ಪಾಕಿಸ್ತಾನ ಬಿಜೆಪಿಗೆ ಶತ್ರು ದೇಶವೇ ಹೊರತು ನಮಗಲ್ಲ : ವಿವಾದಕ್ಕೆ ಕಾರಣವಾದ ಕಾಂಗ್ರೆಸ್‌ ನಾಯಕ ಬಿಕೆ ಹರಿಪ್ರಸಾದ ಹೇಳಿಕೆ

ಬೆಂಗಳೂರು: ಬಿಜೆಪಿಗೆ ಪಾಕಿಸ್ತಾನವು “ಶತ್ರು ದೇಶ” ಆಗಿರಬಹುದು, ಆದರೆ ಕಾಂಗ್ರೆಸ್ ಪಕ್ಷವು ಪಾಕಿಸ್ತಾನವನ್ನು ನೆರೆಯ ರಾಷ್ಟ್ರವೆಂದು ಪರಿಗಣಿಸುತ್ತದೆ ಎಂದು ರಾಜ್ಯ ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ವಿಧಾನ ಪರಿಷತ್ ಕಲಾಪದಲ್ಲಿ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಹಿರಿಯ ಕಾಂಗ್ರೆಸ್‌ ನಾಯಕ ಹರಿಪ್ರಸಾದ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೋಮವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ವಿಜಯಶಾಲಿ ಎಂದು ಘೋಷಿಸಿದ ನಂತರ ವಿಧಾನಸೌಧದಲ್ಲಿ ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಒಬ್ಬ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದ ಏಂದು ಆರೋಪಿಸಲಾಗಿದೆ. ಈ ಸಂಬಂಧ ಆರೋಪಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಬಿಜೆಪಿ ಬುಧವಾರ ಉಭಯ ಸದನಗಳಲ್ಲಿ ಗದ್ದಲ ಮಾಡಿದೆ.

ಪರಿಷತ್ತಿನಲ್ಲಿ ನಡೆದ ಚರ್ಚೆಯ ವೇಳೆ ಹರಿಪ್ರಸಾದ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಶತ್ರು ದೇಶ ಎಂದರೆ ನಿಮ್ಮ (ಬಿಜೆಪಿ) ಪ್ರಕಾರ ಅದು ಪಾಕಿಸ್ತಾನ. ಆದರೆ, ನಮಗೆ ಅದು ಶತ್ರು ದೇಶವಲ್ಲ, ಅದು ನಮಗೆ ನೆರೆಯ ದೇಶ ಮಾತ್ರ. ಇತ್ತೀಚೆಗೆ ಕೇಂದ್ರ ಸರ್ಕಾರ ಎಲ್‌ಕೆ ಆಡ್ವಾಣಿಗೆ ಭಾರತ ರತ್ನ ನೀಡಿ ಗೌರವಿಸಿತು. ಆದರೆ, ಅವರು ಪಾಕಿಸ್ತಾನದ ಲಾಹೋರ್‌ನಲ್ಲಿರುವ ಜಿನ್ನಾ ಸಮಾಧಿಗೆ ಭೇಟಿ ನೀಡಿ, ಜಾತ್ಯತೀತ ನಾಯಕ ಎಂದು ಹೇಳಿದ್ದರು. ಆಗ ಬಿಜೆಪಿಗರಿಗೆ ಪಾಕಿಸ್ತಾನ ಶತ್ರು ದೇಶವಾಗಿರಲಿಲ್ಲವೇ?…ಕಾಂಗ್ರೆಸ್ ಭಾರತದ ವಿರುದ್ಧ ನಾಲ್ಕು ಬಾರಿ ಯುದ್ಧ ಮಾಡಿದ ನಂತರವೂ ಪಾಕಿಸ್ತಾನವನ್ನು “ಶತ್ರು ರಾಷ್ಟ್ರ” ಎಂದು ಕಾಂಗ್ರೆಸ್‌ ಕರೆಯುವುದಿಲ್ಲ ಎಂದು ಹೇಳಿದರು. ಈ ಹೇಳಿಕೆ ಬೆನ್ನಲ್ಲೇ ಹರಿಪ್ರಸಾದ ಅವರ ಹೇಳಿಕೆ ಕಾಂಗ್ರೆಸ್ ಪಾಕಿಸ್ತಾನದ ಬಗ್ಗೆ ಮೃದುತ್ವವನ್ನು ತೋರಿಸುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಈ ನಡುವೆ ತಮ್ಮ ಹೇಳಿಕೆಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ ನಂತರ ಸಾಮಾಜಿಕ ಜಾಲತಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಹರಿಪ್ರಸಾದ ಅವರು, ಬಿಜೆಪಿ ಪಕ್ಕಕ್ಕೂ, ಪಾಕಿಸ್ತಾನದ ನೆಂಟಸ್ತನಕ್ಕೂ ಹಲವು ದಶಕಗಳ ಇತಿಹಾಸವಿದೆ. ಪಾಕಿಸ್ತಾನದ ಜಪ ಮಾಡದೆ ಬಿಜೆಪಿ ಚುನಾವಣೆ ಎದುರಿಸಿದ ಇತಿಹಾಸವೇ ಇಲ್ಲ. ಪಾಕಿಸ್ತಾನದ ಮೇಲೆ ಬಿಜೆಪಿಗೆ ನಿಜಕ್ಕೂ ರೋಷ,ವೇಷ ಇದ್ದರೆ “ಶತ್ರುರಾಷ್ಟ್ರ” ಎಂದು ಘೋಷಿಸಲಿ ಎಂದು ಸವಾಲು ಹಾಕಿದ್ದಾರೆ.

ಒಕ್ಕೂಟ ಭಾರತವನ್ನು ಇಬ್ಭಾಗ ಮಾಡಿದ ಮೊಹಮ್ಮದ್ ಅಲಿ ಜಿನ್ನಾಗೆ “ಜಾತ್ಯಾತೀತ ನಾಯಕ”ಎಂದು ಬಿರುದು ನೀಡಿ, ಸಮಾಧಿ ಎದುರು ಕಣ್ಣೀರು ಸುರಿಸಿದ ಲಾಲ್ ಕೃಷ್ಣ ಅಡ್ವಾನಿ ಯಾವ ಪಕ್ಷದವರು? ಪಾಕಿಸ್ತಾನವನ್ನು ‘ಭಯೋತ್ಪಾದನೆ ಪ್ರಾಯೋಜಿತ ರಾಷ್ಟ್ರವೆಂದು ಘೋಷಣೆ ಮಾಡಬೇಕು ಎಂದು ಸಂಸತ್ತಿನಲ್ಲಿ ಬಿಜೆಪಿ ಸಂಸದ ರಾಜೀವ ಚಂದ್ರಶೇಖರ ಮಂಡಿಸಿದ್ದ ಖಾಸಗಿ ಮಸೂದೆಯನ್ನು ವಾಪಸ್ ಪಡೆದಿದ್ದು ಯಾಕೆ? 56 ಇಂಚಿನ ಎದೆಯಲ್ಲಿ ಧೈರ್ಯ ಇರಲಿಲ್ಲವೇ? ಯಾರ ಒತ್ತಡದಿಂದ ಮಸೂದೆ ವಾಪಾಸ್ ಪಡೆಯಲಾಯಿತು? ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿರುವ ಸಕ್ಕರೆ ಸೇರಿದಂತೆ ಎಲ್ಲಾ ವ್ಯವಹಾರವನ್ನು ನಿಲ್ಲಿಸಲು ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಧೈರ್ಯ ಇದ್ಯಾ? ಬೀದಿಯಲ್ಲಿ ನಿಂತು ಬೊಬ್ಬೆ ಹಾಕುತ್ತಿರುವ ಬಿಜೆಪಿ, ಪಾಕಿಸ್ತಾನದ ಮೂಲಕ ರಾಜಕೀಯ ಬೇಳೆ ಬೆಳೆಸುತ್ತಿರುವುದು ಪುಲ್ವಾಮ ದಾಳಿಯಲ್ಲೇ ಸಾಬೀತಾಗಿದೆ. ರಾಜ್ಯದ ಜನರನ್ನ ಮೂರ್ಖರನ್ನಾಗಿ ಮಾಡಲು ಹೋಗಿ, ಮುಖವಾಡ ಬಯಲಾಗುತ್ತಿರುವುದು ಸ್ಪಷ್ಟವಾಗಿದೆ ಎಂದ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement