ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ ಬಿಜೆಪಿಗೆ ಸೇರ್ಪಡೆ

ಬೆಂಗಳೂರು: ನಟಿ-ಹಾಗೂ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ ಅಧಿಕೃತವಾಗಿ ಶುಕ್ರವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕರ್ನಾಟಕ ಚುನಾವಣಾ ಉಸ್ತುವಾರಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್ವಾಲ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ , ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ, ವಿರೋಧ ಪಕ್ಷದ ನಾಯಕ ಆರ್. ಅಶೋಕ ಮೊದಲಾದವರ ಸಮ್ಮುಖದಲ್ಲಿ ಅವರು ಬಿಜೆಪಿಗೆ ಸೇರ್ಪಡೆಗೊಂಡರು.
ಬಿಜೆಪಿಗೆ ಸೇರ್ಪಡೆಯಾದ ನಂತರ ನಂತರ ಮಾತನಾಡಿದ ಅವರು, ಬಿಜೆಪಿ ಸೇರ್ಪಡೆ ನನ್ನ ಉತ್ತಮ ಆಯ್ಕೆ ಎನಿಸಿತ್ತು, ಬೊಮ್ಮಾಯಿ ನನಗೆ 50 ಕೋಟಿ ರೂ. ಅನುದಾನ ನೀಡಿದ್ದರು, ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನನ್ನ ಪರ ಪ್ರಚಾರ ಮಾಡಿದ್ದನ್ನು ಮರೆಯುವುದಿಲ್ಲ. ಮಂಡ್ಯ ಜಿಲ್ಲೆಗೆ ಅಭಿವೃದ್ಧಿಗೆ ಕೊಟ್ಟ ಕೊಡುಗೆಯಲ್ಲಿ ಬಿಜೆಪಿಯ ಪಾಲೂ ಇದೆ ಎಂದರು.

ಬಿಜೆಪಿ ಸೇರ್ಪಡೆಯಾಗುವ ಮುನ್ನ ಪುತ್ರ ಅಭಿಷೇಕ ಜೊತೆ ಅಂಬರೀಶ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದರು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಜೊತೆಯಲ್ಲಿದ್ದರು. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದಿರುವ ಸುಮಲತಾ, ಕೆಲ ದಿನಗಳ ಹಿಂದೆ ಬಿಜೆಪಿಗೆ ಸೇರುವುದಾಗಿ ಘೋಷಣೆ ಮಾಡಿದ್ದರು. ಬುಧವಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ್ದ ಅವರು, ಟಿಕೆಟ್ ಸಿಗದಿದ್ದರೆ ಹಲವು ರಾಜಕಾರಣಿಗಳು ಪಕ್ಷ ಬದಲಾಯಿಸುತ್ತಾರೆ. ಆದರೆ, ನಾನು ಟಿಕೆಟ್ ಬಿಟ್ಟುಕೊಟ್ಟು ಬಿಜೆಪಿ ಸೇರುತ್ತಿದ್ದೇನೆ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಯೋಗೇಶ್ವರ ವಿರುದ್ಧ ಮಾನಹಾನಿಕರ ಹೇಳಿಕೆ ನೀಡದಂತೆ ಮಲಮಗಳ ವಿರುದ್ಧ ತಡೆಯಾಜ್ಞೆ ತಂದ ತಾಯಿ

ಸುಮಲತಾ 2019 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಸ್ವತಂತ್ರವಾಗಿ ಚುನಾವಣಾ ಅಖಾಡಕ್ಕೆ ಧುಮುಕಿದರು, ಮಂಡ್ಯದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸುಮಲತಾ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದರು.ಮಂಡ್ಯದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಸುಮಲತಾಗೆ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಹಿನ್ನಡೆಯಾಯಿತು. ಯಾಕೆಂದರೆ ಬಿಜೆಪಿ ಮಂಡ್ಯ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ. ಎನ್ ಡಿ ಎ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ತಮ್ಮ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅವರು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement