
ಮಂಗಳೂರು: ಮಂಗಳೂರು ಖಾಸಗಿ ಶಾಲೆಯ ವಿವಾದ ಪ್ರಕರಣ ನಡೆದ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆಯು ದಕ್ಷಿಣ ಕನ್ನಡದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ಅವರನ್ನು ಬುಧವಾರ ದಿಢೀರ್ ಆಗಿ ವರ್ಗಾವಣೆ ಮಾಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆ ಡಿಡಿಪಿಐ ದಯಾನಂದ ಆರ್. ನಾಯ್ಕ ಅವರನ್ನು ವರ್ಗಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಕಲಬುರ್ಗಿ ಡಿಡಿಪಿಐ ಆಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ನಿಯುಕ್ತಿ ಮಾಡಲಾಗಿದೆ.
ಹಿಂದೂ ಧರ್ಮ ಮತ್ತು ಅದರ ದೇವರುಗಳ ವಿರುದ್ಧ ಶಿಕ್ಷಕಿಯೊಬ್ಬರು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾದ ಸೇಂಟ್ ಜೆರೋಸಾ ಶಾಲಾ ಘಟನೆಯನ್ನು ಡಿಡಿಪಿಐ ನಿರ್ವಹಿಸಿದ ರೀತಿಗೆ ಟೀಕೆಗಳು ವ್ಯಕ್ತವಾದ ನಂತರ ಈ ಬೆಳವಣಿಯಾಗಿದೆ.

ಡಿಡಿಪಿಐ ನಾಯ್ಕ ಅವರು ಸೂಕ್ಷ್ಮ ವಿಷಯವನ್ನು ಸಮರ್ಪಕವಾಗಿ ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ರಮಾನಾಥ್ ರೈ ತೀವ್ರ ಅಸಮಾಧಾನ ಹೊರಹಾಕಿದ್ದರು. ಮಂಗಳವಾರ ಶಾಲೆಗೆ ಭೇಟಿ ನೀಡಿದ್ದ ಸಮಸ್ಯೆ ಉದ್ಭವ ಆದಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಪಡಿಸಬೇಕಿತ್ತು. ಆದರೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ಮಾಡಿದ್ದಾರೆ ಎಂದು ಆಕ್ಷೇಪಿಸಿದ್ದರು. ಮಾಜಿ ಶಾಸಕರಾದ ಐವನ್ ಡಿಸೋಜ್, ಜೆ.ಆರ್. ಲೋಬೊ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಡಿಡಿಪಿಐ ದಯಾನಂದ ನಾಯ್ಕ ಅವರನ್ನು ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ. ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಉಪನಿರ್ದೇಶಕ (ಯೋಜನೆ)ರಾಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ದಕ್ಷಿಣ ಕನ್ನಡ ಡಿಡಿಪಿಐ ಆಗಿ ನೇಮಕ ಮಾಡಲಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ