ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

ನವದೆಹಲಿ : ಮಹೀಂದ್ರಾ ಗ್ರೂಪ್‌ ಅಧ್ಯಕ್ಷ ಆನಂದ ಮಹೀಂದ್ರಾ ಅವರು ರಸ್ತೆ ಬದಿಯ ಸ್ಟಾಲ್‌ನಲ್ಲಿ ರೋಲ್‌ಗಳನ್ನು ಮಾರಾಟ ಮಾಡುತ್ತಿರುವ 10 ವರ್ಷದ ಬಾಲಕನ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ, ವೈರಲ್ ವೀಡಿಯೊದಲ್ಲಿ ಕಂಡುಬರುವ 10 ವರ್ಷದ ಬಾಲಕ ಜಸ್‌ಪ್ರೀತ್‌ಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಮಿದುಳಿನ ಕ್ಷಯರೋಗದಿಂದ ಕೆಲವು ದಿನಗಳ ಹಿಂದೆ ತಂದೆ ಮರಣಹೊಂದಿದ ನಂತರ ಈ ಎಳೆಯ ಹುಡುಗ ತನ್ನ ತಂದೆಯ ಅಂಗಡಿಯ ಜವಾಬ್ದಾರಿ ವಹಿಸಿಕೊಂಡಿದ್ದಾನೆ. ಈತನ ಕಥೆ ಕೇಳಿದರೆ ಕಣ್ಣೀರು ಬರುತ್ತದೆ, ಇತರರಿಗೆ ಸ್ಫೂರ್ತಿದಾಯಕವೂ ಹೌದು. ಕಳೆದ ವಾರ 68 ನೇ ವರ್ಷಕ್ಕೆ ಕಾಲಿಟ್ಟಿರುವ ಆನಂದ ಮಹೀಂದ್ರಾ, ಹುಡುಗನ ಸಂಪರ್ಕ ವಿವರಗಳನ್ನು ಕೇಳಿದ್ದಾರೆ ಹಾಗೂ ಮಹೀಂದ್ರಾ ಫೌಂಡೇಶನ್ ಅವರ ಶಿಕ್ಷಣವನ್ನು ಯಾರು ಬೆಂಬಲಿಸಬಹುದು ಎಂಬುದನ್ನು ಅನ್ವೇಷಿಸುತ್ತದೆ ಎಂದು ಹೇಳಿದ್ದಾರೆ.

ಕ್ಲಿಪ್‌ನಲ್ಲಿ, ಕೇವಲ 10 ವರ್ಷದ ಹುಡುಗ ಎಗ್ ರೋಲ್ ಮಾಡುವುದನ್ನು ಕಾಣಬಹುದು. ಫುಡ್ ವ್ಲಾಗರ್ ಇತ್ತೀಚೆಗೆ ಹುಡುಗನ ಹೃದಯವಿದ್ರಾವಕ ಕಥೆಯನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ. ಫುಡ್ ವ್ಲಾಗರ್ ಸರಬ್ಜೀತ್ ಸಿಂಗ್ ಅಕಾ mrsinghfoodhunter ಈ ಬಾಲಕನ ಕಥೆಯನ್ನು ಮೊದಲು ಬೆಳಕಿಗೆ ತಂದಿದ್ದಾರೆ. ವೀಡಿಯೊದಲ್ಲಿ ಪುಟ್ಟ ಬಾಲಕ ಎಗ್‌ ರೋಲ್ ಮಾಡುವುದನ್ನು ನೋಡಬಹುದಾಗಿದೆ. ಫುಡ್ ವ್ಲಾಗರ್ ಬಾಲಕನ ಬಳಿ ಆತನ ಕುಟುಂಬ ಮತ್ತು ಇತರ ವಿವರಗಳ ಬಗ್ಗೆ ಕೇಳಿದಾಗ, ಬಾಲಕ ಜಸ್ಪ್ರೀತ್ ಮುಖದಲ್ಲಿನ ನಗುವನ್ನು ಕಳೆದುಕೊಳ್ಳದೆ, ಮೆದುಳಿನ ಕ್ಷಯರೋಗದಿಂದ ಇತ್ತೀಚೆಗೆ ತನ್ನ ತಂದೆ ಮೃತಪಟ್ಟಿರುವುದಾಗಿ ಹೇಳಿದ್ದಾನೆ.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

ಜಸ್ಪ್ರೀತ್‌ ತನಗೆ 14 ವರ್ಷದ ಅಕ್ಕ ಇದ್ದಾಳೆ. ತಾವಿಬ್ಬರೂ ಚಿಕ್ಕಪ್ಪನೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದೇವೆ, ತಾಯಿ ತಮ್ಮನ್ನು ತೊರೆದು ಪಂಜಾಬ್‌ಗೆ ತೆರಳಿದ್ದಾಳೆ ಎಂದು ಹೇಳಿದ್ದಾನೆ. ತನ್ನ ತಂದೆಯಿಂದ ಈ ಕೌಶಲ್ಯವನ್ನು ಕಲಿತುಕೊಂಡಿರುವುದಾಗಿ ಹೇಳಿರುವ ಬಾಲಕ, ಚಿಕನ್ ಮತ್ತು ಕಬಾಬ್ ರೋಲ್‌ಗಳಿಂದ ಪನೀರ್ ಮತ್ತು ಚೌಮೇನ್ ರೋಲ್‌ಗಳವರೆಗೆ ವಿವಿಧ ರೋಲ್‌ಗಳನ್ನು ತನ್ನ ಸ್ಟಾಲ್‌ನಲ್ಲಿ ತಯಾರಿಸಿ ಗ್ರಾಹಕರಿಗೆ ನೀಡುವುದಾಗಿ ಹೇಳಿದ್ದಾನೆ.
ಈ ಸವಾಲುಗಳ ಹೊರತಾಗಿಯೂ, ಜಸ್ಪ್ರೀತ್ ಬೆಳಿಗ್ಗೆ ಶಾಲೆಗೆ ಹೋಗುತ್ತಾನೆ ಮತ್ತು ಕುಟುಂಬಕ್ಕಾಗಿ ಸಂಜೆ ತನ್ನ ಬೀದಿ ಬದಿಯ ಆಹಾರದ ಗಾಡಿಯಲ್ಲಿ ರೋಲ್‌ಗಳನ್ನು ತಯಾರಿಸುತ್ತಾನೆ.

ಎಗ್ ರೋಲ್‌ಗಳ ಜೊತೆಗೆ, ಈ ಚಿಕ್ಕ ಹುಡುಗ ಚಿಕನ್ ರೋಲ್‌ಗಳು, ಕಬಾಬ್ ರೋಲ್‌ಗಳು, ಪನೀರ್ ರೋಲ್‌ಗಳು, ಚೌಮೇನ್ ರೋಲ್‌ಗಳು ಮತ್ತು ಸೀಕ್ ಕಬಾಬ್ ರೋಲ್‌ಗಳನ್ನು ಸಹ ಮಾರಾಟ ಮಾಡುತ್ತಾನೆ.
“ನಾನು ಗುರು ಗೋವಿಂದ್ ಸಿಂಗ್ ಜಿ ಅವರ ಪುತ್ರ. ನನ್ನ ಶಕ್ತಿ ಇರುವವರೆಗೂ ಹೋರಾಡುತ್ತೇನೆ” ಎಂದು ಬಾಲಕ ಜಸ್ಪ್ರೀತ್ ಫುಡ್ ವ್ಲೋಗರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾನೆ, ತಾನು ಎದುರಿಸುತ್ತಿರುವ ಎಲ್ಲಾ ಕಷ್ಟಗಳ ನಡುವೆಯೂ ಶಿಕ್ಷಣ ಮುಂದುವರಿಸುವುದಾಗಿ ಹೇಳಿದ್ದಾನೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್‌ ಮೇಲಿನ ಹಲ್ಲೆ ಪ್ರಕರಣ : ಸ್ವಾತಿ ಮಲಿವಾಲ್ ಹೊಸ ವೀಡಿಯೊ ಬಿಡುಗಡೆ ಮಾಡಿದ ಎಎಪಿ : ನಿಜವಾಗಿ ನಡೆದದ್ದು ಏನು..?

ಆನಂದ ಮಹೀಂದ್ರಾ ಅವರು ಈ ವೀಡಿಯೊವನ್ನು ವೀಕ್ಷಿಸಿದ ನಂತರ ಆತನಿಗೆ ಸಹಾಯ ಮಾಡುವ ಭರವಸೆ ನೀಡಿದ್ದಾರೆ. “ಧೈರ್ಯ, ಹೆಸರು ಜಸ್ಪ್ರೀತ್/ ಆದರೆ ಆತನ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಾರದು. ಆತ ದೆಹಲಿಯ ತಿಲಕ್ ನಗರದಲ್ಲಿದ್ದಾನೆ ಎಂದು ನಾನು ನಂಬುತ್ತೇನೆ. ಯಾರಲ್ಲಾದರೂ ಆತನ ಸಂಪರ್ಕ ಮಾಡುವ ನಂಬರ್‌ ಇದ್ದರೆ ದಯವಿಟ್ಟು ಅದನ್ನು ಹಂಚಿಕೊಳ್ಳಿ” ಎಂದು ಎಕ್ಸ್ ನಲ್ಲಿ ಬರೆದಿದ್ದಾರೆ. ನಮ್ಮ ಮಹೀಂದ್ರ ಫೌಂಡೇಶನ್ ತಂಡವು ಆತನ ಶಿಕ್ಷಣಕ್ಕೆ ಹೇಗೆ ನೆರವು ನೀಡಬಹುದು ಎಂಬುದನ್ನು ಅನ್ವೇಷಿಸುತ್ತದೆ ಎಂದು ಹೇಳಿದ್ದಾರೆ.
ಬಾಲಕನಿಗೆ ಸಹಾಯ ಮಾಡುವ ಭರವಸೆ ನೀಡಿದ ಇತರರಲ್ಲಿ ಬಿಜೆಪಿ ನಾಯಕ ತಜೀಂದರ್ ಬಗ್ಗಾ ಮತ್ತು ದೆಹಲಿಯ ತಿಲಕ್ ನಗರದ ಶಾಸಕರಾಗಿರುವ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಜರ್ನೈಲ್ ಸಿಂಗ್ ಸಹ ಸೇರಿದ್ದಾರೆ.

 

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement