ಶಿರಸಿ: ಇತ್ತೀಚಿಗೆ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ಪಕ್ಷದ ವಿಪ್ ಇದ್ದರೂ ಮತದಾನಕ್ಕೆ ಗೈರಾಗುವ ಮೂಲಕ ಸುದ್ದಿಯಲ್ಲಿದ್ದ ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಅವರು ಫ್ಲೆಕ್ಸ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಬನವಾಸಿಯ ಕದಂಬೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಭಾವಚಿತ್ರ ಇರುವ ಫ್ಲೆಕ್ಸ್ ಹಾಕಿ ಸ್ವಾಗತ ಕೋರುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ಕನ್ನಡದ ಪ್ರಥಮ ರಾಜಧಾನಿ ಬನವಾಸಿಯಲ್ಲಿ ಮಾರ್ಚ್ 5 ಮತ್ತು ಮಾರ್ಚ್ 6ರಂದು ಕದಂಬೋತ್ಸವ ಆಯೋಜಿಸಲಾಗಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ದೊಡ್ಡದೊಡ್ಡ ಫ್ಲೆಕ್ಸ್ ಹಾಕಿ ಅದರಲ್ಲಿ ತಮ್ಮ ಭಾವಚಿತ್ರವನ್ನೂ ಹಾಕಿ ಸ್ವಾಗತ ಕೋರಿರುವುದು ಚರ್ಚೆಗೆ ಗ್ರಾಸವಾಗಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಯಶವಂತಪುರ ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ ಹಾಗೂ ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಬಿಜೆಪಿಗೆ ಶಾಕ್ ನೀಡಿದ್ದರು. ಶಾಸಕ ಎಸ್ಟಿ ಸೋಮಶೇಖರ ಅವರು ಬಿಜೆಪಿ ಅಭ್ಯರ್ಥಿಗೆ ಮತಹಾಕುವ ಬದಲಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಶಾಕ್ ಕೊಟ್ಟಿದ್ದರು. ಶಿವರಾಮ ಹೆಬ್ಬಾರ ಮತದಾನಕ್ಕೆ ಗೈರಾಗಗಿ ಬಿಜೆಪಿಗೆ ಶಾಕ್ ನೀಡಿದ್ದರು. ಶಿವರಾಮ್ ಹೆಬ್ಬಾರ್ ಯಾರ ಸಂಪರ್ಕಕ್ಕೂ ಸಿಗದೇ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಇವರಿಬ್ಬರು ಕಾಂಗ್ರೆಸ್‌ಗೆ ಹೋಗಬಹುದು ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಲೇ ಇದೆ. ಈಗ ಶಿವರಾಮ ಹೆಬ್ಬಾರ ಅವರ ಫ್ಲೆಕ್ಸ್ ನಡೆ ಮತ್ತೊಮ್ಮೆ ಚರ್ಚೆಯಲ್ಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ