ಪತಂಜಲಿ ಔಷಧ ಜಾಹೀರಾತಿಗೆ ತಾತ್ಕಾಲಿಕ ನಿರ್ಬಂಧ ಹೇರಿದ ಸುಪ್ರೀಂ ಕೋರ್ಟ್ : ಪತಂಜಲಿ ಆಯುರ್ವೇದಕ್ಕೆ ನ್ಯಾಯಾಂಗ ನಿಂದನೆ ನೋಟಿಸ್‌

ನವದೆಹಲಿ: ಪತಂಜಲಿ ಆಯುರ್ವೇದ ಔಷಧಿಗಳ ಜಾಹೀರಾತುಗಳನ್ನು ನಿರ್ಬಂಧಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ಆದೇಶ ಹೊರಡಿಸಿದೆ.
ತನ್ನ ಔಷಧಿಗಳು ಕೆಲವು ರೋಗಗಳನ್ನು ಗುಣಪಡಿಸುತ್ತವೆ ಎಂದು ಯಾವುದೇ ಪ್ರಾಯೋಗಿಕ ಸಾಕ್ಷ್ಯಗಳಿಲ್ಲದಿದ್ದರೂ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡುವ ಮೂಲಕ ಪತಂಜಲಿ ದೇಶದ ಜನರ ದಿಕ್ಕುತಪ್ಪಿಸುತ್ತಿದೆ ಎಂದು ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೇವೇಳೆ ಬಾಬಾ ರಾಮದೇವ ಸಹ-ಮಾಲೀಕತ್ವದ ಪತಂಜಲಿ ಆಯುರ್ವೇದದ ” ದಾರಿ ತಪ್ಪಿಸುವ ಮತ್ತು ಸುಳ್ಳು” ಜಾಹೀರಾತುಗಳ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು.‘ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ’ ಎಂದು ಸುಪ್ರೀಂ ಕೋರ್ಟ್ ಆಕ್ಷೇಪ ವ್ಯಕ್ತಪಡಿಸಿತು.
ಔಷಧ ಮತ್ತು ಮಾಂತ್ರಿಕ ಪರಿಹಾರಗಳ (ಆಕ್ಷೇಪಾರ್ಹ ಜಾಹೀರಾತುಗಳ) ಕಾಯಿದೆಯಲ್ಲಿ ನಿರ್ದಿಷ್ಟಪಡಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದಾಗಿ ತಿಳಿಸಿ ಪತಂಜಲಿ ತನ್ನ ಯಾವುದೇ ಔಷಧೀಯ ಉತ್ಪನ್ನಗಳ ಜಾಹೀರಾತು ಅಥವಾ ಮಾರಾಟ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ.

ತನ್ನ ಉತ್ಪನ್ನಗಳಿಗೆ ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಇದೆ ಎಂದು ಸುಳ್ಳು ಮತ್ತು ದಾರಿತಪ್ಪಿಸುವಂತಹ ಪ್ರಚಾರ ಮಾಡುವುದನ್ನು ಮುಂದುವರೆಸುವ ಮೂಲಕ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ನ್ಯಾಯಾಲಯ ಪತಂಜಲಿ ಆಯುರ್ವೇದ ಸಂಸ್ಥಾಪಕರಾದ ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿತು. ಬಾಲಕೃಷ್ಣ ಅವರು ಪತಂಜಲಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.
ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಪ್ರಸ್ತುತ ಅರ್ಜಿಯನ್ನು 2022ರಲ್ಲಿ ಸಲ್ಲಿಸಲಾಗಿದ್ದರೂ ಅದನ್ನು ನಿಭಾಯಿಸದಿದ್ದಕ್ಕಾಗಿ ನ್ಯಾಯಾಲಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಇಡೀ ದೇಶವನ್ನು ದಿಕ್ಕು ತಪ್ಪಿಸಲಾಗಿದೆ. ಔಷಧ ಕಾಯಿದೆ ಇದನ್ನು ನಿಷೇಧಿಸಿದೆ ಎಂದು ಹೇಳಿದರೂ ನೀವು ಎರಡು ವರ್ಷದಿಂದ ಯಾಕೆ ಕ್ರಮ ಕೈಗೊಂಡಿಲ್ಲ?” ಎಂದು ನ್ಯಾಯಾಲಯ ಪ್ರಶ್ನಿಸಿತು. ಸರ್ಕಾರವು ಕೆಲವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಪೀಠ ಹೇಳಿದೆ.ತಪ್ಪುದಾರಿಗೆಳೆಯುವ “ಮಾಹಿತಿ ನೀಡುವ ಔಷಧಗಳ ಎಲ್ಲ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಜಾಹೀರಾತುಗಳನ್ನು ತಕ್ಷಣವೇ ಜಾರಿಗೆ ಬರುವಂತೆ ನಿಲ್ಲಿಸಬೇಕು ಎಂದು ಪೀಠವು ಕಂಪನಿಗೆ ನಿರ್ದೇಶನ ನೀಡಿದೆ. ತಪ್ಪು ದಾರಿಗೆಳೆಯುವ ವೈದ್ಯಕೀಯ ಜಾಹೀರಾತುಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಕೇಂದ್ರದ ಪರ ಹಾಜರಾದ ವಕೀಲರಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಅಡ್ವೊಕೇಟ್-ಆನ್-ರೆಕಾರ್ಡ್ ಅಮರಜೀತ ಸಿಂಗ್ ಅವರ ಮೂಲಕ ಸಲ್ಲಿಸಿದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ರೋಗಗಳನ್ನು ಗುಣಪಡಿಸುತ್ತದೆ ಎಂದು ಹೇಳಿಕೊಳ್ಳುವ ಪತಂಜಲಿ ಆಯುರ್ವೇದ ಉತ್ಪನ್ನಗಳ ಜಾಹೀರಾತಿನಲ್ಲಿ ಮಾಡಿದ ಪ್ರತಿಯೊಂದು ಸುಳ್ಳು ಪ್ರತಿಪಾದನೆಗಳಿಗೆ ತಲಾ ₹ 1 ಕೋಟಿ ದಂಡ ವಿಧಿಸುವುದಾಗಿ ಸುಪ್ರೀಂ ಕೋರ್ಟ್ ಕಳೆದ ನವೆಂಬರ್‌ನಲ್ಲಿ ಎಚ್ಚರಿಕೆ ನೀಡಿತ್ತು.
ಇಡೀ ಪ್ರಕರಣವನ್ನು ಅಲೋಪತಿ / ಆಧುನಿಕ ಔಷಧ ಮತ್ತು ಆಯುರ್ವೇದ ಉತ್ಪನ್ನಗಳ ನಡುವಿನ ಚರ್ಚೆಗೆ ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠ ತಿಳಿಸಿತ್ತು.

ದಾರಿತಪ್ಪಿಸುವ ವೈದ್ಯಕೀಯ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳುವ ಅಗತ್ಯವಿರುವುದರಿಂದ ಮುಂದೆ ಇಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ಮತ್ತು ಮಾಧ್ಯಮಗಳಲ್ಲಿ ಅಂತಹ ಹೇಳಿಕೆಗಳನ್ನು ನೀಡದಂತೆ ಅದು ಪತಂಜಲಿ ಆಯುರ್ವೇದಕ್ಕೆ ನಿರ್ದೇಶನ ನೀಡಿತ್ತು.
ವಿಚಾರಣೆಯ ವೇಳೆ, ಐಎಂಎ ಪರ ಹಿರಿಯ ವಕೀಲ ಪಿ ಎಸ್ ಪಟ್ವಾಲಿಯಾ ಅವರು ಪತಂಜಲಿಯ ತಪ್ಪುದಾರಿಗೆಳೆಯುವ ಹೇಳಿಕೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆಯುಷ್ ಸಚಿವಾಲಯ ಏನು ಹೇಳುತ್ತದೆ ಎಂದು ನ್ಯಾಯಾಲಯ ಕೇಳಿದಾಗ, ರಕ್ತದೊತ್ತಡದ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವುದಾಗಿ ಪತಂಜಲಿ ಹೇಳಿಕೊಳ್ಳಲು ಸಾಧ್ಯವಿಲ್ಲದ ಕಾರಣ ನಿಯಂತ್ರಣದ ಪ್ರಶ್ನೆಯೇ ಉದ್ಭವಿಸುತ್ತಿಲ್ಲ ಎಂದು ಪಟ್ವಾಲಿಯಾ ವಾದಿಸಿದರು.
ಪತಂಜಲಿ ಪರ ಹಿರಿಯ ವಕೀಲ ವಿಪಿನ್ ಸಾಂಘಿ ಸಮಯ ಕೋರಿದರು. ಈ ವೇಳೆ ಬಹುತೇಕ ಜಾಹಿರಾತುಗಳನ್ನು ನಿರ್ಬಂಧಿಸಲು ತಾನು ಆಲೋಚಿಸುತ್ತಿರುವುದಾಗಿ ನ್ಯಾಯಾಲಯ ಹೇಳಿತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

ಕೋವಿಡ್‌ ಸಂದರ್ಭದಲ್ಲಿ ಅಲೋಪತಿ ವೈದ್ಯಕೀಯ ಪದ್ಧತಿ ಮತ್ತು ಅದನ್ನು ಪಾಲಿಸುವ ವೈದ್ಯರಿಗೆ ಕಳಂಕ ತರುತ್ತಿದ್ದ ಬಗ್ಗೆ ಸುಪ್ರೀಂ ಕೋರ್ಟ್‌ ರಾಮದೇವ್‌ ಅವರನ್ನು ಆಗಸ್ಟ್ 2022 ರಲ್ಲಿ ಪ್ರಶ್ನಿಸಿತ್ತು.
ಪತಂಜಲಿ ರಾಯಭಾರಿ ವಿರುದ್ಧ ಐಎಂಎ ಅನೇಕ ಕ್ರಿಮಿನಲ್ ಕ್ರಮಗಳನ್ನು ಹೂಡಿತ್ತು. ರಾಮದೇವ ಅವರು ಇಂತಹ ಹೇಳಿಕೆಗಳನ್ನು ನೀಡಿದ ಅನೇಕ ನಿದರ್ಶನಗಳಿದ್ದು ಇವೆಲ್ಲವೂ ಕ್ರಮ ಕೈಗೊಳ್ಳಲು ಇರುವ ವಿಭಿನ್ನ ಕಾರಣಗಳಾಗಿವೆ ಎಂದು ಐಎಂಎ ಹೇಳಿತ್ತು.
ಹಿರಿಯ ವಕೀಲ ಪಟ್ವಾಲಿಯಾ ಅವರೊಂದಿಗೆ ವಕೀಲ ಪ್ರಭಾಸ್ ಬಜಾಜ್ ಐಎಂಎ ಪರವಾಗಿ ಹಾಜರಿದ್ದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಉಪಸ್ಥಿತರಿದ್ದರು. ವಕೀಲ ಮೃಣ್ಮಯಿ ಚಟರ್ಜಿ ಅವರು ಪ್ರಕರಣದ ಮಧ್ಯಸ್ಥಿಕೆದಾರರಾದ ನ್ಯಾಷನಲ್ ಅಸೋಸಿಯೇಷನ್ ಆಫ್ ಫಾರ್ಮಾಕಾಲಜಿ ಅಂಡ್ ಥೆರಪ್ಯೂಟಿಕ್ಸ್ ಅನ್ನು ಪ್ರತಿನಿಧಿಸಿದರು.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement