ಲೋಕಸಭಾ ಚುನಾವಣೆ : ಕರ್ನಾಟಕ ಕಾಂಗ್ರೆಸ್ಸಿನಲ್ಲಿ ಭಾರೀ ಬದಲಾವಣೆ, ಐವರು ನೂತನ ಕಾರ್ಯಾಧ್ಯಕ್ಷರ ನೇಮಕ, ಚುನಾವಣಾ ಪ್ರಚಾರ ಸಮಿತಿಗೂ ನೇಮಕ

ಬೆಂಗಳೂರು: ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್‌ ಪಕ್ಷದೊಳಗೆ ಮೇಜರ್‌ ಸರ್ಜರಿ ಮಾಡಿದೆ. ಸಂಘಟನಾತ್ಮಕ ಬದಲಾವಣೆ ಮಾಡಿರುವ ಕಾಂಗ್ರೆಸ್‌ ಐವರು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನು ಬದಲಾವಣೆ ಮಾಡಿದ್ದು, ಅವರ ಬದಲಿಗೆ ಐವರು ನೂತನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಿದೆ. ಅಲ್ಲದೆ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನೂ ನೇಮಕ ಮಾಡಲಾಗಿದೆ. ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ವಿನಯಕುಮಾರ ಸೊರಕೆ ಅವರನ್ನು ನೇಮಕ ಮಾಡಲಾಗಿದೆ. ಶನಿವಾರ (ಮಾ. 23) ಅಧಿಕೃತ ಆದೇಶ ಹೊರಬಿದ್ದಿದೆ.
ನೂತನ ಕಾರ್ಯಾಧ್ಯಕ್ಷರನ್ನಾಗಿ ಶಾಸಕ ತನ್ವೀರ್ ಸೇಠ್, ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ, ಶಾಸಕ ವಿನಯ ಕುಲಕರ್ಣಿ, ಪಕ್ಷದ ಮುಖಂಡರಾದ ಮಂಜುನಾಥ ಭಂಡಾರಿ ಹಾಗೂ ವಸಂತಕುಮಾರ ಅವರನ್ನು ನೇಮಕ ಮಾಡಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದ್ದು, ಮುಸ್ಲಿಂ, ಒಕ್ಕಲಿಗ, ವೀರಶೈವ ಲಿಂಗಾಯತ, ಬಂಟ್ಸ್‌ ಹಾಗೂ ದಲಿತ ಬಲಗೈ ಸಮುದಾಯದ ನಾಯಕರನ್ನು ಕಾರ್ಯಾಧ್ಯಕ್ಷ ಹುದ್ದೆಗೆ ನೇಮಕ ಮಾಡುವ ಮೂಲಕ ಸಮುದಾಯವಾರು ಪ್ರಾತಿನಿಧ್ಯ ನೀಡಲಾಗಿದೆ.

ಐವರು ಕಾರ್ಯಾಧ್ಯಕ್ಷರು
ತನ್ವೀರ್ ಸೇಠ್‌ – ಮುಸ್ಲಿಂ
ಜಿ.ಸಿ. ಚಂದ್ರಶೇಖರ- ಒಕ್ಕಲಿಗ
ವಿನಯ ಕುಲಕರ್ಣಿ- ವೀರಶೈವ ಲಿಂಗಾಯತ
ಮಂಜುನಾಥ ಭಂಡಾರಿ – ಬಂಟ್ಸ್
ವಸಂತ ಕುಮಾರ್- ದಲಿತ ಬಲಗೈ
ಇದಕ್ಕೂ ಮೊದಲು ಸತೀಶ ಜಾರಕಿಹೊಳಿ‌, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಈಶ್ವರ ಖಂಡ್ರೆ ಹಾಗೂ ಚಂದ್ರಪ್ಪ ಅವರು ಕಾರ್ಯಾಧ್ಯಕ್ಷರಾಗಿದ್ದರು.
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರ ನೇಮಕ
ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ವಿನಯಕುಮಾರ ಸೊರಕೆ ಅವರನ್ನು ನೇಮಕ ಮಾಡಲಾಗಿದ್ದು, ಸಹ ಅಧ್ಯಕ್ಷರಾಗಿ ಎಲ್. ಹನುಮಂತಯ್ಯ ಹಾಗೂ ಉಪಾಧ್ಯಕ್ಷರಾಗಿ ರಿಜ್ವಾನ್ ಅರ್ಷದ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement