ಪೌರತ್ವ ತಿದ್ದುಪಡಿ ನಿಯಮಾವಳಿ- 2024ಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್

ನವದೆಹಲಿ : ಸೋಮವಾರದಿಂದ ಜಾರಿಗೆ ಬಂದಿರುವ ಪೌರತ್ವ (ತಿದ್ದುಪಡಿ) ನಿಯಮಾವಳಿ-2024ಕ್ಕೆ ತಡೆ ನೀಡುವಂತೆ ಕೋರಿ ಕೇರಳ ಮೂಲದ ರಾಜಕೀಯ ಪಕ್ಷ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದೆ.
ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) 2019 ಕುರಿತು ಸೋಮವಾರ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಿಎಎಗೆ ಸಂಸತ್ತು 2019ರಲ್ಲಿ ಅಂಗೀಕಾರ ನೀಡಿದಾಗ ಸುಪ್ರೀಂ ಕೋರ್ಟ್‌ನಲ್ಲಿ ಕಾಯಿದೆ ಜಾರಿ ಪ್ರಶ್ನಿಸಿದ್ದ ಮೊದಲ ಪಕ್ಷಕಾರರಲ್ಲಿ ಒಂದಾದ ಐಯುಎಂಎಲ್‌ ಈಗ ನಿಯಮಾವಳಿ ತಡೆ ಹಿಡಿಯುವಂತೆ ಕೋರಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.
ಧರ್ಮದ ಆಧಾರದ ಮೇಲೆ ಸಿಎಎ ಮುಸ್ಲಿಮರಿಗೆ ತಾರತಮ್ಯ ಎಸಗುತ್ತದೆ. ಈ ರೀತಿಯ ಧಾರ್ಮಿಕ ಪ್ರತ್ಯೇಕತೆ ಸಮಂಜಸವಲ್ಲ ಮತ್ತು ಸಂವಿಧಾನದ 14ನೇ ವಿಧಿಯಡಿ ಒದಗಿಸಲಾದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಹೀಗಾಗಿ ನಿಯಮಾವಳಿಗೆ ತಡೆ ನೀಡಬೇಕು ಹಾಗೂ ಸಿಎಎಯನ್ನೂ ಜಾರಿಗೆ ತರಬಾರದು. ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ನಿಯಮಗಳ ಅಡಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ವಿಫಲರಾದ ಮುಸ್ಲಿಂ ಸಮುದಾಯದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ನಿರ್ದೇಶನ ನೀಡಬೇಕು.
ಜಾರಿಗೆ ಬಂದಿರುವ ನಿಯಮಾವಳಿಯು ವಿನಾಯಿತಿ ಪಡೆಯಬಹುದಾದಂತಹ ವ್ಯಕ್ತಿಗಳಿಗೆ ಸಂಕುಚಿತ ಮತ್ತು ತ್ವರಿತ ಪ್ರಕ್ರಿಯೆ ಮೂಲಕ ಪೌರತ್ವ ಒದಗಿಸುವುತ್ತದೆ. ಹೀಗಾಗಿ ಇದು ನಿರಂಕುಶವಾಗಿದ್ದು ಕೇವಲ ಧಾರ್ಮಿಕ ಗುರುತಿನ ಆಧಾರದಲ್ಲಿ ಒಂದು ಸಮುದಾಯದ ವ್ಯಕ್ತಿಗಳಿಗೆ ಅನ್ಯಾಯ ಉಂಟು ಮಾಡುತ್ತದೆ. ಇದಕ್ಕೆ ಸಂವಿಧಾನದ 14 ಮತ್ತು 15ನೇ ವಿಧಿ ಅಡಿ ಅನುಮತಿ ಇಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

ಸಿಎಎ, ಅಕ್ರಮ ವಲಸಿಗರನ್ನು ವ್ಯಾಖ್ಯಾನಿಸುವ 1955ರ ಪೌರತ್ವ ಕಾಯಿದೆಯ ಸೆಕ್ಷನ್ 2ಕ್ಕೆ ಸಂಸತ್ತು 2019ರಲ್ಲಿ ತಿದ್ದುಪಡಿ ಮಾಡಿತ್ತು. ತಿದ್ದುಪಡಿ ವೇಳೆ ಕಾಯಿದೆಯ ಸೆಕ್ಷನ್ 2(1)(ಬಿ) ಗೆ ಹೊಸ ನಿಯಮಾವಳಿ ಸೇರಿಸಿದ್ದು ಆಫ್ಘಾನಿಸ್ತಾನ, ಬಾಂಗ್ಲಾದೇಶ ಅಥವಾ ಪಾಕಿಸ್ತಾನಗಳ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ, ಸಿಖ್, ಬೌದ್ಧ,ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮಕ್ಕೆ ಸೇರಿದ ವ್ಯಕ್ತಿಗಳು ಮತ್ತು 1920ರ ಪಾಸ್‌ಪೋರ್ಟ್ (ಭಾರತಕ್ಕೆ ಪ್ರವೇಶ) ಕಾಯಿದೆ- ಅಥವಾ 1946ರ ವಿದೇಶಿಯರ ಕಾಯಿದೆಯಡಿ ಕೇಂದ್ರ ಸರ್ಕಾರದಿಂದ ವಿನಾಯಿತಿ ಪಡೆದವರನ್ನು “ಅಕ್ರಮ ವಲಸಿಗ” ಎಂದು ಪರಿಗಣಿಸಲಾಗುವುದಿಲ್ಲ. ಪರಿಣಾಮವಾಗಿ, ಅಂತಹ ವ್ಯಕ್ತಿಗಳು 1955ರ ಕಾಯಿದೆ ಅಡಿಯಲ್ಲಿ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಹೇಳಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement