ಬೆಂಗಳೂರು: ಅಂಗಡಿಯಲ್ಲಿ ಲೌಡ್ ಸ್ಪೀಕರ್ ಹಾಕಿದ್ದಕ್ಕಾಗಿ ಆಕ್ಷೇಪ ವ್ಯಕ್ತಪಡಿಸಿ ಯುವಕರ ಗುಂಪೊಂದು ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಕಬ್ಬನ್ ಪೇಟೆ ಸಿದ್ದನಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಭಾನುವಾರ ಸಂಜೆ ೬:೩೦ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಮುಖೇಶ (26) ಎಂಬವರು ಈ ಸಂಬಂಧದೂರು ನೀಡಿದ್ದು, 5 ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 506, 504 , 149 , 307, 323 ಹಾಗೂ 324 ರ ಅಡಿ ಪ್ರಕರಣ ದಾಖಲಿಸಲಾಗಿದೆ.
ಬೆಂಗಳೂರು ನಗರ ಜುಮ್ಮಾ ಮಸೀದಿ ರಸ್ತೆ ಸಿದ್ದಣ್ಣ ಗಲ್ಲಿಯಲ್ಲಿ ಟೆಲಿಕಾಂ ಅಂಗಡಿ ಇಟ್ಟುಕೊಂಡು ಜೀವನ ಮಾಡುತ್ತಿದ್ದೇನೆ. 17-3-24 ರಂದು ಸಂಜೆ 6: 25 ಕ್ಕೆ ಅಂಗಡಿಗೆ ಬಂದ ಸುಲೇಮಾನ್, ಶನವಾಝ್, ರೋಹಿತ್, ದ್ಯಾನಿಶ್, ತರುಣ್ ಹಾಗೂ ಮತ್ತೊಬ್ಬರು ನನ್ನ ಅಂಗಡಿಗೆ ಬಂದು ಏಕೆ ಲೌಡ್ ಸ್ಪೀಕರ್ ಜೋರಾಗಿ ಹಾಕಿರುವೆ? ಇದರಿಂದ ನಮಗೆ ತೊಂದರೆಯಾಗುತ್ತಿದೆ ಎಂದು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ನನ್ನ ಮುಖಕ್ಕೆ ಗುದ್ದಿ, ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಹಲ್ಲೆಯ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅಂಗಡಿಯ ಮಾಲೀಕ ಮುಖೇಶ ಅವರು, ‘ಅಂಗಡಿಯಲ್ಲಿ ಎಂದಿನಂತೆ ಸಂಜೆ ವೇಳೆ ಪೂಜೆ ಮಾಡುವ ಸಮಯದಲ್ಲಿ ಭಜನೆ ಹಾಡು ಹಾಕುತ್ತಿದ್ದೆ. ನಾನು ಹನುಮಾನ ಭಜನೆ ಹಾಕಿದ್ದಾಗ 4-5 ಜನರು ಬಂದು ಆಜಾನ್‌ಗೆ ಸಮಯವಾಗಿದೆ ಮತ್ತು ನೀವು ಅದನ್ನು ಆಡಿದರೆ ನಾವು ನಿಮ್ಮನ್ನು ಹೊಡೆಯುತ್ತೇವೆ ಎಂದು ಹೇಳಿದರು. ಅವರು ನನಗೆ ಹೊಡೆದರು ಮತ್ತು ನನಗೆ ಚಾಕುವಿನಿಂದ ಇರಿದು ಹಾಕುವುದಾಗಿ ಬೆದರಿಕೆ ಹಾಕಿದರು ಎಂದು ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಅಂಗಡಿ ಇಟ್ಟಿದ್ದೇನೆ. ಮೊದಲಿನಿಂದಲೂ ಹಣ ಕೀಳಲು ಗದರಿಸುವ ಪ್ರಯತ್ನ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ಮೂವರ ಬಂಧನ..
‘ಆಜಾನ್’ ಸಮಯದಲ್ಲಿ ಧ್ವನಿವರ್ಧಕದಲ್ಲಿ ಹನುಮಾನ ಚಾಲೀಸಾ ನುಡಿಸಿದ್ದಕ್ಕಾಗಿ ಅಂಗಡಿಯವನ ಮೇಲೆ ಹಲ್ಲೆ ನಡೆಸಿದ ಆರೋಪಿತ ಪ್ರಕರಣದಲ್ಲಿ ಮೂವರನ್ನು ಇದುವರೆಗೆ ಬಂಧಿಸಲಾಗಿದೆ ಎಂದು ಪೊಲೀಸರನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಏತನ್ಮಧ್ಯೆ, ಈ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳ ವಾಗ್ದಾಳಿ ಜೋರಾಗಿದೆ. ನಾಳೆಯೊಳಗೆ ಉಳಿದ ಆರೋಪಿಗಳನ್ನು ಬಂಧಿಸಬೇಕೆಂದು ನಾವು ಬಯಸುತ್ತೇವೆ. ನಾಳೆ ಇಲ್ಲದಿದ್ದರೆ ಮಧ್ಯಾಹ್ನ 12:30ಕ್ಕೆ ನಾಗರತ್‌ಪೇಟೆಯಲ್ಲಿ ಬಂದ್ ನಡೆಯಲಿದೆ. ನಾವೆಲ್ಲರೂ ಭಾಗವಹಿಸುತ್ತೇವೆ ಮತ್ತು ಮುಖೇಶ ಅವರಿಗೆ ಏನಾಗಿದೆ ಎಂಬುದರ ಬಗ್ಗೆ ನ್ಯಾಯವನ್ನು ಕೋರುತ್ತೇವೆ … ಇದು ಕಾನೂನು ಮತ್ತು ಸುವ್ಯವಸ್ಥೆ, ದೈಹಿಕ ಸುರಕ್ಷತೆಯ ಪ್ರಶ್ನೆಯಾಗಿದೆ. ಪ್ರಕರಣವನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ನಾನೇ ಡಿಸಿಪಿ ಬಳಿ ಮಾತನಾಡಿದ್ದೇನೆ. ಮುಖೇಶ ಅವರು ಪರಭಾಷಿಕರಾಗಿರುವ ಕಾರಣ ದೂರಿನ ಸತ್ಯಾಸತ್ಯತೆ ತಿಳಿಯಲು ನಾವು ಠಾಣೆಗೆ ಹೋಗಲು ಯೋಜಿಸುತ್ತಿದ್ದೇವೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ, ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ ಕಾಂಗ್ರೆಸ್ ಪಕ್ಷದ ಕೈಗೆ ಸಿಕ್ಕು ತಾಲಿಬಾನ್ ಆಗಿ ಬದಲಾಗುತ್ತಿದೆ. ಬೆಂಗಳೂರಿನ ಸಿದ್ದಣ್ಣ ಗಲ್ಲಿ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಗೆ ನುಗ್ಗಿದ ಮತಾಂಧ ಕಿಡಿಗೇಡಿಗಳು ಮುಖೇಶ್ ಎಂಬ ಹಿಂದೂ ಯುವಕನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿ ಓಡಿ ಹೋಗಿದ್ದಾರೆ. ಅಂಗಡಿ ಮಾಲೀಕ ಮುಖೇಶ್ ಸಂಜೆ ಪೂಜೆ ಸಮಯದಲ್ಲಿ ಭಕ್ತಿ ಗೀತೆಗಳನ್ನು ಹಾಕಿದ್ದೇ ಮತಾಂಧ ದುರುಳರು ಹಲ್ಲೆ ಮಾಡಲು ಕಾರಣ ಎಂದು ಆರೋಪಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ