ಚಂಡೀಗಢ ಮೇಯರ್ ಚುನಾವಣೆ : “ನೀವು ಮತಪತ್ರದ ಮೇಲೆ X ಮಾರ್ಕ್ ಏಕೆ ಹಾಕಿದ್ದೀರಿ?” : ಚುನಾವಣಾ ಅಧಿಕಾರಿ ಬೆವರಿಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್‌ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ರೀತಿಯಲ್ಲಿ ಮತಪತ್ರವನ್ನು ವಿರೂಪಗೊಳಿಸಿದ ಆರೋಪಿತ ಪ್ರಕರಣದಲ್ಲಿ ಚುನಾವಣಾಧಿಕಾರಿ (ಆರ್‌ ಒ- ರಿಟರ್ನಿಂಗ್‌ ಆಫೀಸರ್‌) ಅನಿಲ ಮಾಸಿಹ್ ಅವರನ್ನು ಸುಪ್ರೀಂ ಕೋರ್ಟ್‌ ಸೋಮವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. ಮತ ಎಣಿಸಬೇಕಿದ್ದ ಅಧಿಕಾರಿ ಮತಪತ್ರಗಳಲ್ಲಿ ಟಿಕ್‌ ಮತ್ತು ಇಂಟೂ ಮಾರ್ಕ್‌ಗಳನ್ನು ಹಾಕಿದ್ದು ಏಕೆ ಎಂದು ಪ್ರಶ್ನಿಸಿತು.
ನ್ಯಾಯಾಲಯಕ್ಕೆ ಸುಳ್ಳು ಹೇಳಲು ಯತ್ನಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿತು.
ಇದು ಬಹಳ ಗಂಭೀರ ಪ್ರಕರಣ. ಸುಳ್ಳು ಹೇಳಿದರೆ ನಿಮ್ಮ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ … ನೀವು ಕ್ಯಾಮೆರಾವನ್ನು ನೋಡುತ್ತಾ ಮತಪತ್ರಗಳಲ್ಲಿ ಏಕೆ ಗುರುತುಹಾಕುತ್ತಿದ್ದೀರಿ?” ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ಅವರು ಪ್ರಶ್ನಿಸಿದರು.
ಆಗ ಮಾಸಿಹ್‌, ವಿರೂಪಗೊಂಡ ಮತಪತ್ರಗಳನ್ನು “ಗುರುತು” ಮಾಡುತ್ತಿದ್ದೆ ಮತ್ತು ಎಣಿಕೆ ಪ್ರದೇಶದ ಅನೇಕ ಸಿಸಿಟಿವಿ ಕ್ಯಾಮೆರಾಗಳಲ್ಲಿ ಒಂದನ್ನು ನೋಡಿದ್ದೇನೆ ಎಂದು ತಿಳಿಸಿದರು.

ಬೇರ್ಪಡಿಸಬೇಕು ಎಂಬುದಕ್ಕೆ ಮಾತ್ರ ಎಂಟು ಮತಪತ್ರಗಳನ್ನು ಬೇರ್ಪಡಿಸಿದೆ ಎಂಬ ಆರ್‌ಒ ಅವರ ವಿವರಣೆಯಿಂದ ತೃಪ್ತರಾಗದ ಮುಖ್ಯ ನ್ಯಾಯಮೂರ್ತಿಗಳು, ನೀವು ಮತಪತ್ರಗಳಿಗೆ ಸಹಿ ಹಾಕಬಹುದು … ಆ ಮತಪತ್ರಗಳಲ್ಲಿ X ಗುರುತನ್ನು ಹಾಕುವುದು ಏಕೆ?… ಆ ಮತಪತ್ರಗಳಲ್ಲಿ ನೀವು ಟಿಕ್ ಅಥವಾ X ಅನ್ನು ಹಾಕಬಹುದು ಎಂದು ಯಾವ ನಿಯಮ ಹೇಳುತ್ತದೆ? … ಅವರನ್ನು (ಮಾಸಿಹ್) ವಿಚಾರಣೆಗೆ ಒಳಪಡಿಸಬೇಕು ಎಂದು ಹೇಳಿದರು.
ಚಂಡೀಗಢ ಮಹಾನಗರ ಪಾಲಿಕೆಯ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ ಚುನಾವಣಾ ಫಲಿತಾಂಶಕ್ಕೆ ತಕ್ಷಣ ತಡೆ ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಆಮ್ ಆದ್ಮಿ ಪಕ್ಷದ ಮೇಯರ್‌ ಅಭ್ಯರ್ಥಿ ಕುಲದೀಪಕುಮಾರ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯನ್ನು ಸಿಜೆಐ, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ ಮಿಶ್ರಾ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.
ಈ ಪ್ರಕರಣ ಸುಪ್ರೀಂ ಕೋರ್ಟ್‌ ನಲ್ಲಿ ಇರುವಾಗಲೇ ಆಯ್ಕೆಯಾಗಿದ್ದ ಮೇಯರ್ ಭಾನುವಾರ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ಮೂವರು ಎಎಪಿ ಪಾಲಿಕೆ ಸದಸ್ಯರು ಬಿಜೆಪಿಗೆ ಪಕ್ಷಾಂತರ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

ಈ ಬೆಳವಣಿಗೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಿಜೆಐ “ಕುದುರೆ ವ್ಯಾಪಾರದಿಂದ (ಖರೀದಿ) ತೊಂದರೆಯಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು. ಸದ್ಯಕ್ಕೆ, ಮತಪತ್ರಗಳನ್ನು (ಪ್ರಸ್ತುತ ಹೈಕೋರ್ಟ್ ವಶದಲ್ಲಿದೆ) ಮತ್ತು ಮೇಯರ್ ಚುನಾವಣೆಯ ಎಣಿಕೆ ಪ್ರಕ್ರಿಯೆಯ ವೀಡಿಯೊವನ್ನು ಹಾಜರುಪಡಿಸುವಂತೆ ನ್ಯಾಯಾಲಯ ಆದೇಶಿಸಿದೆ.
ರಿಟರ್ನಿಂಗ್ ಅಧಿಕಾರಿ ಅನಿಲ ಮಾಸಿಹ್ ಅವರು ನಾಳೆಯೂ ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಿರಬೇಕೆಂದು ಪೀಠ ಆದೇಶಿಸಿತು.
ಪಾಲಿಕೆ ಮೇಯರ್‌ ಚುನಾವಣಾ ಪ್ರಕ್ರಿಯೆ ಪುನರಾರಂಭಿಸಲು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿರದ ಹೊಸ ರಿಟರ್ನಿಂಗ್ ಅಧಿಕಾರಿಯನ್ನು ನೇಮಿಸುವಂತೆ ಪೀಠ ಸೂಚಿಸಿತು.
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಅವರಿಗೆ ಮತ ಎಣಿಕೆ ಇತ್ಯಾದಿಗಳ ಮೇಲ್ವಿಚಾರಣೆ ಜವಾಬ್ದಾರಿ ವಹಿಸಲಾಗುವುದು ಎಂದು ಪೀಠ ತಿಳಿಸಿತು.
ಅರ್ಜಿದಾರ-ಎಎಪಿ ಕೌನ್ಸಿಲರ್ ಪರವಾಗಿ ಪಂಜಾಬ್‌ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್, ವಕೀಲರಾದ ಆರ್‌ಪಿಎಸ್‌ ಬಾರಾ, ಫೆರ್ರಿ ಸೋಫತ್, ಕುಲದೀಪ ಕೌರ್ ವಾದ ಮಂಡಿಸಿದರು. ಚಂಡೀಗಢ ಆಡಳಿತದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement