ಜೆಎಂಎಂ ತೊರೆದು ಬಿಜೆಪಿಗೆ ಸೇರ್ಪಡೆಯಾದ ಮಾಜಿ ಸಿಎಂ ಹೇಮಂತ್ ಸೊರೇನ್ ಅತ್ತಿಗೆ ಸೀತಾ ಸೊರೇನ್

ರಾಂಚಿ : ಜಾರ್ಖಂಡದ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್(Hemant Soren) ಅತ್ತಿಗೆ ಸೀತಾ ಸೊರೇನ್ (Sita Soren)​ ಅವರು ಜಾರ್ಖಂಡ್​ ಮುಕ್ತಿ ಮೋರ್ಚಾ(ಜೆಎಂಎಂ)ಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಅವರು ಜಾಮಾ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ತಮ್ಮ ಪತಿ ದುರ್ಗಾ ಸೊರೇನ್ ಅವರ ನಿಧನದ ನಂತರ ಪಕ್ಷವು ತನಗೆ ಮತ್ತು ತಮ್ಮ ಕುಟುಂಬಕ್ಕೆ ಸೂಕ್ತ ಬೆಂಬಲವನ್ನು ನೀಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಪಿತೂರಿ ನಡೆಸುತ್ತಿರುವ ಬಗ್ಗೆ ನನಗೆ ಅರಿವಾಗಿದೆ. ನನಗೆ ರಾಜೀನಾಮೆ ನೀಡುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ ಎಂದು ಅವರು ಹೇಳಿದರು.

ಮುಖ್ಯಮಂತ್ರಿಯಾಗಿದ್ದ ಹೇಮಂತ್ ಸೊರೇನ್ ಬಂಧನದ ನಂತರ, ಹಿರಿಯ ಜೆಎಂಎಂ ನಾಯಕ ಚಂಪೈ ಸೊರೇನ್ ಅವರನ್ನು ಜಾರ್ಖಂಡ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 31 ರಂದು ಹೇಮಂತ್ ಸೊರೆನ್ ಅವರನ್ನು ಬಂಧಿಸಲಾಗಿತ್ತು. ಚಂಪೈ ಸೊರೇನ್ ಫೆಬ್ರವರಿ 2 ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 67 ವರ್ಷ ವಯಸ್ಸಿನ ಬುಡಕಟ್ಟು ನಾಯಕ ರಾಜ್ಯದ 12 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಪ್ರಮುಖ ಸುದ್ದಿ :-   ಅಧಿಕಾರಿಯನ್ನು ಕಚೇರಿಯಿಂದ ಹೊರಗೆಳೆದು ಥಳಿತ, ಮುಖಕ್ಕೆ ಒದ್ದು ಹಲ್ಲೆ : ಮೂವರ ಬಂಧನ-ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಸೀತಾ ಸೊರೇನ್ ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಅವರ ಸೊಸೆ ಹಾಗೂ ದಿವಂಗತ ದುರ್ಗಾ ಸೊರೇನ್ ಅವರ ಪತ್ನಿ. 2009 ರಲ್ಲಿ ಅವರು ಜಾರ್ಖಂಡ್‌ನ ಜಾಮಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ನಂತರ, ಅವರನ್ನು ಜಾರ್ಖಂಡ್ ಮುಕ್ತಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಯಿತು.
2014ರಲ್ಲೂ ಸೀತಾ ಸೊರೆನ್ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜಾಮಾ ಪ್ರದೇಶದಿಂದ ಸ್ಪರ್ಧಿಸಿ ಗೆದ್ದಿದ್ದರು. ಇದಾದ ನಂತರ ಮತ್ತೆ 2019ರಲ್ಲಿ ಜಾಮಾ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಗೆದ್ದಿದ್ದರು. 2012ರ ರಾಜ್ಯಸಭಾ ಚುನಾವಣೆಯಲ್ಲಿ ಮತದಾನಕ್ಕೆ ಹಣ ಪಡೆದ ಆರೋಪದ ಮೇಲೆ ಸೀತಾ ಸೊರೇನ್ ಏಳು ತಿಂಗಳು ಜೈಲಿನಲ್ಲಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement