ಬೆಂಗಳೂರು: ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿ ನಡೆದ ಘಟನೆಯೊಂದರಲ್ಲಿ ಹೆಲ್ಮೆಟ್ ಧರಿಸದ್ದಕ್ಕೆ ಬೈಕ್ ತಡೆದ ಕಾರಣಕ್ಕೆ ಟ್ರಾಫಿಕ್ ಪೊಲೀಸ್ ಹಾಗೂ ದ್ವಿಚಕ್ರವಾಹನ ಸವಾರರ ನಡುವೆ ವಾಗ್ವಾದ ನಡೆದಿದ್ದು, ಸುರಕ್ಷತಾ ಉಲ್ಲಂಘನೆ ಬಗ್ಗೆ ಪ್ರಶ್ನಿಸಿದ ಸಂಚಾರಿ ಪೊಲೀಸರ ಕೈಗೆ ಬೈಕ್ ಸವಾರ ಕಚ್ಚಿದ ಘಟನೆ ನಡೆದಿದೆ.
ಘಟನೆಯ ಬಗ್ಗೆ ಪ್ಲಾಟ್‌ಫಾರ್ಮ್ X ನಲ್ಲಿ ಬಳಕೆದಾರರೊಬ್ಬರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ ಮತ್ತು “ಹೆಲ್ಮೆಟ್ ರಹಿತವಾಗಿ ಹೋಗುತ್ತಿದ್ದ ಬೈಕ್ ಸವಾರನ ವೀಡಿಯೊ ರೆಕಾರ್ಡ್ ಮಾಡಿದ್ದಕ್ಕಾಗಿ ಮೊಬೈಲ್ ಫೋನ್ ಅನ್ನು ಒಡೆದು ಹಾಕುವುದಾಗಿ ಬೈಕ್ ಸವಾರ ಪೊಲೀಸರಿಗೆ ಬೆದರಿಕೆ ಹಾಕಿದ್ದಾನೆ ಹಾಗೂ ಬೈಕ್ ತಡೆದ ಪೊಲೀಸನ ಕೈಗೆ ಕಚ್ಚಿದ್ದಾನೆ.
ವಿಲ್ಸನ್ ಗಾರ್ಡನ್ 10 ನೇ ಕ್ರಾಸ್ ಬಳಿ ಹೆಲ್ಮೆಟ್ ಇಲ್ಲದೆ ಸ್ಕೂಟಿ ಸವಾರಿ ಮಾಡುವಾಗ ಸಿಕ್ಕಿಬಿದ್ದ ಸೈಯ್ಯದ್ ರಫಿ ಎಂಬಾತನನ್ನು ಉಲ್ಲಂಘನೆಯನ್ನು ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ಹೆಡ್ ಕಾನ್‌ಸ್ಟೆಬಲ್ ಸಿದ್ರಾಮೇಶ್ವರ ಕೌಜಲಗಿ ಅವರ ಕೈಯನ್ನು ಕಚ್ಚಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಬಿಟಿಎಂ ಲೇಔಟ್ 1ನೇ ಹಂತದ ನಿವಾಸಿ ಎನ್ನಲಾದ ಸೈಯದ್ ಶಫಿ ಎಂಬಾತ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ, ಈ ವೇಳೆ ಕಾನ್‌ಸ್ಟೆಬಲ್ ಸಿದ್ದರಾಮೇಶ್ವರ ಕೌಜಲಗಿ ಆತನನನ್ನು ತಡೆದು ಫೋಟೊ ತೆಗೆಯುತ್ತಿದ್ದರು. ಅವರ ಜೊತೆ ವಾಗ್ವಾದ ನಡೆಸಿದ ಆತ ನಂತರ ಕೀಲಿಯನ್ನು ಹಿಂಪಡೆಯುವ ಪ್ರಯತ್ನದಲ್ಲಿ ಪೊಲೀಸ್ ಸಿಬ್ಬಂದಿ ಬೆರಳನ್ನು ಕಚ್ಚಿದ್ದಾನೆ.
ನಂತರ ದ್ವಿಚಕ್ರ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪಿ ಶಫಿ ನಂಬರ್ ಪ್ಲೇಟ್ ಬಿಚ್ಚಿಕೊಡುತ್ತೇನೆ, ಎಷ್ಟು ಕೇಸ್ ಹಾಕೊಳ್ತೀಯಾ ಹಾಕ್ಕೋ ಎಂದು ಏಕವಚನದಲ್ಲೇ ನಿಂದಿಸಿ ಕಾನ್‌ಸ್ಟೆಬಲ್ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣವೇ ಪೋಲೀಸರು ಬೆನ್ನಟ್ಟಿ ಆತನನ್ನು ಬಂಧಿಸಿದ್ದಾರೆ. ಘಟನೆಗೆ ಪ್ರತಿಕ್ರಿಯೆಯಾಗಿ, ಸಂಚಾರಿ ಪೊಲೀಸರು ಆರೋಪಿಗಳ ವಿರುದ್ಧ ಔಪಚಾರಿಕ ದೂರು ದಾಖಲಿಸಿದ್ದಾರೆ.
ಆತ ಕರ್ತವ್ಯ ನಿರ್ವಹಣೆಯಲ್ಲಿ ಪೊಲೀಸ್ ಅಧಿಕಾರಿಯನ್ನು ಅಡ್ಡಿಪಡಿಸುವುದು, ಕ್ರಿಮಿನಲ್ ಬೆದರಿಕೆ ಮತ್ತು ಶಾಂತಿ ಭಂಗದ ಆರೋಪಗಳನ್ನು ಎದುರಿಸಬೇಕಿದೆ.
ನಿಮ್ಮ ಕಾಮೆಂಟ್ ಬರೆಯಿರಿ