ಶಿರಸಿ: ಶಂಕರ ಪರಂಪರೆಯ ಸ್ವರ್ಣವಲ್ಲೀ‌ ಮಠದಲ್ಲಿ ಗುರುವಾರ ʼಶಿಷ್ಯ ಸ್ವೀಕಾರʼ

ಶಿರಸಿ: ಸೋಂದಾ‌ ಸ್ವರ್ಣವಲ್ಲೀ‌ ಮಹಾ ಸಂಸ್ಥಾನದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ‌ಮಹಾ‌ಸ್ವಾಮೀಜಿ ಅವರ ಉತ್ತರಾಧಿಕಾರಿ ಹಾಗೂ ಶಿಷ್ಯ ಸ್ವೀಕಾರ ಕಾರ್ಯಕ್ರಮ ಗುರುವಾರ ಫೆ.೨೨ರಂದು‌ ನಡೆಯಲಿದೆ.
ಶಿಷ್ಯ ಸ್ವೀಕಾರ ಕಾರ್ಯಕ್ರಮ ಫೆ.೧೮ರಿಂದ ಆರಂಭವಾಗಿರುವ ವಿವಿಧ ಧಾರ್ಮಿಕ‌ ಕಾರ್ಯಕ್ರಮಗಳ‌‌ ಮೂಲಕ ನಡೆಯುತ್ತಿದ್ದು, ಗುರುವಾರ (ಫೆ.೨೨) ಯಲ್ಲಾಪುರದ ಈರಾಪುರದ ಗಂಗೆಮನೆಯ ಬ್ರಹ್ಮಚಾರಿ ನಾಗರಾಜ ಭಟ್ಟ ಅವರು ಸಂಸ್ಥಾನದ ೫೫ನೇ ಯತಿಗಳಾಗಿ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿಗಳಿಂದ ಸನ್ಯಾಸ ಸ್ವೀಕರಿಸಲಿದ್ದಾರೆ.
ಗುರುವಾರ ಬೆಳಿಗ್ಗೆ ಶಾಲ್ಮಲಾ‌ ನದಿಯಲ್ಲಿ ಜಲಾಶಯಗಮನ, ಸಾವಿತ್ರೀ ಪ್ರವೇಶ, ಪ್ರೇಷೋಚ್ಛಾರಣೆ, ಕಾಷಾಯ ವಸ್ತ್ರ ಧಾರಣೆ, ಪ್ರಣವ‌ಮಹಾ ವಾಕ್ಯೋಪದೇಶ, ನಾಮಕರಣ, ಪರ್ಯಂಕಶೌಚ, ಶ್ರೀ ಮಠದಲ್ಲಿ ಯೋಗ ಪಟ್ಟ, ಬ್ರಹ್ಮವಿದಾಶೀರ್ವಚನ, ಅಕ್ಷರಾಯುತ ಶ್ರೀಲಕ್ಷ್ಮೀನೃಸಿಂಹ ಮಂತ್ರ ಹವನ ಪೂರ್ಣಾಹುತಿ, ತೀರ್ಥ ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಲಿದೆ. ವಿವಿಧ ಯತಿಗಳು ಸಾನ್ನಿಧ್ಯ‌ ವಹಿಸಲಿದ್ದಾರೆ. ನೂತನ ಯತಿಗಳ‌ ನಾಮಧೇಯ‌ ಕೂಡ ಇದೇ ವೇಳೆ ಘೋಷಣೆ ಆಗಲಿದೆ.
ಗುರುವಾರ ಮಧ್ಯಾಹ್ನ ೩:೩೦ಕ್ಕೆ ಸರ್ವಜ್ಞೇಂದ್ರ ಸರಸ್ವತೀ ವೇದಿಕೆಯಲ್ಲಿ ಧರ್ಮ ಸಭೆ ನಡೆಯಲಿದ್ದು, ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾ ಸ್ವಾಮೀಜಿ ಸಾನ್ನಿಧ್ಯ ಹಾಗೂ ನೇತೃತ್ವದಲ್ಲಿ ನಡೆಯಲಿದೆ. ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾ‌ನಂದ‌ ಮಹಾ ಸ್ವಾಮೀಜಿ, ಕೂಡಲಿ ಶೃಂಗೇರಿ‌ ಮಠದ ಶ್ರೀ ವಿದ್ಯಾ ವಿಶ್ವೇಶ್ವರಭಾರತೀ‌ ಮಹಾಸ್ವಾಮೀಜಿ, ಹೊಳೆನರಸಿಪುರದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ‌ ಮಹಾಸ್ವಾಮೀಜಿ, ಕಾಸರಗೋಡು ಎಡನೀರುಮಠದ ಶ್ರೀ ಸಚ್ಚಿದಾನಂದ ಭಾರತೀ‌ ಮಹಾಸ್ವಾಮೀಜಿ, ನೆಲೆಮಾವುಮಠದ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮೀಜಿ, ತುರುವೇಕೆರೆಯ ಶ್ರೀ ಪ್ರಣವಾನಂದ ತೀರ್ಥ ಮಹಾಸ್ವಾಮೀಜಿ, ಕಾಂಚಿಂಪುರಂನ ಶ್ರೀ ಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀ ಸಹಜಾನಂದ ತೀರ್ಥ ಸ್ವಾಮೀಜಿ, ಶ್ರೀ ಅಂಜನಾನಂದ ತೀರ್ಥ ಸ್ವಾಮೀಜಿ ಹಾಗೂ ನೂತನ ಶ್ರೀಗಳು ಸಾನ್ನಿಧ್ಯ ನೀಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾಯ ಜೋಶಿ ಪಾಲ್ಗೊಳ್ಳುವರು. ಇದೇ ವೇಳೆ ಶ್ರೀಗಳಿಂದ ವಿರಚಿತ ಯೋಗ ವಾಸಿಷ್ಠ ಪ್ರಥಮ ಸಂಪುಟ ಬಿಡುಗಡೆ ಆಗಲಿದೆ. ಗುರುವಾರ ಶ್ರೀಮಠಕ್ಕೆ ೨೦ ಸಹಸ್ರಕ್ಕೂ ಅಧಿಕ ಭಕ್ತರ ಆಗಮನದ ನಿರೀಕ್ಷೆ ಇದೆ.

ವಿವಿಧ ಧಾರ್ಮಿಕ ಕಾರ್ಯಕ್ರಮಗಳು
ಬುಧವಾರ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹಾಗೂ ಕಂಚಿಪುರದ ಶ್ರೀಆತ್ಮಬೋಧ ತೀರ್ಥ ಸ್ವಾಮೀಜಿ, ಶ್ರೀಸಹಜಾನಂದ ತೀರ್ಥ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಶತಚಂಡಿ ಹವನದ ಪೂರ್ಣಾಹುತಿ ಬುಧವಾರ ನಡೆಯಿತು. ಬ್ರಹ್ಮಚಾರಿ ನಾಗರಾಜ ಭಟ್ಟರ ಸಂನ್ಯಾಸ ಗ್ರಹಣ ಸಂಕಲ್ಪ, ಪುಣ್ಯಾಹ, ನಾಂದಿಶ್ರಾದ್ಧ, ಮಾತೃಕಾ ಪೂಜಾದಿ ಕರ್ಮಗಳು ಅಗ್ನಿಹೋತ್ರಿ ಭಾಲಚಂದ್ರ ಉಪಾಧ್ಯಾಯರು ಗೋಕರ್ಣ ಹಾಗೂ ಶ್ರೀಮಠದ ವೈದಿಕರು, ಅನೇಕ ವಿದ್ವಾಂಸರಿಂದ ನಡೆದವು.

ಧರ್ಮ ಸಭೆ, ಆಲೋಕಯಾಂಬ‌ ಲಲಿತೇ ಗ್ರಂಥ ಬಿಡುಗಡೆ, ಉಪನ್ಯಾಸ
ಉಪಕಾರ ಮಾಡಿದವರಿಗೆ ಪ್ರತ್ಯುಪಕಾರ ಮಾಡುವುದು ದೊಡ್ಡದಲ್ಲ. ಅದು ಸಹಜಗುಣ. ಅಪಕಾರ ಮಾಡಿದವರಿಗೂ ಉಪಕಾರ ಬಯಸುವುದು ಸಾಧು, ಸಂತರ ಗುಣ. ಅಂಥ ಸದ್ಗುಣ ಎಲ್ಲರೂ ಬೆಳಸಿಕೊಳ್ಳಬೇಕು ಎಂದು ಬೆಂಗಳೂರಿನ ಕೂಡ್ಲಿ ಶೃಂಗೇರಿ ಮಠದ ಶ್ರೀ ವಿದ್ಯಾವಿಶ್ವೇಶ್ವರ ಭಾರತೀ ಮಹಾ ಸ್ವಾಮೀಜಿ ನುಡಿದರು.
ಅವರು ಬುಧವಾರ ಸ್ವರ್ಣವಲ್ಲೀಯಲ್ಲಿ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವ ಮಹೋತ್ಸವದ ನಾಲ್ಕನೇ ದಿ‌ನ ನಡೆದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ನೀಡಿ ಆಶೀರ್ವಚನ ನೀಡಿದರು.
ಪ್ರತೀಕಾರದ ಬದುಕು ಬದುಕಬಾರದು. ದುಃಖ ಬಿಟ್ಟು ಸಹನೆಯಾಗಿಸಿಕೊಳ್ಳುವುದನ್ನು ಬೆಳೆಸಿಕೊಳ್ಳಬೇಕು. ಈ ಪ್ರಕ್ರಿಯೆ ದೊಡ್ಡ ಅವಸ್ಥೆ. ಇದನ್ನು ಎಲ್ಲರೂ ಸಾಧಿಸಿಕೊಳ್ಳಬೇಕು ಎಂದರು. ಮನುಷ್ಯ ಆದವನು ಸದ್ಗುಣ ಬೆಳೆಸಿಕೊಂಡರೆ ವ್ಯಕ್ತಿ ದೈವತ್ವದ ಕಡೆಗೆ ಹೋಗುತ್ತಾನೆ. ತುಳಸಿದಾಸರೂ ಇದನ್ನೇ ಹೇಳಿದ್ದಾರೆ. ಗುರುಗಳ ಮಾತಿನಲ್ಲಿ ವಿಶ್ವಾಸವಿಡುವುದೇ ಶ್ರದ್ಧೆ. ಯಜ್ಞ, ದಾನ, ತಪಸ್ಸು ಇವು ಮೂರನ್ನು ಆಚರಿಸುವುದರಿಂದ ಮನುಷ್ಯ ಜನ್ಮ ಪಾವನ ಎನಿಸಿಕೊಳ್ಳುತ್ತದೆ ಎಂದರು.
ಶಿರಳಗಿ ಶ್ರೀರಾಜಾರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಭಾರತೀ ಮಹಾಸ್ವಾಮೀಜಿ ಅವರು ನಿದಿಧ್ಯಾಸನ ಕುರಿತು ಉಪನ್ಯಾಸ‌ ನೀಡಿ, ನಾನು ಎನ್ನುವುದಕ್ಕೆ ಅಸ್ತಿತ್ವ ಇಲ್ಲ. ಅಭಿಮಾನದಿಂದ‌ ಜೀವನ, ಇದುವೇ ದುಃಖ. ಇದನ್ನು‌ ಬದಿಗೆ ಸರಿಸಿ ಕರ್ಮಯೋಗ ಮಾಡಬೇಕು. ಇದು ಸಾಧನೆಯ‌ ಮೊದಲ‌ ತ್ಯಾಗದಲ್ಲಿ ಭಗವಂತನು ಪ್ರಾಪ್ತನಾಗುತ್ತಾನೆ. ತ್ಯಾಗದ ಮಹೋನ್ನತವಾದ ಆದರ್ಶ ಸಾರುವುದೇ ಸಂನ್ಯಾಸಾಶ್ರಮವಾಗಿದೆ ಎಂದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

ಸಂಸದ ಅನಂತಕುಮಾರ ಹೆಗಡೆ ಮಾತನಾಡಿ, ನಮ್ಮ‌ ಮಠಕ್ಕೆ ನೂತನ ಗುರುಗಳು ಬರುತ್ತಿರುವುದು ಸಂಭ್ರಮದ ಕ್ಷಣ. ಇದನ್ನು ಭಕ್ತಿಯಿಂದ ಅನುಭವಿಸಬೇಕು. ವ್ಯಾಸ ಪೀಠಗಳ‌ ಅಮೃತ ವಾಹಿನಿ ಹರಿದು ಬರಲಿ ಎಂದರು
ಹೊಳೆ‌ನರಸಿಪುರದ ಅಧ್ಯಾತ್ಮ ಪ್ರಕಾಶದ ಶ್ರೀ ಪ್ರಕಾಶಾನಂದೇಂದ್ರ ಸರಸ್ವತೀ ಮಹಾ ಸ್ವಾಮೀಜಿ, ತುರವೇಕೆರೆ ಶ್ರೀಪ್ರಣವಾನಂದ ತೀರ್ಥ ಮಹಾಸ್ವಾಮೀಜಿಗಳು ಪಾಲ್ಗೊಂಡಿದ್ದರು‌.
ಸೋಂದಾ ಸ್ವರ್ಣವಲ್ಲೀ ಮಹಾ‌ ಸಂಸ್ಥಾನದ ಮಠಾಧೀಶ‌ ಶ್ರೀಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿಗಳು ಸಾನ್ನಿಧ್ಯ‌ ನೀಡಿದ್ದರು. ಯೋಗಾಚಾರ್ಯ ಕೆ.ಎಲ್.ಶಂಕರಾಚಾರ್ಯ ಜೋಯಿಸ್ ಯತಿ ಧರ್ಮ ಹಾಗೂ ಲೋಕ ಧರ್ಮದ ಕುರಿತು ಮಾತ‌ನಾಡಿದರು.

ಸಭೆಗೆ ದರ್ಶನ  ನೀಡಿದ ಸ್ವಾಮೀಜಿ 
ಇಡೀ ದಿ‌ನ ಬಿಡುವಿಲ್ಲದ‌ ಧಾರ್ಮಿಕ ಚಟುವಟಿಕೆಗಳ ನಡುವಿನಲ್ಲಿಯೂ ಸಹ ನೆರೆದಿದ್ದ ಭಕ್ತರ ಅಪೇಕ್ಷೆಯ ಮೇರೆಗೆ ಕೆಲ ಹೊತ್ತಾದರೂ ಸಭೆಯಲ್ಲಿ ಸಾನ್ನಿಧ್ಯ ನೀಡುವ ಮೂಲಕ ಶ್ರೀ ಗಂಗಾಧರೇಂದ್ರ ಸರಸ್ವತೀ ‌ಮಹಾಸ್ವಾಮೀಜಿ ಭಕ್ತರ ಅಭಿಲಾಷೆ ಪೂರ್ಣಗೊಳಿಸಿದರು.
ಈ ವೇಳೆ ಮಾತನಾಡಿದ ಶ್ರೀಗಳು, ಇವತ್ತಿನ ಕಾರ್ಯ ಇವತ್ತೇ ಮಾಡಬೇಕಾದ ತ್ವರೆ ಇದೆ. ಹಾಗಾಗಿ ಸಭೆಗೆ ಬರುವ ಆಲೋಚನೆ ಇರಲಿಲ್ಲ. ಆದರೂ ಭಕ್ತರ, ಕಾರ್ಯಕರ್ತರ ಅಪೇಕ್ಷೆಯಂತೆ ಬಂದಿದ್ದೇವೆ. ಬೇಗ ತೆರಳುವುದು ಅನಿವಾರ್ಯ ಆಗಿದೆ. ಆದರೆ, ಸಭೆಯಲ್ಲಿ ಮಾತನಾಡಿದ ಎಲ್ಲರ ಉಪನ್ಯಾಸ ದಾಖಲಿಸಲು ಹೇಳಿದ್ದು, ಆಲಿಸುವುದಾಗಿ ಹೇಳಿದರು.
ಮನಸ್ಸನ್ನು ಪ್ರಶಾಂತಗೊಳಿಸುವುದೇ ಜ್ಞಾ‌ನ. ವಿಕಾರಗೊಳಿಸುವುದೇ ಅಜ್ಞಾನ. ಆಧ್ಯಾತ್ಮ ಜೀವನದ‌ ಮೂಲಕ ಭಗವಂತನಲ್ಲಿ ಸೇರಲು ಯಾರು ಸಿದ್ಧರಿದ್ದಾರೋ ಅವರೇ ಧನ್ಯ ಪುರುಷರು. ಸ್ವರ್ಣವಲ್ಲೀ ಶ್ರೀಗಳು ಶಾಸ್ತ್ರದಲ್ಲಿ ಘ‌ನ ವಿದ್ವಾಂಸರು, ತಪಸ್ಸಿ‌ನ ಆಚರಣೆಯಲ್ಲಿ‌ ಕಠೋರ ನಿಷ್ಠರಾಗಿದ್ದಾರೂ ಎಲ್ಲರೊಡನೆ ವಿಶ್ವಾಸದಿಂದ ಮಾತನಾಡಿ ಭಕ್ತರ ಮನ ಗೆದ್ದಿದ್ದಾರೆ ಎಂದು ಶಿರಳಗಿ ಸ್ವಾಮೀಜಿ ಹೇಳಿದರು.ಮಹೇಶ ಭಟ್ಟ ಜೋಯಿಡಾ, ವಿದ್ಯಾನಂದ ಭಟ್ಟ ಸುಂಕಸಾಳ ವೇದಘೋಷ ಮಾಡಿದರು. ಯಲ್ಲಾಪುರ ಸೀಮೆಯ ಮಾತೆಯರು ಪ್ರಾರ್ಥಿಸಿದರು. ಎನ್.ಜಿ.ಹೆಗಡೆ ಭಟ್ರಕೇರಿ ಸ್ವಾಗತಿಸಿದರು. ಬಿಡುಗಡೆಗೊಂಡ ಆಲೋಕಯಾಂಬ ಲಲಿತೇ ಗ್ರಂಥದ ಕುರಿತು ಡಾ. ಶಂಕರ ಭಟ್ಟ ಉಂಚಳ್ಳಿ ಪರಿಚಯಿಸಿದರು. ಅನಂತ ಭಟ್ಟ ಹುಳಗೋಳ ವಂದಿಸಿದರು.ಡಾ. ವಿನಾಯಕ ಭಟ್ಟ ಗುಂಜಗೋಡ ನಿರ್ವಹಿಸಿದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ಭಕ್ತರಿಗೆ ಅನ್ನ‌ ಪ್ರಸಾದ ವಿತರಣೆ
ಸ್ವರ್ಣವಲ್ಲೀ ‌ಮಠದಲ್ಲಿ ನಡೆಯುತ್ತಿರುವ ನಾಲ್ಕನೇ‌ ದಿನದ ಅನ್ನ ಪ್ರಸಾದ ವಿತರಣೆಯೂ ೮ ಸಾವಿರಕ್ಕೂ ಅಧಿಕ ಭಕ್ತರಿಗೆ ವಿತರಿಸಲಾಯಿತು.
೧೫ ಕೌಂಟರ್ ಮೂಲಕ ಅನ್ನಪ್ರಸಾದ ವಿತರಿಸಲಾಯಿತು. ಅಲ್ಲದೆ, ಎರಡು ಕೌಂಟರ ಮೂಲಕ ಚಹಾ, ಕಷಾಯ, ಅವಲಕ್ಕಿ, ಮೊಸರು ನೀಡಿ ಆಗಮಿಸಿದ ಶಿಷ್ಯ ಭಕ್ತರಿಗೆ ಬೆಳಗಿನಿಂದ‌ ಸಂಜೆ ತನಕ ವಿತರಿಸಲಾಯಿತು. ಆಗಮಿಸಿದ ಭಕ್ತರು ತಮ್ಮ ಶಕ್ತ್ಯಾನುಸಾರ ಹಾಲು, ಮೊಸರು, ಅಡಿಕೆ ಹಾಳೆ, ಬೆಲ್ಲ, ಕಿರಾಣಿ, ತುಪ್ಪ, ತರಕಾರಿ, ಅಕ್ಕಿ, ಕಾಯಿಗಳೂ ಸೇವೆಯಾಗಿ ಸಮರ್ಪಿಸಿದರು.

ಚೆಲುವಾಯಿತು‌ ಮಠ
ಸ್ವರ್ಣವಲ್ಲೀ‌ ಮಠದಲ್ಲಿ ರಾತ್ರಿ ಬೆಳಗಾಗುವುದರೊಳಗೆ ಹೂವಿನ‌ ಅಲಂಕಾರದ ಮೂಲಕ ಸುಂದರವಾಗಿ ಅಲಂಕರಿಸಲಾಗಿತ್ತು. ಬೆಂಗಳೂರಿನಲ್ಲಿ ವೈದಿಕರಾಗಿರುವ ಮೂಲತಃ ಯಲ್ಲಾಪುರ ಮೊಳೆಮನೆಯ ಪ್ರಸನ್ನ ಭಟ್ಟ, ರಾಮಚಂದ್ರ ಭಟ್ಟ ಸಹೋದರರು ಬೆಂಗಳೂರಿನಿಂದ ಐದು‌ ಲಕ್ಷ ರೂಪಾಯಿಗೂ ಅಧಿಕ ಪುಷ್ಪಗಳನ್ನು ತರಿಸಿದ್ದ ಸೇವಾ ಅಲಂಕಾರ ಮಾಡಲಾಗಿತ್ತು.

ಸಾಂಪ್ರದಾಯಿಕ‌ ಉಡುಪು…ಆರಾಮಾ, ಬನ್ನಿ….
ಶ್ರೀ ಮಠದಲ್ಲಿ ನಡೆಯುತ್ತಿರುವ ಶಿಷ್ಯ ಸ್ವೀಕಾರ ಮಹೋತ್ಸವದ ಲೈವ್ ಹಾಗೂ ಮಠದ ಐದಾರು ಕಡೆ ಸ್ಕ್ರೀನ್, ಟಿವಿ ವ್ಯವಸ್ಥೆ ಮಾಡಲಾಗಿತ್ತು. ಖುಷಿಯಿಂದ ಖುರ್ಚಿಯ ಮೇಲೆ‌ ಕುಳಿತು ವೀಕ್ಷಿಸಿದರು. ಮಠದ ಆವಾರಕ್ಕೆ ಬರುವ, ಬಹುತೇಕ‌ ಶಿಷ್ಯರು ಲುಂಗಿ, ಶಾಲಿನಲ್ಲಿ ಸಾಂಪ್ರದಾಯಿಕ‌ ಉಡುಪಿನಲ್ಲಿ ಗಮನ ಸೆಳೆದರು. ಸ್ವರ್ಣವಲ್ಲೀ ಭಗವತ್ಪಾದ ಪ್ರಕಾಶನದ ಪುಸ್ತಕಗಳ‌ ಮಾರಾಟ ಪ್ರದರ್ಶನ, ಕುಠೀರ ವೇದಿಕೆ ಕೂಡ ಗಮನ ಸೆಳೆಯಿತು.
ರಾಷ್ಟ್ರ‌ಧರ್ಮ, ಸಂಸ್ಕೃತಿ, ಸನಾತನ‌, ಜಾಗೃತಿಯ‌ ಫಲಕಗಳು, ಮಾರ್ಗಸೂಚಿಗಳು, ಮಾಹಿತಿ ನೀಡುವ ಕಾರ್ಯಕರ್ತರು ಹೀಗೆ ಗಮನ ಸೆಳೆದವು.
ಪ್ರವೇಶ ದ್ವಾರದಲ್ಲೇ ಭೈರುಂಬೆಯ‌ ಪ್ರೌಢ ಶಾಲೆಯ ಮಕ್ಕಳು ತಿಲಕ ಇಟ್ಟು, ‘ಆರಾಮಾ, ಬನ್ನಿ‌’ ಎಂದು ಮಾತನಾಡಿಸಿ ಗಮನ‌ ಸೆಳೆದರು.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement