ನವದೆಹಲಿ: ಕಳೆದ ವರ್ಷ ಸನಾತನ ಧರ್ಮದ ವಿರುದ್ಧ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರನ್ನು ಸುಪ್ರೀಂ ಕೋರ್ಟ್ ಸೋಮವಾರ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸ್ಟಾಲಿನ್ ಅವರು ಸಂವಿಧಾನದ 19 (1) (ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 25 ವಿಧಿ (ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಧರ್ಮದೆಡೆಗಿನ ನಿಷ್ಠೆ, ಆಚರಣೆ ಮತ್ತು ಪ್ರಸರಣದ ಹಕ್ಕು) ಅಡಿಯಲ್ಲಿ ನೀಡಲಾಗಿರುವ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಂಕರ ದತ್ತಾ ಅವರಿದ್ದ ಪೀಠ ಮೌಖಿಕವಾಗಿ ಟೀಕಿಸಿದೆ. ಸ್ಟಾಲಿನ್ ತಮ್ಮ ಹೇಳಿಕೆಯ ಪರಿಣಾಮಗಳ ಬಗ್ಗೆ ತಿಳಿದುಕೊಂಡು ವರ್ತಿಸಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ.
“ನೀವು 19 (1) ಎ ಮತ್ತು 25ನೇ ವಿಧಿಯಡಿ ನಿಮ್ಮ ಹಕ್ಕುಗಳನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ಈಗ 32ನೇ ವಿಧಿಯಡಿ (ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್ ಎಡತಾಕುವುದು) ಅರ್ಜಿ ಸಲ್ಲಿಸಿದ್ದೀರಿ ಎಂದು ನಿಮಗೆ ತಿಳಿದಿದೆಯೇ? ಇದರ ಪರಿಣಾಮಗಳನ್ನು ನೀವು ಅರಿತುಕೊಳ್ಳಬೇಕು, ನೀವೊಬ್ಬರು ಸಚಿವರಾಗಿದ್ದೀರಿ. ಸಾಮಾನ್ಯ ವ್ಯಕ್ತಿಯಲ್ಲ. ನೀವು ನಿಮ್ಮ ಹೇಳಿಕೆಯಿಂದಾಗುವ ಪರಿಣಾಮಗಳ ಬಗ್ಗೆ ಅರಿತು ವರ್ತಿಸಬೇಕಿತ್ತು ಎಂದು ನ್ಯಾಯಾಲಯ ಹೇಳಿದೆ.
ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ತನ್ನ ವಿರುದ್ಧ ದಾಖಲಾದ ವಿವಿಧ ಎಫ್ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಉದಯನಿಧಿ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸೆಪ್ಟೆಂಬರ್ 2, 2023 ರಂದು, ಚೆನ್ನೈನಲ್ಲಿ ತಮಿಳುನಾಡು ಪ್ರಗತಿಪರ ಬರಹಗಾರರ ಕಲಾವಿದರ ಸಂಘ ಆಯೋಜಿಸಿದ್ದ ಸಮ್ಮೇಳನದಲ್ಲಿ, ಉದಯನಿಧಿ ಸ್ಟಾಲಿನ್ ಅವರು, ಡೆಂಗಿ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೋನಾ ವೈರಸ್ ನಿರ್ಮೂಲನೆ ಮಾಡುವಂತೆಯೇ, ನಾವು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕಾಗುತ್ತದೆ” ಎಂದು ಅವರು ಹೇಳಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.
ಇದಾದ ಕೆಲವೇ ದಿನಗಳಲ್ಲಿ 14 ಮಂದಿ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳು ಸೇರಿದಂತೆ 262 ಮಂದಿ ಉದಯನಿಧಿ ಅವರ ವಿರುದ್ಧ ಸ್ವಯಂಪ್ರೇರಿತ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಪತ್ರ ಬರೆದಿದ್ದರು. ನಂತರ ಸ್ಟಾಲಿನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಕಳೆದ ತಿಂಗಳು ಬೆಂಗಳೂರಿನ ವಿಚಾರಣಾ ನ್ಯಾಯಾಲಯ ಸ್ಟಾಲಿನ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆದೇಶಿಸಿತ್ತು.
ಸ್ಟಾಲಿನ್ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕುವಂತೆ ಸಲ್ಲಿಸಲಾಗಿದ್ದ ಅರ್ಜಿಗಳು ಮದ್ರಾಸ್ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿವೆ. ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಉದಯನಿಧಿ ಅವರು ಪ್ರಸ್ತುತ ತಮಿಳುನಾಡಿನ ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿದ್ದಾರೆ.
ಈ ಮಧ್ಯೆ ಸನಾತನ ಧರ್ಮದ ಬಗ್ಗೆ ತಾವು ನೀಡಿದ್ದ ಹೇಳಿಕೆ ಹಿಂದೂ ಧರ್ಮ ಅಥವಾ ಹಿಂದೂ ಜೀವನ ವಿಧಾನಕ್ಕೆ ವಿರುದ್ಧವಾದುದಾಗಿರಲಿಲ್ಲ ಬದಲಿಗೆ ಜಾತಿ ತಾರತಮ್ಯ ಕೊನೆಗೊಳಿಸುವ ಉದ್ದೇಶ ಹೊಂದಿತ್ತು ಎಂದು ಉದಯನಿಧಿ ಸ್ಟಾಲಿನ್ ಸ್ಪಷ್ಟಪಡಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ