2 ಕ್ಷೇತ್ರಗಳಲ್ಲಿ ಒಂದೇ ಪಕ್ಷದ ತಲಾ ಇಬ್ಬರು ಅಭ್ಯರ್ಥಿಗಳಿಂದ ನಾಮಪತ್ರ ;ತಾವೇ ಅಧಿಕೃತ ಅಭ್ಯರ್ಥಿಗಳೆಂದು ಹಕ್ಕು ಮಂಡನೆ…!

ನವದೆಹಲಿ: ಉತ್ತರ ಪ್ರದೇಶದ ರಾಂಪುರ ಮತ್ತು ಮೊರಬಾಬಾದ್ ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ಕುರಿತು ಗೊಂದಲ ಉಂಟಾಗಿದೆ. ಯಾಕೆಂದರೆ ತಾವೇ ಅಧಿಕೃತ ಪಕ್ಷದ ಅಭ್ಯರ್ಥಿಗಳು ಎಂದು ಹೇಳಿಕೊಂಡು ಈ ಎರಡೂ ಕ್ಷೇತ್ರಗಳಿಂದ ತಲಾ ಇಬ್ಬರು ಬುಧವಾರ ನಾಮಪತ್ರ ಸಲ್ಲಿಸಿದ್ದಾರೆ.
ರಾಂಪುರದಲ್ಲಿ, 2022 ರ ಲೋಕಸಭಾ ಉಪಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಸೀಮ್ ರಾಜಾ ಅವರು ಪಕ್ಷದ ಅಭ್ಯರ್ಥಿ ಎಂದು ಹೇಳಿಕೊಂಡು ನಾಮಪತ್ರ ಸಲ್ಲಿಸಿದರು. ಆದರೆ ದೆಹಲಿಯ ಮಸೀದಿಯೊಂದರ ಇಮಾಮ್ ಆಗಿರುವ ಮೊಹಿಬುಲ್ಲಾ ನದ್ವಿ ಕೂಡ ಇದೇ ರೀತಿ ಹೇಳಿಕೊಂಡು ಸಮಾಜವಾದಿ ಪಕ್ಷದ ಅಭ್ಯರ್ಥಿ ಎಂದು ಹೇಳಿ ಇದೇ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ತಾನು ಅಧಿಕೃತ ಪಕ್ಷದ ಅಭ್ಯರ್ಥಿಯಾಗಿದ್ದು, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ ಯಾದವ್ ತಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ನದ್ವಿ ಸುದ್ದಿಗಾರರಿಗೆ ತಿಳಿಸಿದರು. ಇಬ್ಬರೂ ಅಭ್ಯರ್ಥಿಗಳು ತಾವೇ ನಿಜವಾದ ಪಕ್ಷದ ಅಭ್ಯರ್ಥಿ ಎಂದು ಹೇಳಿಕೊಂಡಿದ್ದರೂ ಸಮಾಜವಾದಿ ಪಕ್ಷ ಅವರ ಬಗ್ಗೆ ಏನನ್ನೂ ಹೇಳಿಲ್ಲ.

ಅದೇ ರೀತಿ ಮೊರಾದಾಬಾದ್‌ನಲ್ಲಿಯೂ ನಡೆದಿದೆ. ಸಮಾಜವಾದಿ ಪಕ್ಷದ ನಾಯಕರಾದ ರುಚಿ ವೀರಾ ಅವರು ಬುಧವಾರ ಎಸ್‌ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಆ ಕ್ಷೇತ್ರದ ಹಾಲಿ ಸಂಸದರಾಗಿರುವ ಎಸ್ ಟಿ ಹಸನ್ ಅವರು ಈ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಮಂಗಳವಾರವೇ ನಾಮಪತ್ರ ಸಲ್ಲಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ವೀರಾ ಅವರು, ತಾನು ಎಸ್‌ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ.
ಎಸ್‌ಪಿ ವಕ್ತಾರ ಫರ್ರುಲ್ ಹಸನ್ ಚಂದ್ ಮಾತನಾಡಿ, ಎಸ್‌ಪಿ ಪ್ರಜಾಸತ್ತಾತ್ಮಕ ಪಕ್ಷವಾಗಿದ್ದು, ಯಾವುದೇ ಗೊಂದಲವಿಲ್ಲ. ಪಕ್ಷದ ನಾಯಕತ್ವ ಯಾರಿಗೆ ಬೇಕೋ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ, ಸಂಜೆ ವೇಳೆಗೆ ಪರಿಸ್ಥಿತಿ ತಿಳಿಯಾಗಲಿದೆ ಎಂದರು.
ಏಪ್ರಿಲ್ 19 ರಂದು ಮೊದಲ ಹಂತದ ಚುನಾವಣೆಯಲ್ಲಿ ರಾಂಪುರ ಮತ್ತು ಮೊರಾದಾಬಾದ್ ಎರಡೂ ಕ್ಷೇತ್ರದ ಮತದಾನ ನಡೆಯಲಿದ್ದು, ಬುಧವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು.

ಪ್ರಮುಖ ಸುದ್ದಿ :-   ದಕ್ಷಿಣ ಭಾರತದಲ್ಲಿ ತೀವ್ರ ನೀರಿನ ಬಿಕ್ಕಟ್ಟು : 42 ಜಲಾಶಯದಲ್ಲಿ ಕೇವಲ 17%ರಷ್ಟು ನೀರಿನ ಸಂಗ್ರಹ ಮಾತ್ರ ಬಾಕಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement