ಅಪಾಯಕಾರಿ 23 ಶ್ವಾನ ತಳಿಗಳ ಸಾಕಣೆ ನಿಷೇಧಿಸಿ ಕೇಂದ್ರ ಸರ್ಕಾರ ಹೊರಡಿಸಿದ ಸುತ್ತೋಲೆಗೆ ಹೈಕೋರ್ಟ್‌ ತಡೆ

ಬೆಂಗಳೂರು : ಮನುಷ್ಯನ ಜೀವಕ್ಕೆ ಮಾರಕವಾಗಬಹುದಾದ 23 ಶ್ವಾನ ತಳಿಗಳ ಸಾಕುವುದು ಹಾಗೂ ಮಾರಾಟ ನಿಷೇಧಿಸಿ ಕೇಂದ್ರ ಸರ್ಕಾರ ಇತ್ತೀಚಗೆ ಹೊರಡಿಸಿದ್ದ ಸುತ್ತೋಲೆಗೆ ಮಂಗಳವಾರ ಕರ್ನಾಟಕ ಹೈಕೋರ್ಟ್‌ ತಡೆ ನೀಡಿದೆ.
ತಜ್ಞರ ಸಮಿತಿಯ ಶಿಫಾರಸ್ಸು ಆಧರಿಸಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದ್ದು, ಆದರೆ ತಜ್ಞರು ಇದಕ್ಕೆ ಸಂಬಂಧಿತ ಯಾರನ್ನು ಸಂಪರ್ಕಿಸಿಲ್ಲ ಎಂದು ಆಕ್ಷೇಪಿಸಿ ವೃತ್ತಿಪರ ಶ್ವಾನ ಹ್ಯಾಂಡ್ಲರ್‌ ಮತ್ತು ರಾಟ್‌ವೈಲರ್‌ ಮಾಲೀಕರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶಕ್ಕೆ ತಡೆಯಾಜ್ಞೆ ನೀಡಿದೆ ಹಾಗೂ ಈ ತಡೆಯಾಜ್ಞೆಯು ಕರ್ನಾಟಕಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಯಾವ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಸಂಬಂಧಿತ ದಾಖಲೆಯನ್ನು ಉಪ ಸಾಲಿಸಿಟರ್‌ ಜನರಲ್‌ ಸಲ್ಲಿಸುವವರೆಗೆ ಸುತ್ತೋಲೆಗೆ ಕರ್ನಾಟಕದಲ್ಲಿ ತಡೆಯಾಜ್ಞೆ ಇರಲಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಇಂಥ ಶ್ವಾನಗಳನ್ನು ಬೆಳೆಸಿರುವವರು ಅವುಗಳ ಸಂತಾನಶಕ್ತಿ ಹರಣ ಮಾಡುವ ಮೂಲಕ ಆ ತಳಿಗಳ ಅಭಿವೃದ್ಧಿಗೆ ತಡೆಯೊಡ್ಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಈ ಶ್ವಾನಗಳು ಅಪಾಯಕಾರಿ ಎಂದು ಸಮಿತಿಯೂ ಮನಗಂಡಿರುವಂತಿದೆ. ಇಡೀ ದೇಶಕ್ಕೆ ಸುತ್ತೋಲೆಯು ಅನ್ವಯಸಲಿದ್ದು, ಈ ತಳಿಯ ಶ್ವಾನಗಳ ಮೇಲೆ ಗಂಭೀರ ಪರಿಣಾಮ ಉಂಟು ಮಾಡಲಿದೆ” ಎಂದು ನ್ಯಾಯಾಲಯ ಹೇಳಿದೆ. ಅರ್ಜಿಯ ವಿಚಾರಣೆಯನ್ನು ಏಪ್ರಿಲ್‌ ೫ಕ್ಕೆ ಮುಂದೂಡಿದೆ. ಅರ್ಜಿದಾರರ ಪರವಾಗಿ ವಕೀಲ ಸ್ವರೂಪ್‌ ಆನಂದ ಆರ್‌. ಅವರು ವಾದಿಸಿದರು.
ಮಾನವ ಬದುಕಿಗೆ ಅಪಾಯಕಾರಿಯಾಗಿರುವ ಈ ಶ್ವಾನಗಳನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು ಕೆಲವು ದಿನಗಳ ಹಿಂದೆ ಸೂಚಿಸಿತ್ತು. ಕಳೆದ ವರ್ಷದ ಡಿಸೆಂಬರ್‌ನಲ್ಲಿ ಅಪಾಯಕಾರಿಯಾಗಿರುವ ಶ್ವಾನ ತಳಿಗಳ ಇಟ್ಟುಕೊಳ್ಳುವುದಕ್ಕೆ ಪರವಾನಗಿ ನೀಡಬಾರದು ಎಂಬ ಬೇಡಿಕೆಯ ಕುರಿತು ತುರ್ತಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿತ್ತು.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

ಪಿಟ್‌ಬುಲ್‌ ಟೆರಿಯರ್‌, ಟೋಸ್‌ ಇನು, ಅಮೆರಿಕನ್‌ ಸ್ಟಾಫೋರ್ಡ್‌ಶೈರ್‌ ಟೆರಿಯರ್‌, ಫಿಲಾ ಬ್ರಸಿಲೈರೊ, ಡೊಗೊ ಅರ್ಜೆಂಟಿನೊ, ಅಮೆರಿಕನ್‌ ಬುಲ್‌ಡಾಗ್‌, ಬೋರ್‌ಬೋಯಲ್‌, ಕಂಗಲ್‌, ಸೆಂಟ್ರಲ್‌ ಏಷ್ಯನ್‌ ಶೆಫರ್ಡ್‌ ಡಾಗ್‌, ಕಾಕಸಿಯನ್‌ ಸ್ಟೆಫರ್ಡ್‌ ಡಾಗ್‌, ಸೌತ್‌ ರಷ್ಯನ್‌ ಶೆಫರ್ಡ್‌ ಡಾಗ್‌, ಟೋರ್ನಜಕ್‌, ಸರ್ಪ್ಲಾನಿನಕ್‌, ಜಪಾನೀಸ್‌ ಟೋಸಾ, ಜಪಾನೀಸ್‌ ಅಕಿತಾ, ಮಸ್ಟಿಫ್ಸ್‌, ರಾಟ್‌ವೈಲರ್‌, ಟೆರಿರಯರ್ಸ್‌, ರೋಡೆಸಿಯನ್‌ ರಿಡ್ಜ್‌ಬ್ಯಾಕ್‌, ವೂಲ್ಫ್‌ ಡಾಗ್ಸ್‌, ಕೆನರಿಯೋ ಅಕ್ಬಾಷ್‌ ಡಾಗ್‌, ಮಾಸ್ಕೋ ಗಾರ್ಡ್‌ ಡಾಗ್‌, ಕೇನ್‌ ಕೊರ್ಸೊ, ಬ್ಯಾನ್‌ ಡಾಗ್‌ ತಳಿಯ ಶ್ವಾನಗಳು ಅಪಾಯಕಾರಿ ಎಂದು ತಜ್ಞರ ಸಮಿತಿ ಹೇಳಿತ್ತು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement