ಧುಲೆ (ಮಹಾರಾಷ್ಟ್ರ) : ಮಹಾರಾಷ್ಟ್ರದ ಧುಲೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಐದು ಗಂಟೆಗಳ ಕಾಲ ಲೋಹದ ಪಾತ್ರೆಯೊಳಗೆ ತಲೆ ಸಿಲುಕಿಸಿಕೊಂಡಿದ್ದ ಗಂಡು ಚಿರತೆಯನ್ನು ಅರಣ್ಯಾಧಿಕಾರಿಗಳು ರಕ್ಷಿಸಿದ್ದಾರೆ.
ಚಿರತೆ ಗಂಟೆಗಟ್ಟಲೆ ಹರಸಾಹಸಪಟ್ಟು ಸಂಕಷ್ಟದಿಂದ ಪಾರಾಗಲು ಯತ್ನಿಸಿತು. ಆದರೆ, ಅದಕ್ಕೆ ಪಾರಾಗಲು ಸಾಧ್ಯವಾಗಲಿಲ್ಲ. ಅರಣ್ಯಾಧಿಕಾರಿಗಳು ಆಗಮಿಸಿ ಕಂಗಾಲಾಗಿದ್ದ ಚಿರತೆಯನ್ನು ಶಾಂತಗೊಳಿಸಿ, ನಂತರ ಎಚ್ಚರಿಕೆಯಿಂದ ಲೋಹದ ಪಾತ್ರೆಯನ್ನು ಕಟ್ ಮಾಡಿ ಚಿರತೆಯ ತಲೆಯನ್ನು ಅದರಿಂದ ಹೊರ ತೆಗೆದರು.
ಕಾಡು ನಾಶವಾಗುತ್ತಿದ್ದು, ಆಹಾರ ಅರಸಿಕೊಂಡು ಪ್ರಾಣಿಗಳು ನಾಡಿನತ್ತ ಬರುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಈ ಚಿರತೆ ಧುಲೆ ಜಿಲ್ಲೆಯ ಹಳ್ಳಿಯೊಂದಕ್ಕೆ ಬಂದಿದೆ. ದನದ ಕೊಟ್ಟಿಗೆ ಪ್ರವೇಶಿಸುತ್ತಿದ್ದಂತೆ ಅಲ್ಲಿದ್ದ ಲೋಹದ ಪಾತ್ರೆಯೊಳಗೆ ತಲೆ ಹಾಕಿದೆ. ಆದರೆ ಅದರಿಂದ ತಲೆಯನ್ನು ಹೊರ ತೆಗೆಯಲು ಅದಕ್ಕೆ ಸಾಧ್ಯವಾಗಲಿಲ್ಲ.
ಪಾತ್ರೆಯೊಳಗೆ ತಲೆ ಸಿಲುಕಿಸಿಕೊಂಡ ಚಿರತೆ ಸುಮಾರು 5 ಗಂಟೆಗಳ ಕಾಲ ಚಿರತೆ ಒದ್ದಾಡಿದೆ. ಬಳಿಕ ಈ ಗಂಡು ಚಿರತೆಯನ್ನು ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿದ್ದಾರೆ.
“ಧೂಲೆ ಜಿಲ್ಲೆಯ ಹಳ್ಳಿಯೊಂದರಲ್ಲಿ ಚಿರತೆಯೊಂದು ಲೋಹದ ಪಾತ್ರೆಯಲ್ಲಿ ತಲೆ ಸಿಲುಕಿಸಿಕೊಂಡು ಐದು ಗಂಟೆಗಳ ಕಾಲ ಒದ್ದಾಡಿದೆ. ನಂತರ ಅದನ್ನು ಅರಣ್ಯ ಇಲಾಖೆ ರಕ್ಷಿಸಿದೆ” ಎಂದು ರೇಂಜ್ ಫಾರೆಸ್ಟ್ ಆಫೀಸರ್ ಸವಿತಾ ಸೋನಾವಾನೆ ಹೇಳಿದ್ದಾರೆ.
ಫೆಬ್ರವರಿ 29 ರಂದು ಕೇಂದ್ರ ಪರಿಸರ ಸಚಿವಾಲಯ ಬಿಡುಗಡೆ ಮಾಡಿದ ‘ಭಾರತದಲ್ಲಿ ಚಿರತೆಗಳ ಸ್ಥಿತಿಗತಿ- 2022 (Status of Leopards in India, 2022) ವರದಿಯ ಪ್ರಕಾರ, ಭಾರತದಲ್ಲಿ ಅಂದಾಜು 13,874 ಚಿರತೆಗಳಿವೆ, 2018 ರಲ್ಲಿ 12,852 ಚಿರತೆಗಳಿದ್ದವು.
ಮಧ್ಯಪ್ರದೇಶದಲ್ಲಿ (3,907) ಅತಿ ಹೆಚ್ಚು ಚಿರತೆಗಳಿವೆ ಎಂದು ವರದಿ ಹೇಳಿದೆ. ಮಹಾರಾಷ್ಟ್ರ (1,985), ಕರ್ನಾಟಕ (1,879) ಮತ್ತು ತಮಿಳುನಾಡು (1,070) ಚಿರತೆಗಳಿವೆ. ಉತ್ತರಾಖಂಡವು ಚಿರತೆಗಳ ಸಂಖ್ಯೆಯಲ್ಲಿ ಶೇಕಡಾ 22 ರಷ್ಟು ಕುಸಿತವಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ