ಚುನಾವಣಾ ಬಾಂಡ್‌ : ಎಸ್‌ಬಿಐ ಅರ್ಜಿ ವಜಾ ಮಾಡಿದ ಸುಪ್ರೀಂ ಕೋರ್ಟ್; ನಾಳೆಯೊಳಗೆ ವಿವರ ಸಲ್ಲಿಸಲು ಸೂಚನೆ

ನವದೆಹಲಿ: ಏಪ್ರಿಲ್‌ 2019ರಿಂದ ಈವರೆಗೆ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದ ರಾಜಕೀಯ ಪಕ್ಷಗಳ ವಿವರಗಳನ್ನು ನೀಡಲು ವಿಧಿಸಲಾಗಿರುವ ಗಡುವನ್ನು ಜೂನ್ 30ರವರೆಗೆ ವಿಸ್ತರಿಸುವಂತೆ ಕೋರಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.
ಮಂಗಳವಾರ(ಮಾರ್ಚ್ 12)ದೊಳಗೆ ವಿವರ ಬಹಿರಂಗಪಡಿಸುವಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ, ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ, ಬಿ.ಆರ್. ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ ಮಿಶ್ರಾ ಅವರನ್ನೊಳಗೊಂಡ ಐವರು ಸದಸ್ಯರ ಪೀಠ ತಿಳಿಸಿದೆ.

ವಿವರ ನೀಡಲು ವಿಧಿಸಲಾಗಿರುವ ಸುಪ್ರೀಂ ಕೋರ್ಟ್ ನಿಗದಿಪಡಿಸಿದ್ದ ಮಾರ್ಚ್ 6ರ ಗಡುವಿನ ಬದಲು ಜೂನ್ 30 ರವರೆಗೆ ಅದನ್ನು ವಿಸ್ತರಿಸುವಂತೆ ಕೋರಿ ಎಸ್‌ಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ ಎಸ್‌ಬಿಐ ಸಲ್ಲಿಸಿರುವ ಅರ್ಜಿ ವಜಾಗೊಳಿಸಲಾಗಿದೆ. ಮಾರ್ಚ್ 12ರ ಕಚೇರಿ ವ್ಯವಹಾರದ ಅವಧಿ ಮುಗಿಯುವುದರೊಳಗೆ ವಿವರ ನೀಡುವಂತೆ ಎಸ್‌ಬಿಐಗೆ ನಿರ್ದೇಶನ ನೀಡಲಾಗುತ್ತಿದೆ ಎಂದು ನ್ಯಾಯಾಲಯ ಆದೇಶಿಸಿದೆ. ಅಲ್ಲದೆ, ಸೂಚನೆ ಪಾಲಿಸಲು ವಿಫಲವಾದರೆ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಪ್ರಮುಖ ಸುದ್ದಿ :-   ಭಯೋತ್ಪಾದನೆ ವಿರುದ್ಧ ಭಾರತವು ಜಾಗತಿಕವಾಗಿ ತಲುಪುವ ಪ್ರಯತ್ನಕ್ಕೆ ಸ್ಥಳೀಯ ರಾಜಕೀಯ ತರಬೇಡಿ ; ಸಂಜಯ ರಾವತಗೆ ಶರದ್ ಪವಾರ್

ಚುನಾವಣಾ ಬಾಂಡ್‌ ಯೋಜನೆಯ ಪ್ರಕಾರ, ಕೇಳಿದಾಗ ಎಸ್‌ಬಿಐ ಮಾಹಿತಿ ಬಹಿರಂಗಪಡಿಸುವುದು ಕಡ್ಡಾಯ. ಇದಲ್ಲದೆ, ಬಹಿರಂಗಪಡಿಸಬೇಕಾದ ವಿವರಗಳು ಎಸ್‌ಬಿಐನಲ್ಲಿ ಸುಲಭವಾಗಿ ದೊರೆಯುವಂತಹವುಗಳಾಗಿವೆ ಎಂದು ನ್ಯಾಯಾಲಯ ಹೇಳಿದೆ.
“ರಾಜಕೀಯ ಪಕ್ಷದ ಚಾಲ್ತಿ ಖಾತೆ ಕೇವಲ 4 ಅಧಿಕೃತ ಶಾಖೆಗಳಲ್ಲಿ ಮಾತ್ರ ಇವೆ. ಹೀಗಾಗಿ, ಪಕ್ಷಗಳು ನಗದೀಕರಿಸಿದ ಚುನಾವಣಾ ಬಾಂಡ್‌ ಮಾಹಿತಿಯ ವಿವರಗಳು ಈ 4 ಶಾಖೆಗಳಲ್ಲಿ ಲಭ್ಯವಿದ್ದು ದಾಖಲೆ ಇತ್ಯಾದಿಗಳು ಮುಖ್ಯ ಬ್ಯಾಂಕಿನಲ್ಲಿ ಠೇವಣಿ ಇಡಬೇಕಾಗಿದೆ. ಈ ಪ್ರಕ್ರಿಯೆಯನ್ನು ಪಾಲಿಸಲಾಗಿದೆ” ಎಂದು ಅರ್ಜಿ ವಜಾ ಮಾಡುವಾಗ ಪೀಠವು ಅಭಿಪ್ರಾಯಪಟ್ಟಿದೆ.

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement