ಮುರುಘಾ ಮಠದ ಆಡಳಿತ ನಿರ್ವಹಣೆಗೆ 3 ದಿನದಲ್ಲಿ ಸಮಿತಿ ರಚಿಸಿ: ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ನವದೆಹಲಿ : ಚಿತ್ರದುರ್ಗದ ಮುರುಘಾ ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ನಿರ್ವಹಣೆಗೆ ಪೋಕ್ಸೊ ಪ್ರಕರಣದಲ್ಲಿ ಆರೋಪಿಯಾಗಿರುವ ಡಾ. ಶಿವಮೂರ್ತಿ ಮುರುಘಾ ಶರಣರು ಮತ್ತು ಎಚ್‌.ಏಕಾಂತಯ್ಯ (ಅರ್ಜಿದಾರ) ಅವರನ್ನು ಹೊರಗಿಟ್ಟು ಮೂರು ದಿನಗಳಲ್ಲಿ ಸಮಿತಿ ರಚಿಸಬೇಕು ಎಂದು ಮಂಗಳವಾರ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಆದೇಶಿಸಿದೆ.
ಎಚ್‌. ಏಕಾಂತಯ್ಯ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿಕ್ರಮನಾಥ ಮತ್ತು ಪ್ರಶಾಂತಕುಮಾರ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಮಠ, ಎಸ್‌ಜೆಎಂ ವಿದ್ಯಾಪೀಠದ ಅಡಿ ಬರುವ ಸಂಸ್ಥೆಗಳ ನಿರ್ವಹಣೆಗೆ ಸಮಿತಿ ರಚಿಸದೇ ಇದ್ದಲ್ಲಿ ಮೂರು ದಿನಗಳ ಒಳಗೆ ಅರ್ಜಿದಾರ ಏಕಾಂತಯ್ಯ ಮತ್ತು ಪ್ರತಿವಾದಿ ಶಿವಮೂರ್ತಿ ಮುರುಘಾ ಶರಣರನ್ನು ಹೊರಗಿಟ್ಟು ಸಮಿತಿ ರಚಿಸಬೇಕು ಎಂದು ಪೀಠವು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಯಾವುದೇ ಆರೋಪಿ ವ್ಯಕ್ತಿ ಸಮಿತಿಯ ಭಾಗವಾಗಬಾರದು ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಈ ಮಧ್ಯಂತರ ನಿರ್ದೇಶನವು ಅರ್ಜಿಗಳು ಇತ್ಯರ್ಥವಾಗುವವರೆಗೆ ಚಾಲ್ತಿಯಲ್ಲಿರಲಿದೆ ಎಂದು ಪೀಠವು ಆದೇಶದಲ್ಲಿ ಹೇಳಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲರು ಆರಂಭದಲ್ಲಿ ಮಠ, ಸಂಸ್ಥೆಗಳ ಮೇಲ್ವಿಚಾರಣೆಯನ್ನು ರಾಜ್ಯ ಸರ್ಕಾರ ರಚಿಸಿರುವ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಸಮಿತಿ ನೋಡಿಕೊಳ್ಳುತ್ತಿದೆ ಎಂದರು. ಬಳಿಕ ಈ ಸೂಚನೆಯನ್ನು ಖಾತರಿಪಡಿಸಿಕೊಂಡು ಅದನ್ನು ಪ್ರತ್ಯುತ್ತರ ಅಫಿಡವಿಟ್‌ನಲ್ಲಿ ಸಲ್ಲಿಸಲು ಕಾಲಾವಕಾಶ ಬೇಕೆಂದು ಕೋರಿದ್ದಾರೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಎರಡು ವಾರ ಕಾಲಾವಕಾಶ ನೀಡಲಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಶಿವಮೂರ್ತಿ ಮುರುಘಾ ಶರಣರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿದ್ಧಾರ್ಥ ಲೂಥ್ರಾ ಈಗಾಗಲೇ ಪ್ರತ್ಯುತ್ತರ ಅಫಿಡವಿಟ್‌ ಸಲ್ಲಿಸಿದ್ದು, ಹೆಚ್ಚುವರಿ ದಾಖಲೆ ಸಲ್ಲಿಸಲು ಎರಡು ವಾರ ಕಾಲಾವಕಾಶ ಕೋರಿದ್ದಾರೆ. ಅದಕ್ಕೂ ಸಮ್ಮತಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ. ಪೀಠವು ವಿಚಾರಣೆಯನ್ನು ಏಪ್ರಿಲ್‌ 2ಕ್ಕೆ ಮುಂದೂಡಿದೆ.
2023ರ ನವೆಂಬರ್‌ 8ರಂದು ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಚಿತ್ರದುರ್ಗ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಹೈಕೋರ್ಟ್‌ ಆದೇಶ ಮಾಡಿತ್ತು. ಚಿತ್ರದುರ್ಗದ ಎಸ್‌ಜೆಎಂ ವಿದ್ಯಾಪೀಠದ ದೈನಂದಿನ ವ್ಯವಹಾರಗಳನ್ನು ಹೊರತುಪಡಿಸಿ ಯಾವುದೇ ನೀತಿ-ನಿರ್ಧಾರಗಳನ್ನು ಕೈಗೊಳ್ಳಬಾರದು ಎಂದು ವಿದ್ಯಾಪೀಠದ ಅಧ್ಯಕ್ಷರಾಗಿರುವ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಕರ್ನಾಟಕ ಹೈಕೋರ್ಟ್‌ ಜನವರಿ 9ರಂದು ಮೌಖಿಕವಾಗಿ ಸೂಚಿಸಿತ್ತು.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement