ದಾರಿ ತಪ್ಪಿಸುವ ಜಾಹೀರಾತು: ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆಯಾಚಿಸಿದ ಪತಂಜಲಿ

ನವದೆಹಲಿ: ವೈಜ್ಞಾನಿಕ ತಳಹದಿಯ ಔಷಧಗಳನ್ನು (ಎವಿಡೆನ್ಸ್‌ ಬೇಸ್ಡ್‌ ಮೆಡಿಸಿನ್‌- ಇಬಿಎಂ) ಗುರಿಯಾಗಿಸಿಕೊಂಡು ಜಾಹೀರಾತು ನೀಡಿದ್ದ ಪತಂಜಲಿ ಆಯುರ್ವೇದ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಬೇಷರತ್‌ ಕ್ಷಮೆಯಾಚಿಸಿದ್ದಾರೆ.
ಆಯುರ್ವೇದಕ್ಕೆ ಪ್ರೋತ್ಸಾಹ ನೀಡಲೆಂದು ಹೊರತರಲಾದ ಈ ಜಾಹೀರಾತುಗಳನ್ನು ಕಂಪನಿ ಮತ್ತೆ ಪ್ರಕಟಿಸುವುದಿಲ್ಲ ಎಂದು ಬಾಲಕೃಷ್ಣ ಅವರು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದಾರೆ. ಪುರಾತನ ಸಾಹಿತ್ಯ ಮತ್ತು ಆಯುರ್ವೇದ ಸಂಶೋಧನೆಯಿಂದ ಬೆಂಬಲಿತವಾದ ಪತಂಜಲಿಯ ಉತ್ಪನ್ನಗಳನ್ನು ಸೇವಿಸುವ ಮೂಲಕ ಜೀವನ ಶೈಲಿ ಸಂಬಂಧಿತ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು, ಆರೋಗ್ಯಕರ ಜೀವನ ನಡೆಸಲು ಈ ದೇಶದ ಜನರನ್ನು ಉತ್ತೇಜಿಸುವುದಷ್ಟೇ ತನ್ನ ಉದ್ದೇಶವಾಗಿತ್ತು ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ತನಗೆ ಕಾನೂನಿನ ಬಗ್ಗೆ ಅಪಾರ ಗೌರವ ಇದ್ದು ಅದನ್ನು ಪಾಲಿಸಲು ಬದ್ಧವಾಗಿರುವುದಾಗಿ ಪತಂಜಲಿ ತಿಳಿಸಿದೆ. ಸಾಮಾನ್ಯ ಹೇಳಿಕೆಗಳನ್ನು ಮಾತ್ರ ಒಳಗೊಂಡಿರಬೇಕಾದ ಜಾಹೀರಾತಿನಲ್ಲಿ ಅಜಾಗರೂಕತೆಯಿಂದ ಆಕ್ಷೇಪಾರ್ಹ ವಾಕ್ಯಗಳನ್ನು ಸೇರಿಸಿರುವುದು ವಿಷಾದನೀಯ. ಮಾಧ್ಯಮ ವಿಭಾಗ ವಾಡಿಕೆಯಂತೆ ಇವುಗಳನ್ನು ಸೇರಿಸಿದೆ ಎಂದು ವಿವರಿಸಲಾಗಿದೆ.

ಈ ಪ್ರಕರಣ ಸಂಬಂಧ ನೀಡಿಲಾಗಿದ್ದ ನೋಟಿಸ್‌ಗೆ ಉತ್ತರಿಸದೇ ಇದ್ದುದರಿಂದ ಗರಂ ಆಗಿದ್ದ ಸುಪ್ರೀಂ ಕೋರ್ಟ್‌, ನ್ಯಾಯಾಂಗ ನಿಂದನೆ ನೋಟಿಸ್‌ ಜಾರಿ ಮಾಡಿ, ಖುದ್ದು ಹಾಜರಿರಬೇಕು ಎಂದು ಬಾಬಾ ರಾಮದೇವ ಹಾಗೂ ಬಾಲಕೃಷ್ಣ ಅವರಿಗೆ ಮಂಗಳವಾರ ಸೂಚಿಸಿತ್ತು. ಇದರ ಬೆನ್ನಲ್ಲೇ ಬೇಷರತ್‌ ಕ್ಷಮೆ ಯಾಚಿಸಿ ಪತಂಜಲಿ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಕೋವಿಡ್‌ ಲಸಿಕೆ ಮತ್ತು ಆಧುನಿಕ ಔಷಧದ ವಿರುದ್ಧ ಅವಹೇಳನಕಾರಿ ಅಭಿಯಾನ ನಡೆಸಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಈ ಅಫಿಡವಿಟ್‌ ಸಲ್ಲಿಸಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿಯ ಭರ್ತೃಹರಿ ಮಹತಾಬ್ ಲೋಕಸಭೆಯ ಹಂಗಾಮಿ ಸ್ಪೀಕರ್

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement