ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿದ ದಂತಚೋರ-ಕಾಡುಗಳ್ಳ ವೀರಪ್ಪನ್‌ ಪುತ್ರಿ

ಚೆನ್ನೈ : ಕೆಲವು ದಿನಗಳ ಹಿಂದೆ ಬಿಜೆಪಿಗೆ ರಾಜೀನಾಮೆ ನೀಡಿದ್ದ ದಂತ ಚೋರ ಹಾಗೂ ಶ್ರೀಗಂಧದ ಕಳ್ಳಸಾಗಾಣಿಕೆದಾರ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಕೃಷ್ಣಗಿರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಏಪ್ರಿಲ್ 19ರಂದು ಮೊದಲನೇ ಹಂತದ ಲೋಕಸಭೆ ಚುನಾವಣೆಯಲ್ಲಿ ತಮಿಳು ರಾಷ್ಟ್ರೀಯವಾದಿ ಪಕ್ಷವಾದ ನಾಮ್ ತಮಿಳರ್ ಕಚ್ಚಿ‌ (ಎನ್‌ ಟಿ ಕೆ) ಪಕ್ಷದ ಅಭ್ಯರ್ಥಿಯಾಗಿ ತಮಿಳುನಾಡಿನ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ವಿದ್ಯಾ ರಾಣಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವೃತ್ತಿಯಲ್ಲಿ ವಕೀಲರಾದ ವಿದ್ಯಾರಾಣಿ ಅವರು ಜುಲೈ 2020 ರಲ್ಲಿ ಬಿಜೆಪಿಗೆ ಸೇರಿದ್ದರು ಮತ್ತು ಅದರ ತಮಿಳುನಾಡು ರಾಜ್ಯ ಯುವ ಘಟಕದ ಉಪಾಧ್ಯಕ್ಷರಾಗಿ ನೇಮಕಗೊಂಡರು, ಆದರೆ ಕೆಲದಿನಗಳ ಹಿಂದೆ ಬಿಜೆಪಿ ತೊರೆದು ಎನ್‌ಟಿಕೆಗೆ ಸೇರಿದ್ದರು.

ವಿದ್ಯಾ ರಾಣಿ ಅವರು ಕೃಷ್ಣಗಿರಿಯಲ್ಲಿ ಮಕ್ಕಳ ಶಾಲೆಯನ್ನು ನಡೆಸುತ್ತಿದ್ದಾರೆ ಮತ್ತು ಬೆಂಗಳೂರಿನಲ್ಲಿ ಐದು ವರ್ಷಗಳ ಕಾನೂನು ಅಭ್ಯಾಸ ಮಾಡಿರುವ ಅವರು, ಬೆಂಗಳೂರಿನೊಂದಿಗೆ ಗಾಢವಾದ ಸಂಬಂಧ ಹೊಂದಿದ್ದಾರೆ.
ತಾನು ಮೂರನೇ ತರಗತಿಯಲ್ಲಿ ಓದುತ್ತಿದ್ದಾಗ ತಮಿಳುನಾಡು-ಕರ್ನಾಟಕ ಗಡಿಯಲ್ಲಿರುವ ಗೋಪಿನಾಥಂನಲ್ಲಿರುವ ಅಜ್ಜನ ಮನೆಯಲ್ಲಿ ತಂದೆಯನ್ನು ಭೇಟಿಯಾಗಿದ್ದೆ, ತಂದೆಯನ್ನ ಭೇಟಿಯಾಗಿದ್ದು ಅದೇ ಮೊದಲು ಮತ್ತು ಕೊನೆ ಎಂದು ಅವರು ಈ ಹಿಂದೆ ಹೇಳಿದ್ದರು. ತನ್ನ ತಂದೆ ಜನರ ಸೇವೆ ಮಾಡಲು ಬಯಸಿದ್ದರು ಆದರೆ ಅವರು ಅದನ್ನು ಮಾಡಲು ಆರಿಸಿಕೊಂಡ ರೀತಿ ನ್ಯಾಯಯುತವಾಗಿರಲಿಲ್ಲ ಎಂದು ಹೇಳಿರುವ ಅವರು, ಜನರ ಸೇವೆಗಾಗಿ ತಾನು ರಾಜಕೀಯಕ್ಕೆ ಸೇರಿದ್ದೇನೆ ಎಂದು ಹೇಳಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಅವರು, ಆದಿವಾಸಿಗಳು ಮತ್ತು ದಲಿತರ ಪರವಾಗಿ ಕೆಲಸ ಮಾಡುತ್ತಿದ್ದಾರೆ.
ಕುಖ್ಯಾತ ಡಕಾಯಿತ ವೀರಪ್ಪನ್ 2004 ರಲ್ಲಿ ತಮಿಳುನಾಡು ಪೊಲೀಸರ ವಿಶೇಷ ಕಾರ್ಯಪಡೆಯ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು.

ಪ್ರಮುಖ ಸುದ್ದಿ :-   ಸಿಬಿಐ ಜಂಟಿ ನಿರ್ದೇಶಕರಾಗಿ ಐವರು ಡಿಐಜಿಗಳನ್ನು ನೇಮಕ ಮಾಡಿದ ಕೇಂದ್ರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement