳಿಸಲಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ರಾಜ್ಯದಲ್ಲಿ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಒಟ್ಟು 70 ಕೆಎಫ್ ಡಿ ಪ್ರಕರಣ ದಾಖಲಾಗಿವೆ. ಹಲವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಈಗ 20 ಸಕ್ರಿಯ ಪ್ರಕರಣಗಳಿವೆ. 2 ಸಾವಿಗೀಡಾಗಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿಗೀಡಾದ ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement