ವಿಧಾನಸೌಧದಲ್ಲಿ ಪಾಕ್​ ಪರ ​ಘೋಷಣೆ ಕೂಗಿರುವುದು ಎಫ್​ಎಸ್​ಎಲ್​​ ವರದಿಯಲ್ಲಿ ದೃಢ: ಬಿಜೆಪಿ ಟ್ವೀಟ್

ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ಸಿನ ಡಾ ನಾಸಿರ್‌ ಹುಸೇನ್ ಪರ ಬೆಂಬಲಿಗರು ವಿಧಾನಸೌಧ ಆವರಣದಲ್ಲಿ ಸಂಭ್ರಮಾಚರಣೆ ಮಾಡುವ ವೇಳೆ ‘ಪಾಕಿಸ್ತಾನ​ ಜಿಂದಾಬಾದ್​​ ಘೋಷಣೆ’ ಕೂಗಿರುವುದು ವಿಧಿ ವಿಜ್ಞಾನ ಪ್ರಯೋಗಾಲಯ (FSL)​ ಪರೀಕ್ಷೆಯಲ್ಲಿ ದೃಢಪಟ್ಟಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಈ ಕುರಿತು ಟ್ವೀಟ್​ ಮಾಡಿರುವ ಬಿಜೆಪಿ “ವಿಧಾನಸೌಧದ ಒಳಗೆ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಎಫ್​ಎಸ್​ಎಲ್​ ವರದಿಯಲ್ಲಿ ಬಹಿರಂಗವಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದನ್ನು “ನಾಸೀರ್ ಸಾಬ್ ಜಿಂದಾಬಾದ್” ಎಂದು ತಿರುಚಿ ಕನ್ನಡಿಗರಿಗೆ ಟೋಪಿ ಹಾಕಲು ಹೊರಟ ಹುನ್ನಾರ ಈಗ ಎಫ್​ಎಸ್​ಎಲ್​ (FSL) ವರದಿಯಲ್ಲಿ ಬಟಾ ಬಯಲಾಗಿದೆ” ಎಂದು ಕಾಂಗ್ರೆಸ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಸತ್ಯವನ್ನೇ ತಿರುಚಿ ಸುಳ್ಳು ಮಾಡಿ ಪ್ರಚಾರ ಮಾಡಿದ ಕಾಂಗ್ರೆಸ್ಸಿಗರೇ ಸುಳ್ಳು ಸುದ್ದಿಗಳ ಸೃಷ್ಟಿಕರ್ತರು ಎಂಬುದನ್ನು ವೈಜ್ಞಾನಿಕ ವರದಿ ಬಹಿರಂಗಪಡಿಸಿದೆ. ರಾಷ್ಟ್ರ ವಿರೋಧಿ ಧೋರಣೆಯ ಕಾಂಗ್ರೆಸ್​ ಹಾಗೂ ಸುಳ್ಳು ಸುದ್ದಿ ಕಾರ್ಖಾನೆಯ ಮುಖ್ಯಸ್ಥರಾದ ಪ್ರಿಯಾಂಕ್ ಖರ್ಗೆ ಅವರು ಈಗಲಾದರೂ ದೇಶದ್ರೋಹದ ಕೃತ್ಯವನ್ನು ಒಪ್ಪಿಕೊಂಡು ವಿಧಾನಸೌಧದ ಎದುರು ಸಾಷ್ಟಾಂಗ ನಮಸ್ಕಾರ ಮಾಡಿ ಕನ್ನಡಿಗರ ಕ್ಷಮೆ ಕೋರಬೇಕು ಎಂದು ಬಿಜೆಪಿ ಒತ್ತಾಯಿಸಿದೆ.

ಆದರೆ ಈ ವರದಿ ಖಾಸಗಿ ವರದಿ ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ನಿಜ ಎಂದು ಸರ್ಕಾರ ಅಧಿಕೃತವಾಗಿ ಯಾವುದೆ ಹೇಳಿಕೆಯನ್ನು ನೀಡಿಲ್ಲ.
ಖಾಸಗಿ ಸಂಸ್ಥೆಯವರು ನೀಡಿರುವ ಎಫ್​ಎಸ್​ಎಲ್ (FSL)​​ ವರದಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಗೃಹ ಸಚಿವರಾದ ಡಾ.ಜಿ. ಪರಮೇಶ್ವರ (G Parmeshwar)​​ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ ಪ್ರವೇಶ ಪತ್ರ ಪ್ರಕಟ: ಜೂನ್‌ 30 ರಂದು ಪರೀಕ್ಷೆ

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ಎಫ್​ಎಸ್​ಎಲ್​, ಗೃಹ ಇಲಾಖೆಯ ಫಾರೆನ್ಸಿಕ್ ವರದಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿರುವುದು ಧೃಡವಾದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಇದರಲ್ಲಿ ಮುಚ್ಚಿಡುವಂಥದ್ದೇನಿಲ್ಲ, ಎಫ್​ಎಸ್​ಎಲ್‌ಗೆ ನೀಡಲಾದ ವೀಡಿಯೊಗಳು ಒಂದು ಚಾನೆಲ್ ಅಥವಾ ಒಂದು ಕ್ಲಿಪ್‌ ಅಲ್ಲ. ಹಲವಾರು ವೀಡಿಯೊ ಪ್ಪಿಂಗ್‌ಗಳನ್ನು ಭದ್ರಪಡಿಸಿ ಎಫ್‌ಎಸ್‌ಎಲ್‌ಗೆ ನೀಡಲಾಗಿದೆ. ಇದರ ವರದಿ ಬರಬೇಕಿದ್ದು, ವರದಿ ಬಂದರೆ ತಕ್ಷಣ ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ ಹೇಳಿದ್ದಾರೆ.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement