ಹುಬ್ಬಳ್ಳಿ: ವಿಆರ್‌ಎಲ್ ಲಾಜಿಸ್ಟಿಕ್ಸ್ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರ ಬಹುದಿನಗಳ ಸಂಕಲ್ಪ ಸಾಕಾರಗೊಂಡಿದ್ದು, ಹುಬ್ಬಳ್ಳಿ ಸಮೀಪದ ಪಾಲಿಕೊಪ್ಪದಲ್ಲಿ ನಿಮಿರ್ಸಲಾದ ಶ್ರೀ ಶಿವಶಕ್ತಿ ಧಾಮದ ಲೋಕಾರ್ಪಣೆಯು ಗುರುವಾರ ನೆರವೇರಿತು. ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಶಿವಶಕ್ತಿಧಾಮವನ್ನು ಲೋಕಾರ್ಪಣೆ ಮಾಡಿದರು.
ಹುಬ್ಬಳ್ಳಿ ಸಮೀಪದ ಪಾಲಿಕೊಪ್ಪದಲ್ಲಿ ನಿಮಿರ್ಸಲಾಗಿರುವ ದೇವಾಲಯಗಳ ಸಮುಚ್ಛಯಕ್ಕೆ “ಶ್ರೀಶಿವಶಕ್ತಿ ಧಾಮ’ ಎಂದು ನಾಮಕರಣ ಮಾಡಿದ ಶೃಂಗೇರಿ ಜಗದ್ಗುರುಗಳು, ಪ್ರತಿಷ್ಠಾಪನೆಗೊಂಡಿರುವ ಶಿವಲಿಂಗಕ್ಕೆ “ಆನಂದೇಶ್ವರ’, ಚಂಡಿಕೇಶ್ವರಿ ಮಾತೆಗೆ “ಜ್ಞಾನಾಂಬಿಕೆ’, ವಿನಾಯಕ ದೇವರಿಗೆ “ವಿಜಯ ಗಣಪತಿ’ ಎಂದು ನಾಮಕರಣ ಮಾಡಿದ್ದಾರೆ. ಅಲ್ಲದೆ, ನವಗ್ರಹಗಳು, ಶನೈಶ್ಚರ ಸ್ವಾಮಿ ಮತ್ತು ಕ್ಷೇತ್ರಪಾಲಕ ಕಾಲಭೈರವೇಶ್ವರನ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ಮಾಡಿದ ಜಗದ್ಗುರುಗಳು ಕುಂಭಾಭಿಷೇಕ ಸಹಿತ ಬ್ರಹ್ಮಕಳಸಾರೋಹಣ ಮಾಡಿದರು.
ಗುರುವಾರ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭವಾದ ವಿಧಿವಿಧಾನಗಳು ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬ್ರಹ್ಮಕಲಶತೀರ್ಥದ ಅಭಿಷೇಕ ಹಾಗೂ ಮಹಾಪೂಜೆಯೊಂದಿಗೆ ಸಂಪನ್ನಗೊಂಡವು. ಬೃಹತ್ ಗರ್ಭಗೋಪುರ ಮತ್ತು ರಾಜಗೋಪುರದ ಮೇಲೆ ಪ್ರತಿಷ್ಠಾಪಿಸಲಾಗಿರುವ ಪಂಚಕಲಶಗಳಿಗೆ ಜಗದ್ಗುರುಗಳು ಅಭಿಷೇಕ ಮಾಡಿ ಪೂಜೆ ಸಲ್ಲಿಸಿದರು.
ವಿಆರ್‌ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ಲಲಿತಾ ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆನಂದ ಸಂಕೇಶ್ವರ, ವಾಣಿ ಆನಂದ ಸಂಕೇಶ್ವರ, ವಿಜಯಾನಂದ ಟ್ರಾವೆಲ್ಸ್ ಎಂ.ಡಿ. ಶಿವ ಸಂಕೇಶ್ವರ ಹಾಗೂ ಸಂಕೇಶ್ವರ ಕುಟುಂಬದ ಸದಸ್ಯರು, ಹಿತೈಷಿಗಳು ಉಪಸ್ಥಿತರಿದ್ದರು.
ಧಾರ್ಮಿಕ ವಿಧಿಗಳನ್ನು ಪೂರೈಸಿದ ನಂತರ ನಡೆದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶೃಂಗೇರಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು, ಮನುಷ್ಯ ದೊಡ್ಡ ಸ್ಥಾನಕ್ಕೆ ತಲುಪಿದ ನಂತರ ತಾನು ಬೆಳೆದು ಬಂದ ಹಾದಿಯನ್ನು ಮರೆಯುತ್ತಾನೆ. ಜತೆಗೆ ಧರ್ಮ, ಸಂಸ್ಕಾರವನ್ನು ಮರೆಯುತ್ತಾನೆ. ಆದರೆ, ಉದ್ಯಮಿಗಳಾದ ಡಾ. ವಿಜಯ ಸಂಕೇಶ್ವರ ಅವರು ಇಡೀ ದೇಶವೇ ಗುರುತಿಸುವ ಮಟ್ಟಿಗೆ ಸಾಧನೆ ಮಾಡಿದರೂ ಹಿಂದೂ ಧರ್ಮದ ಮೇಲಿನ ಶ್ರದ್ಧೆಯನ್ನು ಮರೆತಿಲ್ಲ. ಮಾತ್ರವಲ್ಲ, ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಕೂಡಾ ಅದೇ ಸಂಸ್ಕಾರವನ್ನು ನೀಡಿದ್ದಾರೆ. ವಿಜಯ ಸಂಕೇಶ್ವರರ ಸಂಕಲ್ಪದಂತೆ ಶಿವಶಕ್ತಿ ಧಾಮವನ್ನು ಹಿಂದೂ ಧರ್ಮದ ಕೇಂದ್ರವಾಗಿ ಬೆಳೆಸಲಾಗುವುದು ಎಂದು ಹೇಳಿದರು.
ಶೃಂಗೇರಿ ಮಠಕ್ಕೆ ಹಸ್ತಾಂತರ
ಶಿವಶಕ್ತಿ ಧಾಮವನ್ನು ಆರಾಧನಾ ಟ್ರಸ್ಟ್ ಜೊತೆಗೆ ಶೃಂಗೇರಿ ಶಾರದಾ ಪೀಠದ ಸುಪರ್ದಿಗೆ ಹಸ್ತಾಂತರ ಮಾಡುತ್ತೇವೆ ಎಂದು ಡಾ. ವಿಜಯ ಸಂಕೇಶ್ವರ ಪ್ರಕಟಿಸಿದರು. ಆರಾಧನಾ ಟ್ರಸ್ಟ್ ಆಡಳಿತ ಮಂಡಳಿಯ ಸದಸ್ಯರು, ನಮ್ಮ ಎಲ್ಲ ಸಂಬಂಧಿಕರು ಮನಃಪೂರ್ವಕವಾಗಿ ಶೃಂಗೇರಿ ಮಠಕ್ಕೆ ಈ ತೀರ್ಥ ಕ್ಷೇತ್ರವನ್ನು ಹಸ್ತಾಂತರ ಮಾಡಲು ಒಪ್ಪಿದ್ದೇವೆ ಎಂದರು.
ಶಿವಶಕ್ತಿ ಧಾಮದಲ್ಲಿ ಆನಂದೇಶ್ವರ, ಜ್ಞಾನಾಂಬಿಕೆ, ವಿಜಯ ಗಣಪತಿ, ಶನೈಶ್ಚರ ಸೇರಿ ವಿವಿಧ ಮೂರ್ತಿಗಳಿವೆ. 6.5 ಎಕರೆಯಲ್ಲಿ ಹರಡಿರುವ ಈ ದೇವಾಲಯದ ಸಂಕೀರ್ಣ ಹುಬ್ಬಳ್ಳಿಯಿಂದ 25 ಕಿಮೀ ದೂರದಲ್ಲಿರುವ ಪಾಲಿಕೊಪ್ಪ ಗ್ರಾಮದಲ್ಲಿದ್ದು, ಆರಾಧನಾ ಟ್ರಸ್ಟ್‌ನಿಂದ ಅಭಿವೃದ್ಧಿಪಡಿಸಲಾಗಿದೆ, ದೇವಾಲಯಗಳನ್ನು ತಮಿಳುನಾಡಿನ ವಾಸ್ತುಶಿಲ್ಪಿ ಕೆ ಸ್ವಾಮಿನಾಥನ್ ಸ್ಥಾಪತಿ ಅವರು ದಕ್ಷಿಣ ಭಾರತದ ದ್ರಾವಿಡ ಶೈಲಿಯಲ್ಲಿ ನಿರ್ಮಿಸಿದ್ದಾರೆ. ಮಧುರೈನ 50 ಶಿಲ್ಪಿಗಳು ದೇವಾಲಯದ ಕೆಲಸವನ್ನು ಪೂರ್ಣಗೊಳಿಸಲು ಸುಮಾರು ನಾಲ್ಕು ವರ್ಷ ತೆಗೆದುಕೊಂಡಿದ್ದಾರೆ.
ತಮಿಳುನಾಡಿನ ವಾಲಾಜಾಬಾದ್‌ನಿಂದ ಕಪ್ಪು ಕಲ್ಲುಗಳನ್ನು ತಂದು ವಿಗ್ರಹಗಳನ್ನು ಕೆತ್ತಲಾಗಿದೆ. ಶಿವಶಕ್ತಿಧಾಮವನ್ನು ವಿಆರ್‌ಎಲ್ ಲಾಜಿಸ್ಟಿಕ್ಸ್ ಅಧ್ಯಕ್ಷ ವಿಜಯ ಸಂಕೇಶ್ವರ ಅವರ ಕುಟುಂಬದವರು ನಿರ್ವಹಿಸುತ್ತಿದ್ದರು. ಈಗ ಈ ದೇವಾಲಯದ ಸಮುಚ್ಚಯದ ಆಡಳಿತವನ್ನು ಶೃಂಗೇರಿ ಶಾರದಾ ಪೀಠದ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಕ್ಕೆ ಹಸ್ತಾಂತರಿಸಲಾಗಿದೆ.
.
ನಿಮ್ಮ ಕಾಮೆಂಟ್ ಬರೆಯಿರಿ