ಸಂಯಮದಿಂದ ಮಾತನಾಡಲು ನಿಮ್ಮ ಕಕ್ಷಿದಾರರಿಗೆ ಹೇಳಿ: ಬಿಜೆಪಿ ಮುಖಂಡ ಈಶ್ವರಪ್ಪಗೆ ಹೈಕೋರ್ಟ್‌ ತರಾಟೆ

ಬೆಂಗಳೂರು : ನಮ್ಮ ಧುರೀಣರು ಮಾತನಾಡುವಾಗ ಒಳ್ಳೆಯ ಭಾಷೆಯನ್ನು ಏಕೆ ಬಳಸುವುದಿಲ್ಲ? ನಾವು ಏನೋ ಒಂದು ಮಾತನಾಡಬಾರದು. ಸಂಯಮದಿಂದ ಭಾಷಾ ಪ್ರಯೋಗ ಮಾಡಬೇಕು. ಪದ ಬಳಕೆಯಲ್ಲಿ ಜವಾಬ್ದಾರಿಯುತವಾಗಿರಬೇಕು ಎಂದು ನಿಮ್ಮ ಕಕ್ಷಿದಾರರಿಗೆ ಹೇಳಿ” ಎಂದು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಅವರ ಕುರಿತು ಮೌಖಿಕವಾಗಿ ಹೇಳಿತು.
ದೇಶವನ್ನು ಛಿದ್ರ ಮಾಡುತ್ತೇವೆ ಎಂದು ಹೋರಾಡುತ್ತಿರುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎನ್ನುವ ಕಾನೂನು ತನ್ನಿ. ಏನೆಂದು ಕೊಂಡಿದ್ದೀರಾ ದೇಶ ಎಂದರೆ” ಎಂಬ ಹೇಳಿಕೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ವಿರುದ್ಧ ದಾವಣಗೆರೆ ಎಕ್ಷ್‌ಟೆನ್ಷನ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ ಎಸ್‌. ದೀಕ್ಷಿತ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ನಮ್ಮ ನಾಯಕರು ಎಂದು ಶಾಲೆಯ ಮಕ್ಕಳೆಲ್ಲ ನೋಡುತ್ತಿರುತ್ತಾರೆ. ಎಲ್ಲರೂ ಬಹುಮುಖ್ಯವಾಗಿ ನಮ್ಮ ಧುರೀಣರು ಒಳ್ಳೆಯ ಭಾಷೆಯನ್ನು ಏಕೆ ಬಳಸುವುದಿಲ್ಲ? ಮಾತನಾಡುವಾಗ ಸಂಸ್ಕೃತಿ ಬಿಂಬಿಸುವ ರೀತಿಯಲ್ಲಿ ಏಕೆ ಮಾತನಾಡುವುದಿಲ್ಲ. ನಾವು ಏನೋ ಒಂದು ಮಾತನಾಡಬಾರದು. ಸಂಯಮದಿಂದ ಭಾಷಾ ಪ್ರಯೋಗ ಮಾಡಬೇಕು ಎಂದು ಪೀಠ ಹೇಳಿತು.
“ಅರ್ಜಿದಾರರು ಹೇಳಿರುವುದು ಅಪರಾಧವೋ, ಅಲ್ಲವೋ ಎಂಬುದು ಬೇರೆ ಮಾತು. ಆದರೆ ನಮ್ಮದು ಸುಶ್ರಾವ್ಯವಾದ ಭಾಷೆ. ನಮ್ಮದು ಬಹುಭಾಷೆ, ಬಹು ಧರ್ಮ ಮತ್ತು ಬಹು ಸಂಸ್ಕೃತಿಗಳ ರಾಷ್ಟ್ರ. ಸ್ವಲ್ಪ ಏನೋ ಮಾತನಾಡಿದರೆ ಏನೋ ಆಗುತ್ತದೆ. ಹಾಗಾಗಿ, ಭಾಷಾ ಪ್ರಯೋಗ ಮಾಡುವಾಗ ಜವಾಬ್ದಾರಿಯುತವಾಗಿರಬೇಕು. ಯಾರು ಏನು ಮಾತನಾಡಿದರು ಎಂಬುದನ್ನು ಪರಿಶೀಲಿಸಲು ನ್ಯಾಯಾಲಯ ವ್ಯಾಕರಣ ತಜ್ಞರಾಗಿ ಕೂಡ್ರಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಅಂತಿಮವಾಗಿ ಪೀಠವು ಈಶ್ವರಪ್ಪ ವಿರುದ್ಧದ ಎಫ್‌ಐಆರ್‌ ಮತ್ತು ಮುಂದಿನ ಪ್ರಕ್ರಿಯೆಗೆ ಮುಂದಿನ ವಿಚಾರಣೆವರೆಗೆ ತಡೆಯಾಜ್ಞೆ ನೀಡಿತು ಹಾಗೂ ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು.
ಈಶ್ವರಪ್ಪ ಪರವಾಗಿ ಹಿರಿಯ ವಕೀಲ ಅರುಣ ಶ್ಯಾಮ ಅವರು ವಾದಿಸಿದರು. ಸರ್ಕಾರದ ಪರವಾಗಿ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಜಗದೀಶ ವಾದ ಮಂಡಿಸಿದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement