ಲೋಕಸಭೆ ಚುನಾವಣೆ 2024: ಮೊದಲ ಹಂತದ ಮತದಾನಕ್ಕೆ ಮುನ್ನವೇ 2019ರ ಚುನಾವಣೆಗಿಂತ ಹೆಚ್ಚು ಮೌಲ್ಯದ ಸ್ವತ್ತು ವಶಕ್ಕೆ ಪಡೆದ ಚುನಾವಣಾ ಆಯೋಗ; ಎಷ್ಟು ಗೊತ್ತಾ..?

ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ದಿನದಿಂದ ಈವರೆಗೆ ದೇಶಾದ್ಯಂತ ದಾಖಲೆ ಇಲ್ಲದೆ ಸಾಗುತ್ತಿದ್ದ 4,650 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ವಿವಿಧ ಭದ್ರತಾ ಏಜೆನ್ಸಿಗಳು ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಹಣ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿವೆ.
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇನ್ನೂ ಆರಂಭವಾಗಿಲ್ಲ. ಆದರೆ ಚುನಾವಣಾ ಆಯೋಗ ಈಗಾಗಲೇ ವಶಕ್ಕೆ ಪಡೆದಿರುವ ಸ್ವತ್ತುಗಳ ಪ್ರಮಾಣ 4,650 ಕೋಟಿ ರೂ.ಗಳನ್ನು ದಾಟಿದೆ. ಯಾವುದೇ ಲೋಕಸಭಾ ಚುನಾವಣೆಯಲ್ಲೂ ಇಷ್ಟು ದೊಡ್ಡ ಮಟ್ಟದ ಸ್ವತ್ತನ್ನು ವಶಕ್ಕೆ ಪಡೆದಿರಲಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಮಾರ್ಚ್ 1 ರಿಂದ ಪ್ರತಿ ದಿನವೂ ದೇಶಾದ್ಯಂತ ಸುಮಾರು 100 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗುತ್ತಿದೆ. ನಗದು ಹಣ, ಮದ್ಯ, ಮಾದಕ ವಸ್ತು, ಉಚಿತ ಉಡುಗೊರೆಗಳು ಸೇರಿದಂತೆ ದಾಖಲೆ ಇಲ್ಲದೆ ಸಾಗಾಟ ಮಾಡಲಾಗುತ್ತಿದ್ದ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
2019ರ ಪೂರ್ಣ ಲೋಕಸಭಾ ಚುನಾವಣೆ ವೇಳೆ ಸಮಗ್ರವಾಗಿ 3,475 ಕೋಟಿ ರೂ. ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು. ಆದರೆ, ೀ ಸಲ ಮೊದಲ ಹಂತದ ಮತದಾನಕ್ಕೂ ಮೊದಲಲೇ ಕಳೆದ ಬಾರಿಗಿಂತಲೂ ಹೆಚ್ಚಿನ ಮೌಲ್ಯದ ಸ್ವತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರಮುಖ ಸುದ್ದಿ :-   ಅಬಕಾರಿ ನೀತಿ ಹಗರಣ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲಗೆ ಜಾಮೀನು

2019ಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಮಾದಕ ವಸ್ತುಗಳು ಹಾಗೂ ಉಚಿತ ಉಡುಗೊರೆಗಳನ್ನು ವಶಕ್ಕೆ ಪಡೆದ ಪ್ರಮಾಣದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ ಎಂದು ಆಯೋಗ ತಿಳಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಈವರೆಗೆ 2,068.8 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. 2019ರಲ್ಲಿ 1,279.9 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು.
ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೆ ಏಪ್ರಿಲ್ 19 ರಿಂದ ಆರಂಭವಾಗಲಿದ್ದು, 7 ಹಂತಗಳಲ್ಲಿ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದ್ದು, ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement