ರಾಜ್ಯಸಭಾ ಚುನಾವಣೆ: ಉತ್ತರಪ್ರದೇಶದ 10 ಸ್ಥಾನಗಳಲ್ಲಿ ಬಿಜೆಪಿ 8 ರಲ್ಲಿ, ಸಮಾಜವಾದಿ ಪಕ್ಷ 2 ರಲ್ಲಿ ಗೆಲುವು

ನವದೆಹಲಿ: ಜಯಂತ ಚೌಧರಿ ಅವರ ರಾಷ್ಟ್ರೀಯ ಲೋಕದಳ ಮತ್ತು ಸಮಾಜವಾದಿ ಪಕ್ಷದ ಕೆಲವು ಬಂಡಾಯ ಶಾಸಕರ ಸಹಾಯದಿಂದ ಬಿಜೆಪಿ ಉತ್ತರ ಪ್ರದೇಶದಿಂದ ರಾಜ್ಯಸಭೆಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದು, ಹೆಚ್ಚುವರಿ ಸ್ಥಾನವನ್ನು ಪಡೆದುಕೊಂಡಿದೆ. ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ.
ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಗೆದ್ದ ನಂತರ ಉತ್ತರ ಪ್ರದೇಶದಲ್ಲಿಯೂ ಬೋನಸ್ ಸ್ಥಾನಗಳನ್ನು ಪಡೆಯಲು ಬಿಜೆಪಿ ಸಫಲವಾಗಿದೆ. ಉತ್ತರ ಪ್ರದೇಶದ ರಾಜ್ಯಸಭಾ ಚುನಾವಣೆಯಲ್ಲಿ ಆರು ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ರಾಜ್ಯದ 10 ಸ್ಥಾನಗಳಿಗೆ ಎಂಟನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಚುನಾವಣೆಯನ್ನು ಅನಿವಾರ್ಯವಾಗಿಸಿತ್ತು. ರಾಜ್ಯ ವಿಧಾನಸಭೆಯ ಅಂಕಿ-ಅಂಶದ ಪ್ರಕಾರ ಬಿಜೆಪಿಗೆ ಏಳು ಸ್ಥಾನಗಳು ಮತ್ತು ಸಮಾಜವಾದಿ ಪಕ್ಷಕ್ಕೆ ಮೂರು ಸ್ಥಾನಗಳು ಸಿಗುತ್ತವೆ ಎಂಬುದು ಸಮಾನ್ಯ ನಿರೀಕ್ಷೆಯಾಗಿತ್ತು.

ಸೋಮವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಕರೆದಿದ್ದ ಸಭೆಗೆ ಎಂಟು ಶಾಸಕರು ಗೈರಾಗುವ ಮೂಲಕ ವಿಪಕ್ಷಗಳ ಮೈತ್ರಿಕೂಟದಲ್ಲಿ ಕಂಪನ ಆರಂಭವಾಯಿತು. ಮಂಗಳವಾರ ಬೆಳಿಗ್ಗೆ, ಚುನಾವಣೆಗೆ ಮುನ್ನ, ಸಮಾಜವಾದಿ ಪಕ್ಷದ ಮುಖ್ಯ ಸಚೇತಕರೇ ಪಕ್ಷಕ್ಕೆ ರಾಜೀನಾಮೆ ನೀಡಿದರು. ಸಮಾಜವಾದಿ ಪಕ್ಷದ ಏಳು ಸದಸ್ಯರು ಅಡ್ಡ ಮತದಾನ ಮಾಡಿದರು. ಎಸ್‌ಪಿಯ ಒಬ್ಬ ಶಾಸಕನ ಮತವನ್ನು ಅಸಿಂಧು ಎಂದು ಪರಿಗಣಿಸಲಾಗಿದೆ.
ಗೆದ್ದಿರುವ ಬಿಜೆಪಿ ಅಭ್ಯರ್ಥಿಗಳು: ಮಾಜಿ ಕೇಂದ್ರ ಸಚಿವ ಆರ್‌ಪಿಎನ್‌ ಸಿಂಗ್‌, ಮಾಜಿ ಸಂಸದ ಚೌಧರಿ ತೇಜವೀರ್‌ ಸಿಂಗ್‌, ಪಕ್ಷದ ಉತ್ತರ ಪ್ರದೇಶ ಘಟಕದ ಪ್ರಧಾನ ಕಾರ್ಯದರ್ಶಿ ಅಮರಪಾಲ ಮೌರ್ಯ, ಮಾಜಿ ರಾಜ್ಯ ಸಚಿವೆ ಸಂಗೀತಾ ಬಲ್ವಂತ್‌ (ಬೈಂಡ್‌), ಪಕ್ಷದ ವಕ್ತಾರ ಸುಧಾಂಶು ತ್ರಿವೇದಿ, ಮಾಜಿ ಶಾಸಕರಾದ ಸಾಧನಾ ಸಿಂಗ್‌, ಮಾಜಿ ಆಗ್ರಾ ಮೇಯರ್ ನವೀನ ಜೈನ್ ಮತ್ತು ಕೈಗಾರಿಕೋದ್ಯಮಿ ಸಂಜಯ ಸೇಠ್.
ಸಮಾಜವಾದಿ ಪಕ್ಷದಿಂದ, ನಟಿ-ಸಂಸದೆ ಜಯಾ ಬಚ್ಚನ್ ಮತ್ತು ದಲಿತ ನಾಯಕ ರಾಮಜಿಲಾಲ ಸುಮನ್ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಜಯಾ ಬಚ್ಚನ್ ಅವರು ಹೆಚ್ಚು ಮತಗಳನ್ನು ಪಡೆದರು, ಅವರ ಪರವಾಗಿ 41 ಸದಸ್ಯರು ಮತ ಚಲಾಯಿಸಿದರು.

ಪ್ರಮುಖ ಸುದ್ದಿ :-   ರೈತರಿಗೆ ಪಿಸ್ತೂಲ್ ತೋರಿಸಿದ ವೀಡಿಯೊ ವೈರಲ್‌ ; ವಿವಾದಿತ ಟ್ರೇನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ ತಾಯಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement