ಬನವಾಸಿ: ಬಿಜೆಪಿ ತೊರೆದು ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಪುತ್ರ…!

ಬನವಾಸಿ (ಶಿರಸಿ): ಯಲ್ಲಾಪುರ ಕ್ಷೇತ್ರದ ಯುವ ಮುಖಂಡ ಹಾಗೂ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ ಇಂದು, ಗುರುವಾರ ಅಧಿಕೃತವಾ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಪಟ್ಟಣದ ಟಿ‌.ಎಂ.ಎಸ್ ಎದುರು ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಅವರು ವಿವೇಕ ಹೆಬ್ಬಾರ್ ಅವರಿಗೆ ಪಕ್ಷದ ಶಾಲು ಹಾಕಿ ಬಾವುಟ  ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ವಿವೇಕ ಹೆಬ್ಬಾರ ಜೊತೆಗೆ ಬನವಾಸಿ ಭಾಗದ ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ಮಂಗಳಾ ನಾಯ್ಕ, ಸಿದ್ದು ನರೇಗಲ್, ರಘು ನಾಯ್ಕ, ಪ್ರಕಾಶ್ ಹೆಗಡೆ, ಗಣಪತಿ ನಾಯ್ಕ ಬಾಶಿ, ಪ್ರಶಾಂತ ಗೌಡರ, ಜಿ.ವಿ ಹೆಗಡೆ, ಬೋಜಪ್ಪ ನಾಯ್ಕ, ಅರವಿಂದ ತಲಗುಂದ, ಮಲ್ಲಸರ್ಜ ಗೌಡ್ರು, ವಿನಯ ಗೌಡ್ರು, ಗಜಾನನ ಗೌಡ್ರು, ಸುರೇಶ ಗಡಿಗೇರಿ, ಮಂಜುನಾಥ ನಾಯ್ಕ, ಶಂಕರ ಗೌಡ್ರು, ರಾಜು ಗೌಡ್ರು, ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ರೂಪಾ ನಾಯ್ಕ, ಶಶಿಧರ ನಾಯ್ಕ, ರಾಜು ಗೌಡ್ರು, ಬಿ.ಎಸ್.ಗಂಗಣ್ಣ, ಉಮೇಶ ಗೌಡ್ರು, ಸುಧಾಕರ ನಾಯ್ಕ ಮೊದಲಾದವರು ಸೇರ್ಪಡೆಯಾಗಿದ್ದಾರೆ.
ಈ ವೇಳೆ ಮಾತನಾಡಿದ ವಿವೇಕ ಹೆಬ್ಬಾರ, ಬಿಜೆಪಿಯು ನಮ್ಮ ಬೆಂಬಲಿಗರನ್ನು ಹಾಗೂ ನಾಯಕರನ್ನ ನಡೆಸಿಕೊಂಡ ರೀತಿಯಿಂದ ಬೇಸರಗೊಂಡು ವಾಪಸ್ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದೇವೆ ಎಂದು ಹೇಳಿದರು.
ಕಳೆದ ನಾಲ್ಕೈದು ತಿಂಗಳಿಂದ ಹೆಬ್ಬಾರ ಅವರು ಬಿಜೆಪಿ ತೊರೆಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಈ ಹಿಂದೆ

ಬಿಜೆಪಿಗೆ ಸೇರಿ ಸರ್ಕಾರವನ್ನು ಅಧಿಕಾರಕ್ಕೆ ತಂದೆವು, ಆದರೆ ನಂತರ ಅವರು ನಮ್ಮೊಂದಿಗೆ ನಡೆದುಕೊಂಡ ರೀತಿ ಸರಿಯಾಗಿರಲಿಲ್ಲ. ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದರು.
ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಡಾ.ಅಂಜಲಿ ನಿಂಬಾಳ್ಕರ ಅವರನ್ನ ಗೆಲ್ಲಿಸಲು ಎಲ್ಲರೂ ಕಾಂಗ್ರೆಸ್ ಸೇರಿದ್ದೇವೆ. ಇನ್ನೂ ಹೆಚ್ಚಿನ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲು ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಬನವಾಸಿ ವ್ಯಾಪ್ತಿಯ ಹತ್ತು ಪಂಚಾಯತಗಳಲ್ಲಿ ಅತ್ಯಧಿಕ ಮತ ಕಾಂಗ್ರೆಸ್ ಪಕ್ಷಕ್ಕೆ ಬರಲು ಎಲ್ಲರೂ ಶ್ರಮಿಸಬೇಕು ಎಂದರು.
ಯಾವುದೇ ಅಧಿಕಾರದ ಆಸೆಗೆ ಕಾಂಗ್ರೆಸ್ ಪಕ್ಷಕ್ಕೆ ಸೇರಿಲ್ಲ. ಬಿಜೆಪಿ ಸೇರುವಂತೆ ಕಾರ್ಯಕರ್ತರು ನಾಲ್ಕೈದು ತಿಂಗಳಿನಿಂದ ಮನವಿ ಮಾಡಿಕೊಳ್ಳುತ್ತಿದ್ದರು. ಅವರ ಧ್ವನಿಗೆ ಓಗೊಟ್ಟು ಕಾಂಗ್ರೆಸ್ ಸೇರುತ್ತಿದ್ದೇವೆ. ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಮುಂದಿನ ದಿನದಲ್ಲಿ ನಡೆಯಲಿದೆ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಗೆಲ್ಲುವುದು ಖಚಿತ ಎಂದರು.

ಪ್ರಮುಖ ಸುದ್ದಿ :-   ಹಾಸನದಲ್ಲಿ ಹಾಡಹಗಲೇ ಗುಂಡಿನ ಸದ್ದು; ಇಬ್ಬರು ಸಾವು, ಒಬ್ಬನ ಹತ್ಯೆಗೈದು ಮತ್ತೊಬ್ಬ ಆತ್ಮಹತ್ಯೆ ಮಾಡಿಕೊಂಡ ಶಂಕೆ

ಕೆಪಿಸಿಸಿ ಉಪಾಧ್ಯಕ್ಷ ಐವಾನ್ ಡಿಸೋಜಾ ಮಾತನಾಡಿ, ದೇಶಾದ್ಯಂತ ಬಿಜೆಪಿಯ ಸರ್ವಾಧಿಕಾರದ ಧೋರಣೆ ವಿರುದ್ಧ ಪರಿವರ್ತನೆ ಪ್ರಾರಂಭವಾಗಿದೆ. ದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಬಿಜೆಪಿಯಲ್ಲಿ ಗ್ರಾಮ ಮಟ್ಟದಲ್ಲೂ ಉಸಿರುಗಟ್ಟುವ ಪರಿಸ್ಥಿತಿ ಇದ್ದರೆ, ದೇಶದಲ್ಲಿ ಇನ್ಯಾವ ಪರಿಸ್ಥಿತಿ ಇರಬಹುದು ಎಂದು ಮತದಾರರು ಯೋಚಿಸಬೇಕು ಎಂದರು.
ಬಿಜೆಪಿ ಸೋಲಿಸಿ ಮತ್ತೆ ಪ್ರಜಾಪ್ರಭುತ್ವ ಉಳಿಸಬೇಕು ಎಂದು ಕಾಂಗ್ರೆಸ್ ನೊಂದಿಗೆ ಹಲವರು ಕೈ ಜೋಡಿಸುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ‌.ಕೆ ಶಿವಕುಮಾರ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರುವವರನ್ನ ಸೇರಿಸಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಪಕ್ಷಕ್ಕೆ ಬಂದವರು ಇಂದಿನಿಂದಲೇ ಪಕ್ಷ ‌ಸಂಘಟನೆ ಮಾಡಲು ಪ್ರಾರಂಭಿಸಿ ಎಂದು ಕರೆ ನೀಡಿರು.ಈ ಬಾರಿ ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ ಅವರನ್ನ ಗೆಲ್ಲಿಸಲು ಎಲ್ಲರೂ ಶ್ರಮ ವಹಿಸಬೇಕು ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕರ್ ಮಾತನಾಡಿ, ವಿವೇಕ್ ಹೆಬ್ಬಾರ ಪಕ್ಷ ಸೇರ್ಪಡೆಯಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಆನೆಬಲ ತಂದಂತಾಗಿದೆ. ಪಕ್ಷ ಸೇರಿದವರು ಪಕ್ಷಕ್ಕೆ ನಿಷ್ಠರಾಗಿ ಸಂಘಟನೆ ಮಾಡಬೇಕು. ಕಾಂಗ್ರೆಸ್ ಜಾತ್ಯತೀತ ಪಕ್ಷ, ಎಲ್ಲ ಜಾತಿ, ಧರ್ಮದವರನ್ನ ಸಮಾನವಾಗಿ ನೋಡುವ ಪಕ್ಷ. ಜಾತ್ಯತೀತ ರಾಷ್ಟ್ರ ನಿರ್ಮಾಣಕ್ಕೆ ಕಾಂಗ್ರೆಸ್ ಪ್ರಮುಖ ಕಾರಣ. ಕಾಂಗ್ರೆಸ್ ಸೇರಿದವರು ಎದೆ ತಟ್ಟಿ ತಾನು ಕಾಂಗ್ರೆಸ್ಸಿಗ ಎಂದು ಹೇಳಿ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಫ್.ನಾಯ್ಕ, ಮಾಜಿ ಸೇವಾದಳ ಮುಖ್ಯಸ್ಥ ಶಂಕರ ಗೌಡ ಪಾಟೀಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೆಗಡೆ ಹೊಸಬಾಳೆ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಆರ್.ಹೆಚ್.ನಾಯ್ಕ, ರವಿ ನಾಯ್ಕ ಮೊದಲಾದವರು ಇದ್ದರು.

ಪ್ರಮುಖ ಸುದ್ದಿ :-   ವಾಹನಗಳಿಗೆ ಕಣ್ಣುಕುಕ್ಕುವ ಎಲ್‌ಇಡಿ ಲೈಟ್‌ ಹಾಕಿಸಿದ್ದೀರಾ : ಜುಲೈ 1ರಿಂದ ಬೀಳಲಿದೆ ದಂಡ...

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement