ವೀಡಿಯೊ..| ರಾಜ್ಯಸಭೆ ಚುನಾವಣೆಯಲ್ಲಿ ನಾಸಿರ್‌ ಹುಸೇನ್‌ ಗೆಲುವಿನ ಸಂಭ್ರಮದ ವೇಳೆ ಬೆಂಬಲಿಗರಿಂದ ಪಾಕಿಸ್ತಾನ್‌ ಜಿಂದಾಬಾದ್‌ ಘೋಷಣೆ ; ಬಿಜೆಪಿ ಆಕ್ರೋಶ

ಬೆಂಗಳೂರು : ಕರ್ನಾಟಕದ ನಾಲ್ಕು ಸ್ಥಾನಗಳಿಗೆ ಮಂಗಳವಾರ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮೂವರು ಅಭ್ಯರ್ಥಿಗಳು ಹಾಗೂ ಬಿಜೆಪಿಯ ಓರ್ವ ಅಭ್ಯರ್ಥಿ ಜಯಗಳಿಸಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ನಾಸಿರ್‌ ಹುಸೇನ್‌ ಅವರು ಜಯಗಳಿಸಿದ ನಂತರ ವಿಧಾನಸೌಧದಲ್ಲಿ ಅವರ ಬೆಂಬಲಿಗರು ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್‌ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ
ರಾಜ್ಯಸಭೆಯ ನೂತನ ಸಂಸದರಾಗಿ ಆಯ್ಕೆಯಾದ ಕಾಂಗ್ರೆಸ್‌ನ ನಾಸಿರ್‌ ಹುಸೇನ್‌ ಅವರ ಬೆಂಬಲಿಗರ ಪೈಕಿ ಒಬ್ಬ ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆ ಕೂಗಿದ್ದಾನೆ. ನಾಸೀರ್ ಹುಸೇನ್‌ ರಾಜ್ಯಸಭೆಗೆ ಆಯ್ಕೆಯಾದ ನಂತರ ಅವರ ಅಭಿಮಾನಿಗಳು ಹೂಹಾರ ಹಾಕಿ ಶುಭಾಶಯ ತಿಳಿಸುತ್ತಿದ್ದರು. ಈ ವೇಳೆ ನಾಸೀರ್ ಹುಸೇನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದಾಗ ಅವರ ಹಿಂದಿದ್ದ​ ಬೆಂಬಲಿಗನೊಬ್ಬ ಜಿಂದಾಬಾದ್ ಜಿಂದಾಬಾದ್ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾನೆ ಎಂದು ಆರೋಪಿಸಿರುವ ಬಿಜೆಪಿ ಈ ಕುರಿತು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ನಿಮ್ಮ ಕಾಂಗ್ರೆಸ್‌ ನ ನೂತನ ರಾಜ್ಯಸಭಾ ಸದಸ್ಯ ನಾಸಿರ್‌ ಹುಸೇನ್ ಬೆಂಬಲಿಗರು ವಿಧಾನಸೌಧದ ಆವರಣದಲ್ಲಿ ಪಾಕಿಸ್ಥಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ, ಅದು ಸತ್ಯವೇ ಆಗಿದ್ದಲ್ಲಿ ಸಂಸದ ನಾಸೀರ್ ಹುಸೇನ್ ಬೆಂಬಲಿಗರು ಕೂಗಿದ ಘೋಷಣೆ ಬಗ್ಗೆ ತನಿಖೆ ಮಾಡಿಸಿ, ದೇಶ ವಿರೋಧಿಗಳನ್ನು ಹೆಡೆಮುರಿ ಕಟ್ಟಿ ಎಂದು ಬಿಜೆಪಿ ಹೇಳಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಾಷ್ಟ್ರದ್ರೋಹದ ಘೋಷಣೆ ಭಾರತದ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದಲ್ಲೇ ಮೊಳಗಿದೆ. ಕಾಂಗ್ರೆಸ್ ದೇಶ ಸುಡುವ ಇನ್ನೆಷ್ಟು ಇಂತಹವರನ್ನು ತನ್ನ ಮಡಿಲಲ್ಲಿ ಕಟ್ಟಿ ಕೊಂಡಿರಬಹುದು ಎಂದು ಅಂದಾಜಿಸಲು ಇಂದಿನ ಘಟನೆ ಸಾಕ್ಷಿ ಒದಗಿಸಿದೆ ಎಂದು ಹೇಳಿದ್ದಾರೆ. ದುಷ್ಟ ಮನಸ್ಸಿನಿಂದ ಘೋಷಣೆ ಕೂಗಿರುವ ದೇಶ ವಿರೋಧಿ ನೀಚರನ್ನು ಈ ಕೂಡಲೇ ಬಂಧಿಸಿ ಕಠಿಣ ಶಿಕ್ಷೆಗೆ ಗುರಿ ಪಡಿಸಬೇಕು. ಸಾಕ್ಷಿಗಳೆಲ್ಲವೂ ಕಣ್ಣೆದುರಿಗೇ ಇರುವಾಗ ದೇಶ ವಿರೋಧಿಗಳನ್ನು ರಕ್ಷಿಸಲು ಯತ್ನಿಸುವ ಪ್ರಯತ್ನ ನಡೆದರೆ ಮುಂದಾಗುವ ಪರಿಣಾಮಕ್ಕೆ ಕಾಂಗ್ರೆಸ್ ಸರ್ಕಾರವೇ ಹೊಣೆಯಾಗಲಿದೆ. ನಮ್ಮ ಮುಂದಿನ ಹೋರಾಟ “ರಾಜ್ಯದ ರಕ್ಷಣೆಗಾಗಿ ಕಾಂಗ್ರೆಸ್ಸಿಗರೇ ವಿಧಾನ ಸೌಧ ಬಿಟ್ಟು ತೊಲಗಿ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪೋಕ್ಸೊ ಪ್ರಕರಣ: ಯಡಿಯೂರಪ್ಪಗೆ ಕೋರ್ಟ್‌ ಹಾಜರಿಗೆ ವಿನಾಯಿತಿ ನೀಡಿದ ಹೈಕೋರ್ಟ್‌

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಆರ್‌.ಅಶೋಕ ಅವರು, ಇಂದೊಂದು ದೇಶದ್ರೋಹಿ ಘೋಷಣೆಯಾಗಿದೆ. ‘ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮಾನ, ಮರ್ಯಾದೆ ನಾಚಿಕೆ ಇಲ್ಲ. ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ರಾಜ್ಯಪಾಲರು ಕಾಂಗ್ರೆಸ್ ಸರ್ಕಾರವನ್ನು ಕೂಡಲೇ ವಜಾ ಮಾಡಬೇಕು. ಈ ಪಾಕ್ ಪರ ಘೋಷಣೆ ಕೂಗಿರುವ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಅಶೋಕ್ ವಾಗ್ದಾಳಿ ನಡೆಸಿದರು.
ಚುನಾವಣೆಯಲ್ಲಿ ಗೆದ್ದರೆ ನಿಮ್ಮ ಅಭ್ಯರ್ಥಿಗಳಿಗೆ ಜೈಕಾರ ಹಾಕಿ, ನಿಮ್ಮ ಪಕ್ಷಕ್ಕೆ ಜೈಕಾರ ಹಾಕಿ, ನಾಯಕರಿಗೆ ಜೈಕಾರ ಹಾಕಿ, ಅದು ಬಿಟ್ಟು ಪಾಕಿಸ್ತಾನ ಜಿಂದಾಬಾದ್ ಎಂದು ನಿಮ್ಮ ಪಕ್ಷದ ಕಾರ್ಯಕರ್ತರು ಘೋಷಣೆ ಕೂಗುತ್ತಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ. ಈ ಬಗ್ಗೆ ಕಠಿಣ ಕ್ರಮಕ್ಕೆ ಮುಂದಾಗಿ ಎಂದು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ 7 ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೆ ಮಳೆ ಅಬ್ಬರ ; ಉಳಿದ ಜಿಲ್ಲೆಗಳಲ್ಲಿ ಚುರುಕು

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement