ಕೋಲಾರ : ಕಗ್ಗಂಟಾಗಿದ್ದ ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಅನ್ನು ಕಾಂಗ್ರೆಸ್ ಕೊನೆಗೂ ಘೋಷಣೆ ಮಾಡಿದೆ. ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಮಾಜಿ ಮೇಯರ್ ವಿಜಯಕುಮಾರ ಅವರ ಪುತ್ರ ಕೆ.ವಿ. ಗೌತಮ (K Goudtam) ಅವರಿಗೆ ನೀಡಿದೆ.
ಈ ಮೂಲಕ ಕಾಂಗ್ರೆಸ್ ಹೈಕಮಾಂಡ್ ಮಾಜಿ ಸಭಾಧ್ಯಕ್ಷ ರಮೇಶಕುಮಾರ ಹಾಗೂ ಸಚಿವ ಕೆ.ಎಚ್ ಮುನಿಯಪ್ಪ ಈ ನಾಯಕರ ಬಣಕ್ಕೆ ಸೇರದ ವ್ಯಕ್ತಿಗೆ ಟಿಕೆಟ್ ಘೋಷಣೆ ಮಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಎಲ್ಲ 28 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
ಕೋಲಾರ ಕಾಂಗ್ರೆಸ್ ಘಟಕದಲ್ಲಿ ರಮೇಶಕುಮಾರ ಮತ್ತು ಕೆ.ಎಚ್ ಮುನಿಯಪ್ಪ ಬಣಗಳ ನಡುವೆ ರಾಜಕೀಯ ಮೇಲಾಟ ಯಾವಾಗಲೂ ನಡೆಯುತ್ತವೆ. ಈ ಬಾರಿಯೂ ಅದೇ ಆಗಿತ್ತು. ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಕೆ.ಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣನಿಗೆ ನೀಡುವುದು ಖಾತ್ರಿ ಎಂಬುದು ಗೊತ್ತಾಗುತ್ತಿದ್ದಂತೆ ರಮೇಶಕುಮಾರ ಬಣದ ನಾಯಕರು ಬಂಡಾಯವೆದ್ದಿದ್ದರು.
ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಿದರೆ ಸಾಮೂಹಿಕವಾಗಿ ರಾಜೀನಾಮೆ ನೀಡುವುದಾಗಿ ಐವರು ಶಾಸಕರು ಬೆದರಿಕೆ ಹಾಕಿದರು. ಕೊನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಮಧ್ಯಸ್ಥಿಕೆಯಿಂದ ಅವರನ್ನು ಸಮಾಧಾನ ಮಾಡಲಾಯಿತು. ಇದೀಗ ಈ ಎರಡೂ ಬಣದ ಆಕಾಂಕ್ಷಿಗಳನ್ನು ಬಿಟ್ಟು ಗೌತಮ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ಕೆ.ವಿ.ಗೌತಮ ಬೆಂಗಳೂರಿನ ಮಾಜಿ ಮೇಯರ್ ಕೆ.ವಿಜಯಕುಮಾರ ಅವರ ಮಗ. ಕೋಲಾರ ಮೂಲದವರಾದ ಇವರು ಬೆಂಗಳೂರಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದಾರೆ. ಕೆ ವಿಜಯಕುಮಾರ ಕಾಂಗ್ರೆಸ್ಸಿನ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಪಕ್ಷದ ಸಂಘಟನೆಯ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ ಈ ಹಿನ್ನೆಲೆಯಲ್ಲಿ ಅವರ ಪುತ್ರನಿಗೆ ಕೋಲಾರ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ