ಕಾನೂನು ಬಾಹಿರವಾಗಿ ಮಗು ದತ್ತು ಪಡೆದ ಪ್ರಕರಣ : ಬಿಗ್‌ ಬಾಸ್‌ ಸ್ಪರ್ಧಿ ಸೋನು ಗೌಡಗೆ 14 ದಿನ ನ್ಯಾಯಾಂಗ ಬಂಧನ

ಬೆಂಗಳೂರು : ಕಾನೂನು ಬಾಹಿರವಾಗಿ ಮಗುವನ್ನು ದತ್ತು ಪಡೆದ ಆರೋಪಿತ ಪ್ರಕರಣದಲ್ಲಿ ಬಿಗ್‌ಬಾಸ್ ರಿಯಾಲಿಟಿ ಶೋನ ಸ್ಪರ್ಧಿ ಹಾಗೂ ರೀಲ್ಸ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಸೋನು ಶ್ರೀನಿವಾಸ ಗೌಡ ಅವರಿಗೆ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ಸೋನು ಅವರ ಪೊಲೀಸ್ ಕಸ್ಟಡಿ ಸೋಮವಾರ ಅಂತ್ಯವಾದ ಹಿನ್ನೆಲೆಯಲ್ಲಿ ಬ್ಯಾಡರಹಳ್ಳಿ ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು, ಜಾಮೀನು ನೀಡಲು ನಿರಾಕರಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ರಾಯಚೂರು ಮೂಲದ ಹೆಣ್ಣು ಮಗುವನ್ನು ಕಾನೂನು ಬಾಹಿರವಾಗಿ ದತ್ತು ಪಡೆದ ಪ್ರಕರಣದಲ್ಲಿ ಸೋನು ಗೌಡ ಅವರ ಬಂಧನವಾಗಿದೆ. ಆ ಮಗುವನ್ನು ರೀಲ್ಸ್‌ನಲ್ಲಿ ಕೂಡ ಬಳಸಿಕೊಂಡಿದ್ದರು. ಹಾಗೂ ಮಗುವನ್ನು ದತ್ತು ಪಡೆದಿರುವುದಾಗಿ ಹೇಳಿಕೊಂಡಿದ್ದರು.

ಏಳು ವರ್ಷದ ಮಗುವನ್ನು ಕಾನೂನು ಬಾಹಿರವಾಗಿ ಅವರು ದತ್ತು ಪಡೆದಿದ್ದರು. ದತ್ತು ಪಡೆಯುವ ಸಂಬಂಧ ಯಾವುದೇ ಕಾನೂನು ಪಾಲನೆ ಮಾಡಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಗೀತಾ ದೂರು ನೀಡಿದ್ದರು. ಜೆ.ಜೆ.ಆ್ಯಕ್ಟ್ ಅಡಿ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿಕೊಂಡ ನಂತರ ಅವರನ್ನು ಬಂಧಿಸಲಾಗಿತ್ತು.
ಮಗುವನ್ನು ದತ್ತು ಪಡೆದರೂ ಆ ಮಗುವಿಗೆ ಸಂಬಂಧಿಸಿದ ಯಾವುದೇ ಗುರುತಿನ ದಾಖಲೆಗಳು ಮತ್ತು ಪೋಷಕರ ಗುರುತು ಬಹಿರಂಗ ಮಾಡುವಂತಿಲ್ಲ.
ವಿಚಾರಣೆಗೆಂದು 4 ದಿನ ಕಸ್ಟಡಿಗೆ ಪಡೆದ ಬ್ಯಾಡರಹಳ್ಳಿ ಪೊಲೀಸರು, ಭಾನುವಾರ ರಾಯಚೂರಿಗೆ ಸೋನು ಗೌಡ ಅವರನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದರು ಹಾಗೂ ಸ್ಥಳೀಯರ ಹೇಳಿಕೆಯನ್ನೂ ದಾಖಲಿಸಿಕೊಂಡಿದ್ದರು.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

 

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement