ಬೆಂಗಳೂರು : ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಕೈಗೆತ್ತಿಕೊಂಡಿರುವ ಎನ್ಐಎ ತಂಡ ತನಿಖೆ ಚುರುಕುಗೊಳಿಸಿದೆ. ಶಂಕಿತ ಉಗ್ರನ ಸುಳಿವು ನೀಡಿದವರಿಗೆ 10 ಲಕ್ಷ ರೂ.ನಗದು ಬಹುಮಾನ ನೀಡುವುದಾಗಿ ಘೋಷಿಸಿ ಬಾಂಬರ್‌ನ ಸಿಸಿಟಿವಿ ಫೋಟೋವೊಂದನ್ನು ಎನ್‌ಐಎ ಬುಧವಾರ ಬಿಡುಗಡೆ ಮಾಡಿತ್ತು. ಈಗ ಇದೇ ಫೋಟೋವನ್ನ ಆಧಾರವಾಗಿಟ್ಟುಕೊಂಡು ಕಲಾವಿದ ಹರ್ಷ ಎಂಬವರು ಬಾಂಬರ್’ನ ರೇಖಾ ಚಿತ್ರವನ್ನು ಬಿಡಿಸಿದ್ದು, ಈ ರೇಖಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಳೆದ ಶುಕ್ರವಾರ ದಿ ರಾಮೇಶ್ವರಂ ಕೆಫೆಯಲ್ಲಿ ಲಘು ತೀವ್ರತೆಯ ಬಾಂಬ್ ಸ್ಫೋಟಗೊಂಡಿತ್ತು. ಆರು ದಿನ ಕಳೆದರೂ ಆರೋಪಿಯ ಪತ್ತೆಯಾಗಿಲ್ಲ. ಶಂಕಿತ ಉಗ್ರನ ಸುಳಿವು ಕೊಟ್ಟರೆ 10 ಲಕ್ಷ ರೂ. ನಗದು ಬಹುಮಾನ ಕೊಡುವುದಾಗಿ ಎನ್‌ಐಎ ಘೋಷಿಸಿತ್ತು. ಸಿಸಿಟಿವಿಯಲ್ಲಿ ಬಾಂಬರ್ ದೃಶ್ಯ ಸಮರ್ಪಕವಾಗಿ ಸೆರೆಯಾಗದ ಕಾರಣ ರೇಖಾಚಿತ್ರ ಬಿಡುಗಡೆ ಮಾಡಲು ಸಿಸಿಬಿ ಪೊಲೀಸರು ಸಿದ್ಧತೆ ನಡೆಸಿದ್ದರು.
ಸಿಸಿಟಿವಿಯಲ್ಲಿ ಸೆರೆಯಾಗಿರುವ ಅಸ್ಪಷ್ಟವಾಗಿರುವ ಫೋಟೋವನ್ನು ಅಧಾರಿತವಾಗಿಟ್ಟು ಹರ್ಷಾ ಅವರು ಇಮ್ಯಾಜನರಿ ಸ್ಕೆಚ್ ಬಿಡಿಸಿದ್ದಾರೆ. ಸಂಪೂರ್ಣ ಮುಖದ ರೇಖಾ ಚಿತ್ರ ಬಿಡಿಸಿರುವ ಅವರು, ನಾಲ್ಕು ಕೋನಗಳ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ. ಈ ರೇಖಾ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಎನ್ಐಎ ಮತ್ತು ನಗರ ಪೊಲೀಸರಿಗೆ ಟ್ಯಾಗ್ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ರಾಜ್ಯದ ಹಲವು ಜಿಲ್ಲೆಗಳಲ್ಲಿ ತನಿಖೆ ನಡೆಸುತ್ತಿದೆ. ಬಾಂಬ್ ಬ್ಲಾಸ್ ಆರೋಪಿ ಬಾಂಬ್ ಸ್ಫೋಟಗೊಂಡ ಬಳಿಕ ತುಮಕೂರು ಮೂಲಕ ಬಳ್ಳಾರಿ ಬಸ್ ನಿಲ್ದಾಣಕ್ಕೆ ಬಂದಿದಿದ್ದಾನೆ ಎಂಬ ಮಾಹಿತಿಯ ಆಧಾರ ಮೇಲೆ ಎನ್ಐಎ ತಂಡ ತನಿಖೆ ನಡೆಸಿದೆ.
ಬೆಂಗಳೂರಿಂದ ಎರಡು ತಂಡಗಳು ಎರಡು ಕಾರುಗಳಲ್ಲಿ ಬಂದು ತನಿಖೆ ನಡೆಸಿದ್ದಾರೆ. ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಬಂದಿದ್ದಾರೆ. ಬಳ್ಳಾರಿಯಿಂದಲೇ ಬೇರೆಡೆ ತೆರಳಿದ ಸಂದೇಹದ ಮೇಲೆ ಬಳ್ಳಾರಿ ನಿಲ್ದಾಣದಲ್ಲಿ ಮಾಹಿತಿ ಪಡೆದಿದ್ದಾರೆ.
ಶಂಕಿತ ಉಗ್ರನ ಸುಳಿವು ಇದ್ದರೆ 080-29510900, 8904241100 ಸಂಖ್ಯೆಗೆ ಕರೆ ಮಾಡಿ ಎಂದು ಎನ್ಐಎ ಪ್ರಕಟಣೆಯಲ್ಲಿ ತಿಳಿಸಿದೆ. [email protected] ಗೂ ಮೇಲ್ ಮಾಡಿ ಶಂಕಿತನ ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳಬಹುದಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ