ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸ್ತೇನೆ ಎಂದು ಈಶ್ವರಪ್ಪ ಘೋಷಣೆ : ಯಡಿಯೂರಪ್ಪ ವಿರುದ್ಧ ತೊಡೆತಟ್ಟಿದ ಬಿಜೆಪಿ ನಾಯಕ

ಶಿವಮೊಗ್ಗ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಶುಕ್ರವಾರ ( ಮಾರ್ಚ್‌ 15) ಘೋಷಿಸಿದ್ದಾರೆ.
ತಮ್ಮ ಪುತ್ರನಿಗೆ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಪಕ್ಷದ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿರುವ ಈಶ್ವರಪ್ಪ ಸ್ವತಂತ್ರವಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ.
ಪುತ್ರ ಕಾಂತೇಶ ಅವರಿಗೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತಮ್ಮ ಮುಂದಿನ ನಡೆಯೇನು ಎಂಬುದನ್ನು ಚರ್ಚಿಸಲು ಶುಕ್ರವಾರ ಸಂಜೆ ಶಿವಮೊಗ್ಗದ ಬಂಜಾರ ಕನ್ವೆನ್ಷನ್ ಹಾಲ್ ನಲ್ಲಿ ಶುಕ್ರವಾರ ಅಭಿಮಾನಿಗಳಿಂದ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಸಿದ ಅವರು, ಅವರು ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿದ ನಂತರ ಶಿವಮೊಗ್ಗದಿಂದ ಸ್ವತಂತ್ರವಾಗಿ ಸ್ಪರ್ಧಿಸುವ ನಿರ್ಧಾರವನ್ನು ಪ್ರಕಟಿಸಿದರು.

ಕುಟುಂಬ ರಾಜಕಾರಣದ ವಿರುದ್ಧ, ಹಿಂದುತ್ವದ ರಕ್ಷಣೆ, ಸಿದ್ಧಾಂತಕ್ಕಾಗಿ ಹಾಗೂ ನೊಂದ ಕಾರ್ಯಕರ್ತರ ಪರವಾಗಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದೇನೆ. ಇದು ಪ್ರಧಾನಿ ಮೋದಿ ವಿರುದ್ಧದ ಸ್ಪರ್ಧೆಯಲ್ಲ. ಇದು ಉದ್ವೇಗದಲ್ಲಿ ಕೈಗೊಳ್ಳುತ್ತಿರುವ ತೀರ್ಮಾನ ಅಲ್ಲ. ಸಿದ್ಧಾಂತ ಉಳಿಸಬೇಕು. ಮತ್ತೊಂದು ಕಾಂಗ್ರೆಸ್ ಪಕ್ಷ ಆಗದಂತೆ ಬಿಜೆಪಿಯನ್ನು ತಡೆಯಬೇಕು ಎಂದು ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
“ನಾನು 40 ವರ್ಷಗಳ ಕಾಲ ಬಿಜೆಪಿಯಲ್ಲಿ ಇದ್ದವ. ಪಕ್ಷ ಕೊಟ್ಟ ಸಂಸ್ಕಾರದಿಂದಲೇ ಕಳೆದ ವಿಧಾನಸಭೆಯ ಚುನಾವಣೆಗೂ ಮುನ್ನ ನಾನು ಒಂದೇ ಕ್ಷಣದಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದೆ. ಹಿರಿಯರ ಆಣತಿಗೆ ತಲೆ ಬಾಗಿದೆ. ಅದು ಬಿಜೆಪಿ ನನಗೆ ಕೊಟ್ಟಿದ್ದ ಸಂಸ್ಕಾರ” ಎಂದು ಅವರು ನೆನಪಿಸಿಕೊಂಡರು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಬಿಜೆಪಿಯಿಂದ ಉಚ್ಛಾಟನೆ ಮಾಡಬಹುದು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ಎರಡು ತಿಂಗಳಲ್ಲಿಯೇ ಮತ್ತೆ ಬಿಜೆಪಿಗೆ ಪುನಃ ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಈ ಬೆಳವಣಿಗೆಯು ಹೈಕಮಾಂಡ್ ನಾಯಕರ ಕಣ್ತೆರೆಸಬೇಕು, ಇಲ್ಲೇನಾಗುತ್ತಿದೆ ಎಂಬುದು ಅವರಿಗೂ ತಿಳಿಯಬೇಕು ಎಂಬುದೇ ಇದರ ಉದ್ದೇಶ. ನಾವೆಲ್ಲ ಮೋದಿಗಾಗಿ, ಈ ದೇಶಕ್ಕಾಗಿ ದುಡಿಯಬೇಕು ಎಂದು ಹೇಳಿದರು.
ನನ್ನ ಹೃದಯ ಬಗೆದರೆ ಅಲ್ಲಿ ಶ್ರೀರಾಮ ಹಾಗೂ ನರೇಂದ್ರ ಮೋದಿ ಕಾಣಸಿಗುತ್ತಾರೆ. ಯಡಿಯೂರಪ್ಪನವರ ಎದೆ ಬಗೆದರೆ ಅಲ್ಲಿ ಅವರ ಮಕ್ಕಳು ಹಾಗೂ ಶೋಭಾ ಕರಂದ್ಲಾಜೆ ಕಾಣಿಸುತ್ತಾರೆ ಎಂದು ಕಾರ್ಯಕರ್ತರು ಮಾತಾಡಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.
ಶಿವಮೊಗ್ಗದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದರೆ ಮೋದಿ ವಿರುದ್ಧ ಸ್ಪರ್ಧಿಸಿದಂತಾಗುತ್ತದೆ. ಮಗ ಕಾಂತೇಶ ಹಾಗೂ ಅವರ ಭವಿಷ್ಯದ ದೃಷ್ಟಿಯಿಂದ ಯಾವುದೇ ದುಡುಕಿನ ತೀರ್ಮಾನ ಬೇಡ. ನರೇಂದ್ರ ಮೋದಿ ವಿರುದ್ಧ ಚುನಾವಣೆ ಬೇಡ ಎಂಬುದು ಈಗಲೂ ನಮ್ಮ ಒತ್ತಾಸೆ. ಹೇಗೂ ಮಾರ್ಚ್ 18ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. ಹೀಗಾಗಿ ಅವರ ಬಳಿ ಹಾವೇರಿ ಕ್ಷೇತ್ರಕ್ಕೆ ಕಾಂತೇಶ ಅವರಿಗೆ ಟಿಕೆಟ್ ಕೇಳೋಣ ಎಂದು ಕೆಲವರು ಸಲಹೆ ನೀಡಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement