ಸರ್ಕಾರದ ಸುತ್ತೋಲೆ ಎತ್ತಿ ಹಿಡಿದ ಹೈಕೋರ್ಟ್ : 5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ವಿಭಾಗೀಯ ಪೀಠ ಅನುಮತಿ

ಬೆಂಗಳೂರು : ರಾಜ್ಯ ಪಠ್ಯಕ್ರಮವಿರುವ ಶಾಲೆಗಳ 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಪರೀಕ್ಷೆ ನಡೆಸಲು ಹೈಕೋರ್ಟ್‌ ವಿಭಾಗೀಯ ಪೀಠ ಗುರುವಾರ ಅನುಮತಿ ನೀಡಿದೆ. ಹೀಗಾಗಿ, ಪರೀಕ್ಷೆ ನಡೆಸುವ ಕುರಿತು ಉಂಟಾಗಿದ್ದ ಗೊಂದಲ ದೂರವಾಗಿದೆ.
ಕಳೆದ ವರ್ಷದ ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ಮಾರ್ಚ್‌ 6ರಂದು ಏಕಸದಸ್ಯ ಪೀಠ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಈಗ ಏಕ ಸದಸ್ಯ ಪೀಠದ ಆದೇಶಕ್ಕೆ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ ಮತ್ತು ರಾಜೇಶ ರೈ ಕೆ. ಅವರಿದ್ದ ವಿಭಾಗೀಯ ಪೀಠವು ತಡೆಯಾಜ್ಞೆ ನೀಡಿದೆ. ಹೀಗಾಗಿ, ಮಾರ್ಚ್‌ 11ರಿಂದ (ಸೋಮವಾರ) ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ.
ಸುಮಾರು ಒಂದೂವರೆ ತಾಸು ವಾದ ಆಲಿಸಿದ ಪೀಠವು ಅನಂತರ ಒಂದೂವರೆ ತಾಸಿಗೂ ಅಧಿಕ ಕಾಲ ತಮ್ಮಲ್ಲಿಯೇ ಚರ್ಚೆ ನಡೆಸಿದ ಬಳಿಕ ಪೀಠದಲ್ಲಿ ಆಸೀನರಾದ ನ್ಯಾಯಮೂರ್ತಿಗಳು ಸಂ ಮಾರ್ಚ್‌ 6ರಂದು ಏಕಸದಸ್ಯ ಪೀಠ ಮಾಡಿರುವ ಆದೇಶಕ್ಕೆ ಮೇಲ್ಮನವಿಗಳ ಅಂತಿಮ ಇತ್ಯರ್ಥಕ್ಕೆ ಒಳಪಟ್ಟು ತಡೆಯಾಜ್ಞೆ ವಿಧಿಸಲಾಗಿದೆ” ಎಂದು ಆದೇಶಿಸಿದರು.

ಇದಕ್ಕೂ ಮುನ್ನ, ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ ಹುಯಿಲಗೋಳ ಅವರು “ಸೋಮವಾರ ಮಧ್ಯಾಹ್ನ 2:30ಕ್ಕೆ 5, 8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆ ಆರಂಭವಾಗಲಿವೆ. 42,255 ಸರ್ಕಾರಿ ಶಾಲೆಗಳು, 2,656 ಅನುದಾನಿತ ಶಾಲೆಗಳು ಸೇರಿ ಒಟ್ಟಾರೆ 53,680 ಶಾಲೆಗಳಿವೆ. ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಮ್ಯಾನೇಜ್‌ಮೆಂಟ್‌ ಒಕ್ಕೂಟ (ರುಪ್ಸಾ) ಹೇಳುವಂತೆ ಮಕ್ಕಳ ಹಿತ ಬಯಸುವುದಾದರೆ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬೇಕಿತ್ತು. ಇಲ್ಲಿ ಅವರ ಹಿತಾಸಕ್ತಿ ಅಡಗಿದೆ. ಈಗ ಸರ್ಕಾರ ಏನು ಹೇಳುತ್ತದೆ ಅದನ್ನು ಅವರು ಪಾಲಿಸಬೇಕು. ಸರ್ಕಾರ ಪ್ರಶ್ನೆ ಪತ್ರಿಕೆ ರೂಪಿಸಿದರೆ ಅವರು ಪ್ರಶ್ನೆ ಪತ್ರಿಕೆ ರೂಪಿಸಲಾಗದು. ಅಂತಿಮವಾಗಿ ನಾವು ಖಾಸಗಿ ಅನುದಾನರಹಿತ ಶಾಲೆಗಳು ಸರಿಯಾಗಿ ನಡೆಯದಿದ್ದರೆ ಅವರನ್ನು ತಕ್ಷಣ ಪತ್ತೆಹಚ್ಚಿ ಪಠ್ಯಕ್ರಮ ಪಾಲಿಸಲು ಸೂಚಿಸುತ್ತೇವೆ” ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

“ಅರ್ಜಿದಾರ ರುಪ್ಸಾ ಅತ್ಯಂತ ಕಡಿಮೆ ಶಾಲೆಗಳನ್ನು ಪ್ರತಿನಿಧಿಸುತ್ತದೆ. 5-8ನೇ ತರಗತಿಯ 46 ಸಾವಿರ ಶಾಲೆಗಳಿದ್ದು, ಪ್ರತಿ ಬ್ಯಾಚಿಗೆ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ. ಒಟ್ಟಾರೆ 5, 8 ಮತ್ತು 9ನೇ ತರಗತಿಯ 28 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಈ ಪೈಕಿ ಖಾಸಗಿ ಅನುದಾನರಹಿತ ಶಾಲೆಯ ಮಕ್ಕಳು ಸುಮಾರು 8 ಲಕ್ಷ ಮಾತ್ರ,. ಈ ಪೈಕಿ ಒಬ್ಬರೇ ಒಬ್ಬ ವಿದ್ಯಾರ್ಥಿ ಅಥವಾ ಪೋಷಕರು ಹೈಕೋರ್ಟ್‌ ಮೆಟ್ಟಿಲೇರಿಲ್ಲ” ಎಂದು ವಾದಿಸಿದರು.
ರಾಜ್ಯದ ಮಕ್ಕಳ ಹಿತದೃಷ್ಟಿಯಿಂದ ಪಬ್ಲಿಕ್‌ ಪರೀಕ್ಷೆ ನಡೆಸಲಾಗುತ್ತಿದೆ. ಶಿಕ್ಷಣ ಮೂಲಭೂತ ಹಕ್ಕಾಗಿದ್ದು, ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ಲೋಪಗಳಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲಿ ಹೀಗೆ ಮಾಡಲಾಗುತ್ತಿದೆ. 5, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಲು ಸಿದ್ಧರಾಗಿದ್ದಾರೆ. 11ನೇ ತರಗತಿ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆ ಬರೆದಿದ್ದಾರೆ” ಎಂದರು.

ಕಳೆದ ವರ್ಷವೂ ಏಕಸದಸ್ಯ ಪೀಠವು ಪರೀಕ್ಷೆ ರದ್ದುಪಡಿಸಿ ಆದೇಶ ಮಾಡಿತ್ತು. ಅರ್ಜಿದಾರ ರುಪ್ಸಾ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ, ಸರ್ವೋಚ್ಚ ನ್ಯಾಯಾಲಯವು ಪರೀಕ್ಷೆ ನಡೆಸಲು ಅನುಮತಿಸಿತ್ತು. ಅಂತಿಮವಾಗಿ ರುಪ್ಸಾ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ಹಿಂಪಡೆದಿತ್ತು. ನಾವು ನಡೆಸುವ ಪಬ್ಲಿಕ್‌ ಪರೀಕ್ಷೆಯಲ್ಲಿ ಮಕ್ಕಳು ಪಡೆದ ಅಂಕಗಳನ್ನು ನೋಟಿಸ್‌ ಬೋರ್ಡ್‌ನಲ್ಲಿ ಹಾಕುವುದಿಲ್ಲ. ವಿದ್ಯಾರ್ಥಿ ಮತ್ತು ಪೋಷಕರಿಗೆ ಮಾತ್ರ ಅದನ್ನು ತಿಳಿಸಿ, ಅವರ ಸುಧಾರಣೆಗೆ ಸಹಕರಿಸಲಾಗುತ್ತದೆ” ಎಂದು ತಿಳಿಸಿದರು.
ಅಂತಿಮವಾಗಿ ಪೀಠವು ಸುಮಾರು ಒಂದೂವರೆ ತಾಸು ಚರ್ಚಿಸಿ, ಬಳಿಕ ಮಧ್ಯಂತರ ಆದೇಶ ಮಾಡಿತು.
ಬುಧವಾರ ನ್ಯಾಯಮೂರ್ತಿ ರವಿ ವಿ ಹೊಸಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ಪಬ್ಲಿಕ್‌ ಪರೀಕ್ಷೆಗೆ ಆಕ್ಷೇಪಿಸಿ ರುಪ್ಸಾ ಸಲ್ಲಿಸಿದ್ದ ಅರ್ಜಿಗಳನ್ನು ಪುರಸ್ಕರಿಸಿತ್ತು. ಸೋಮವಾರ ಪರೀಕ್ಷೆ ನಿಗದಿಯಾಗಿರುವ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತವಾದ ರಾಜ್ಯ ಸರ್ಕಾರವು ಇಂದು ಬೆಳಿಗ್ಗೆ ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಮೇಲ್ಮನವಿ ಆಲಿಸುವಂತೆ ಕೋರಿತ್ತು. ಇದನ್ನು ಮನ್ನಿಸಿದ ಸಿಜೆ ಅವರ ಪೀಠವು ಅರ್ಜಿಯನ್ನು ಮತ್ತೊಂದು ಪೀಠಕ್ಕೆ ವರ್ಗಾಯಿಸಿತ್ತು.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement