40 ಗಂಟೆಗಳ ಕಾಲ ಹೋರಾಡಿ ಸೊಮಾಲಿಯಾ ಕಡಲ್ಗಳ್ಳರ ಹೆಡೆಮುರಿ ಕಟ್ಟಿದ ಭಾರತೀಯ ನೌಕಾಪಡೆ ; 35 ಕಡಲ್ಗಳ್ಳರ ಬಂಧನ ; 17 ಮಂದಿ ರಕ್ಷಣೆ

ನವದೆಹಲಿ: ಸಮುದ್ರದಲ್ಲಿ ಸರಕು ಸಾಗಾಣಿಕಾ ಹಡಗೊಂದರ ಮೇಲೆ ದಾಳಿ ಮಾಡಿ ಅದರಲ್ಲಿನ 17 ಮಂದಿ ಸಿಬ್ಬಂದಿಯನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದ ಸೊಮಾಲಿಯಾ ಕಡಲ್ಗಳ್ಳರ ವಿರುದ್ಧ ಸತತ 40 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ 35 ಮಂದಿ ಕಡಲ್ಗಳ್ಳರನ್ನು ಬಂಧಿಸುವಲ್ಲಿ ಭಾರತೀಯ ನೌಕಾಪಡೆ ಯಶಸ್ವಿಯಾಗಿದೆ.
ಇಸ್ರೇಲ್‌ ಹಾಗೂ ಪ್ಯಾಲೆಸ್ತೈನ್‌ ಮಧ್ಯೆ ಯುದ್ಧ ಶುರುವಾದ ಬಳಿಕ ಸಮುದ್ರ ಪ್ರದೇಶದಲ್ಲಿ ಕಡಲ್ಗಳ್ಳರ (Pirates) ಹಾವಳಿ ಹೆಚ್ಚಾಗಿದ್ದು, ಹಡಗುಗಳ ಮೇಲೆ ನಡೆಸಿ ಹಡಗಿನ ಸಿಬ್ಬಂದಿಯನ್ನು ಒತ್ತೆಯಾಳಾಗಿರಿಸಿಕೊಳ್ಳುವ ವಿದ್ಯಮಾನಗಳು ಹೆಚ್ಚಾಗಿ ನಡೆಯುತ್ತಿದೆ.

ಭಾರತದ ಕರಾವಳಿ ಪ್ರದೇಶದಲ್ಲಿ ಕಡಲ್ಗಳ್ಳರು ನೌಕೆಯೊಂದನ್ನು ಹೈಜಾಕ್‌ ಮಾಡಿ, ತಮ್ಮ ರುಯೆನ್‌ ಹಡಗಿನಲ್ಲಿ 17 ಸಿಬ್ಬಂದಿಯನ್ನು ಬಂಧಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಬಂದ ತಕ್ಷಣ ಕಾರ್ಯಾಚರಣೆಗೆ ಇಳಿದ ಭಾರತೀಯ ನೌಕಾಪಡೆ ಸತತ 40 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಎಲ್ಲ 35 ಮಂದಿ ಕಡಲ್ಗಳ್ಳರನ್ನು ಬಂಧಿಸಿದ್ದು. ಎಲ್ಲ 17 ಮಂದಿ ಸಿಬ್ಬಂದಿಯನ್ನೂ ಸುರಕ್ಷಿತವಾಗಿ ಪಾರು ಮಾಡಿದ್ದಾರೆ.
ಇದರ ಕುರಿತು ನಿಖರ ಮಾಹಿತಿ ಪಡೆದ ಭಾರತೀಯ ನೌಕಾಪಡೆಯು, ಐಎನ್‌ಎಸ್‌ ಕೋಲ್ಕತ್ತಾ ನೌಕೆಯ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದೆ. ಐಎನ್‌ಎಸ್‌ ಸುಭದ್ರ ನೌಕೆಯೂ ನೆರವು ನೀಡಿದೆ. ಆ ಮೂಲಕ ಎಲ್ಲ 17 ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ ಎಂದು ನೌಕಾಪಡೆ ಮಾಹಿತಿ ನೀಡಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

ನೌಕಾಪಡೆ ಮೂಲಗಳ ಪ್ರಕಾರ, ”ಅತ್ಯಾಧುನಿಕ ಡ್ರೋನ್‌ಗಳು, ಪಿ 81 ವಿಮಾನ ಹಾಗೂ ಸಿ 17 ವಿಮಾನಗಳನ್ನೂ ಕೂಡ ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಸಿ 17 ಯುದ್ಧವಿಮಾನದ ಮೂಲಕ ಹಡಗಿನ ಎಲ್ಲ ಸಿಬ್ಬಂದಿಯನ್ನು ಏರ್‌ಲಿಫ್ಟ್‌ ಮಾಡಲಾಗಿದೆ. ಕಡಲ್ಗಳ್ಳರ ಬಳಿಯಿದ್ದ ಭಾರಿ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರಗಳು, ಮದ್ದು ಗುಂಡುಗಳು ಹಾಗೂ ಮಾದಕವಸ್ತುವನ್ನು ಕೂಡ ನೌಕಾಪಡೆ ಅಧಿಕಾರಿಗಳು ಜಪ್ತಿ ಮಾಡಿದ್ದು, ಇವರು ಸೋಮಾಲಿಯಾದ ಕಡಲ್ಗಳ್ಳರು ಎಂದು ನೌಕಾಪಡೆ ಮಾಹಿತಿ ನೀಡಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement