ಬಿಜೆಪಿಗೆ ದೊಡ್ಡ ಹಿನ್ನಡೆ : ಎಎಪಿ ಅಭ್ಯರ್ಥಿಯನ್ನು ಚಂಡೀಗಢ ಮೇಯರ್ ಎಂದು ಘೋಷಿಸಿದ ಸುಪ್ರೀಂ ಕೋರ್ಟ್ : ಹಿಂದಿನ ಫಲಿತಾಂಶ ರದ್ದು

ನವದೆಹಲಿ: ಚಂಡೀಗಢ ಮೇಯರ್‌ ಚುನಾವಣೆ ಪ್ರಕರಣದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ದೊಡ್ಡ ಹಿನ್ನಡೆಯಾಗಿದ್ದು, ಚಂಡೀಗಢದ ಆಮ್‌ ಆದ್ಮಿ ಪಕ್ಷದ ಮೇಯರ್ ಅಭ್ಯರ್ಥಿ ಕುಲದೀಪಕುಮಾರ ಅವರನ್ನು ವಿಜಯಿ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಘೋಷಿಸಿದೆ.
ಜಾಹೀರಾತು
ಚಂಡೀಗಢದ ಮೇಯರ್ ಆಗಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ್ದ ಚುನಾವಣಾಧಿಕಾರಿಯ (ಆರ್‌ಒ- ರಿಟರ್ನಿಂಗ್‌ ಆಫೀಸರ್‌) ಅನಿಲ ಮಸೀಹ್‌ ಅವರ ನಿರ್ಧಾರವನ್ನು ಮಂಗಳವಾರ ರದ್ದುಗೊಳಿಸಿರುವ ಸುಪ್ರೀಂ ಕೋರ್ಟ್‌ ಎಎಪಿ ಅಭ್ಯರ್ಥಿ ಕುಲದೀಪಕುಮಾರ ಅವರು ವಿಜೇತ ಎಂದು ಘೋಷಿಸಿದೆ.
ಮೇಯರ್‌ ಚುನಾವಣೆಯಲ್ಲಿ ತಾನು ಎಂಟು ಮತಗಳನ್ನು ಅಸಿಂಧುಗೊಳಿಸಿದ್ದು ಏಕೆಂದು ತಿಳಿಸಿದ ಅನಿಲ ಮಸೀಹ್‌ ಅವರ ವಿವರಣೆಯನ್ನು ತಿರಸ್ಕರಿಸಿದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ ಮಿಶ್ರಾ ಅವರಿದ್ದ ಪೀಠ ಆಮ್‌ ಆದ್ಮಿ ಪಕ್ಷದ ಕುಲದೀಪಕುಮಾರ ವಿಜಯಿ ಎಂದು ಪ್ರಕಟಿಸಿ ಆದೇಶ ಹೊರಡಿಸಿದೆ.

ರಿಟರ್ನಿಂಗ್ ಅಧಿಕಾರಿ ಅನಿಲ ಮಸಿಹ್ ಅವರ ನಡೆಯನ್ನು ನ್ಯಾಯಾಲಯ ಇಂದು, ಮಂಗಳವಾರ ಕೂಡ ಬಲವಾಗಿ ಖಂಡಿಸಿತು. ಮಸೀಹ್‌ ಮೇಯರ್ ಚುನಾವಣೆಯ ಹಾದಿಯನ್ನು ಅಕ್ರಮವಾಗಿ ಬದಲಾಯಿಸಿದ್ದು ಅವರು ನ್ಯಾಯಾಲಯದೆದುರು ನೀಡಿದ ಹೇಳಿಕೆ ಹಸಿ ಸುಳ್ಳು ಎಂದ ಪೀಠ ಅವರಿಗೆ ಶೋಕಾಸ್‌ ನೋಟಿಸ್‌ ನೀಡಿತು.
“ಸಿಆರ್‌ಪಿಸಿ ಸೆಕ್ಷನ್ 340 (‘ಸಾರ್ವಜನಿಕ ಸೇವಕರ ಕಾನೂನುಬದ್ಧ ಅಧಿಕಾರವನ್ನು ನಿಂದಿಸುವ ಕಾನೂನು ಕ್ರಮ’ ಕುರಿತು ಹೇಳುವ ಸೆಕ್ಷನ್ 195 ಕ್ಕೆ ಸಂಬಂಧಿಸಿದೆ) ಅಡಿಯಲ್ಲಿ ಅನಿಲ ಮಸೀಹ್‌ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ನ್ಯಾಯಾಂಗ ರಿಜಿಸ್ಟ್ರಾರ್‌ಗೆ ಶೋಕಾಸ್ ನೀಡುವಂತೆ ನಿರ್ದೇಶಿಸಲಾಗಿದೆ. ಶೋಕಾಸ್ ನೋಟಿಸ್‌ಗೆ ಉತ್ತರಿಸಲು ಅನಿಲ ಮಸೀಹ್‌ ಅವರಿಗೆ ಅವಕಾಶವಿದೆ” ಎಂದು ನ್ಯಾಯಾಲಯ ಆದೇಶಿಸಿದೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಬಿಜೆಪಿಯ ಮನೋಜ ಸೋಂಕರ್ (ಈಗ ರಾಜೀನಾಮೆ ನೀಡಿದ್ದಾರೆ) ಅವರನ್ನು ಚಂಡೀಗಢ ಮೇಯರ್ ಆಗಿ ಘೋಷಿಸುವಲ್ಲಿ ಚುನಾವಣಾಧಿಕಾರಿ ಅನಿಲ ಮಸೀಹ್‌ ಅವರ ವಂಚನೆ ಸಹಾಯ ಮಾಡಿತ್ತು ಎಂದು ಎಎಪಿ ಪಾಲಿಕೆ ಸದಸ್ಯ ಕುಲದೀಪಕುಮಾರ ಅರ್ಜಿ ಸಲ್ಲಿಸಿದ್ದರು.
ಸೋಮವಾರ ನೀಡಿದ್ದ ಆದೇಶದನ್ವಯ ಮಂಗಳವಾರ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಮತಪತ್ರಗಳನ್ನು ಸಲ್ಲಿಸಲಾಯಿತು. ಅವುಗಳನ್ನು ಪರಿಶೀಲಿಸಿದ ನ್ಯಾಯಾಲುಯ ಮಸೀಹ್‌ ಅಮಾನತುಗೊಳಿಸಿದ ಈ ಮತಪತ್ರಗಳು ಎಎಪಿ ಅಭ್ಯರ್ಥಿಯ ಪರವಾಗಿ ಚಲಾಯಿಸಿದ ಮತಗಳಾಗಿವೆ ಎಂದು ಹೇಳಿತು.
ಕುಲದೀಪಕುಮಾರ ಪರ ಹಿರಿಯ ವಕೀಲ ಎ ಎಂ ಸಿಂಘ್ವಿ, ಮಸೀಹ್‌ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟ್ಗಿ, ಪಂಜಾಬ್‌ ಅಡ್ವೊಕೇಟ್ ಜನರಲ್ (ಎಜಿ) ಗುರ್ಮಿಂದರ್ ಸಿಂಗ್‌ ವಾದ ಮಂಡಿಸಿದರು. ಬೇರೆ ಕೆಲವು ಅಭ್ಯರ್ಥಿಗಳ ಪರವಾಗಿ ಹಿರಿಯ ವಕೀಲ ಮಣಿಂದರ್ ಸಿಂಗ್, ಚಂಡೀಗಢ ಆಡಳಿತದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಜರಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement