ಲೋಕಸಭೆ ಚುನಾವಣೆ : ಬಿಜೆಪಿ ಮೈತ್ರಿಕೂಟ Vs ಕಾಂಗ್ರೆಸ್‌ ಮೈತ್ರಿಕೂಟದ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಯಾರಿಗೆ ಎಷ್ಟು ಸ್ಥಾನಗಳು..? ಎಬಿಪಿ-ಸಿವೋಟರ್ ಸಮೀಕ್ಷೆ ಏನು ಹೇಳುತ್ತದೆ..?

ನವದೆಹಲಿ : 2024ರ ಲೋಕಸಭೆ ಚುನಾವಣೆಗೂ ಮುನ್ನ ನಡೆದ ಬಹು ನಿರೀಕ್ಷಿತ ಎಬಿಪಿ-ಸಿವೋಟರ್ ಸರ್ವೆಯು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸಂಭವನೀಯ ಫಲಿತಾಂಶಗಳ ಮೇಲೆ ಬೆಳಕು ಚೆಲ್ಲಿದೆ.
ಇತ್ತೀಚಿನ ಎಬಿಪಿ-ಸಿವೋಟರ್ (ABP-CVoter) ಅಭಿಪ್ರಾಯ ಸಮೀಕ್ಷೆ ಪ್ರಕಾರ, ಒಟ್ಟು 543 ಸ್ಥಾನಗಳಲ್ಲಿ ಎನ್‌ಡಿಎ 373 ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸುವ ನಿರೀಕ್ಷೆಯಿದೆ. ಬಿಜೆಪಿ ಸ್ವಂತವಾಗಿ 323 ಸ್ಥಾನಗಳನ್ನು ಗೆಲ್ಲಬಹುದು, ಕಳೆದ ಲೋಕಸಭೆ ಚುನಾವಣೆಗೆ 20 ಸ್ಥಾನಗಳನ್ನು ಹೆಚ್ಚು ಪಡೆಯಬಹುದು ಎಂದು ಅದು ಹೇಳಿದೆ. ಒಟ್ಟು 543 ಸ್ಥಾನಗಳ ಲೋಕಸಭೆಯಲ್ಲಿ ಸರಳ ಬಹುಮತಕ್ಕೆ 272 ಸ್ಥಾನಗಳನ್ನು ಗೆಲ್ಲಬೇಕು.
ಸಮೀಕ್ಷೆಯು ಎನ್‌ಡಿ 46.6%ರಷ್ಟು ಮತಗಳನ್ನು ಪಡೆಯಬಹುದು ಎಂದು ಅಂದಾಜಿಸಿದೆ. ಬಿಜೆಪಿಯೇ 40.2% ಮತಗಳನ್ನು ಪಡೆಯಬಹುದು ಎಂದು ಅದು ಹೇಳಿದೆ. ಇಂಡಿಯಾ (I.N.D.I.A) ಮೈತ್ರಿಕೂಟವು 39.8% ರಷ್ಟು ಮತಗಳನ್ನು ಪಡೆಯಬಹುದು ಎಂದು ಹೇಳಿದೆ. ಆದರೆ ಕಾಂಗ್ರೆಸ್ 19.2% ಕ್ಕಿಂತ ಹೆಚ್ಚು ಮತಗಳನ್ನು ಗಳಿಸುವ ಸಾಧ್ಯತೆಯಿಲ್ಲ ಎಂದು ಸಮೀಕ್ಷೆ ಹೇಳಿದೆ.
2024 ರ ಲೋಕಸಭೆ ಚುನಾವಣೆಯಲ್ಲಿ ಪಕ್ಷವು ತನ್ನದೇ ಆದ 65 ಸ್ಥಾನಗಳನ್ನು ಗೆಲ್ಲಬಹುದು, ಇಂಡಿಯಾ (I.N.D.I.A) ಮೈತ್ರಿಕೂಟ ಒಟ್ಟು 155 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸಿ ವೋಟರ್‌ ಸಮೀಕ್ಷೆ ಹೇಳಿದೆ.
ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ರಾಹುಲ್ ಗಾಂಧಿಯವರ 2022-23 ಭಾರತ ಜೋಡೋ ಯಾತ್ರೆ ಮತ್ತು ಈ ವರ್ಷ ಎರಡು ತಿಂಗಳ ಅವಧಿಯ ಭಾರತ ಜೋಡೋ ನ್ಯಾಯ ಯಾತ್ರೆಯು ಮತದಾರರ ಅಷ್ಟೊಂದು ಪ್ರಭಾವ ಬೀರಿಲ್ಲ. ಕಾಂಗ್ರೆಸ್, ದೆಹಲಿ, ಹಿಮಾಚಲ, ಆಂಧ್ರಪ್ರದೇಶ ಮತ್ತು ಇತರ ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಸ್ಥಾನವನ್ನು ಗೆಲ್ಲುವುದು ಅದಕ್ಕೆ ಕಷ್ಟವಾಗಬಹುದು ಎಂದು ಸಮೀಕ್ಷೆ ಹೇಳಿದೆ. ಕನಿಷ್ಠ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಒಂದಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸುವುದು ಕಷ್ಟಸಾಧ್ಯ ಎಂದು ಸಮೀಕ್ಷೆ ಹೇಳಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ ಬಿಜೆಪಿಯು ಹೆಚ್ಚು ಸ್ತಾನಗಳನ್ನು ಗೆಲ್ಲಲಿದೆ ಎಂದು ಅದು ಹೇಳಿದೆ.

ಕರ್ನಾಟಕ, ಆಂಧ್ರಪ್ರದೇಶ : ದಕ್ಷಿಣದಲ್ಲಿ ಬಿಜೆಪಿ ಭರವಸೆ
ಎಬಿಪಿ-ಸಿ ವೋಟರ್ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳ ಪೈಕಿ ಬಿಜೆಪಿ-ಜೆಡಿ(ಎಸ್) ಮೈತ್ರಿಕೂಟ ಈ ಬಾರಿ 23 ಸ್ಥಾನಗಳನ್ನು ಗೆಲ್ಲಬಹುದು ಹಾಗೂ ಕಾಂಗ್ರೆಸ್ಸಿಗೆ 5 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಬಹುದು ಎಂದು ಸಮೀಕ್ಷೆಯಲ್ಲಿ ಕಂಡುಬಂದಿದೆ.
ಆಂಧ್ರಪ್ರದೇಶದಲ್ಲಿ, ಟಿಡಿಪಿ-ಬಿಜೆಪಿ-ಜನಸೇನಾ ಮೈತ್ರಿಯಾದ ಎನ್‌ಡಿಎ ಗಮನಾರ್ಹ ಜಯ ಸಾಧಿಸಬಹುದು, ಅದು 20 ಸ್ಥಾನಗಳನ್ನು ಗೆಲ್ಲಬಹುದು, ಮುಖ್ಯಮಂತ್ರಿ ಜಗನ್ಮೀಹನ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಐದು ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.
ಉತ್ತರ ಪ್ರದೇಶ…
ಸ್ಥಾನಗಳ ಲೆಕ್ಕದಲ್ಲಿ ಅತಿ ದೊಡ್ಡ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಶೇ.51ರಷ್ಟು ಮತಗಳನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದೆ. ಮುಖ್ಯವಾಗಿ ಸಮಾಜವಾದಿ ಪಕ್ಷ ಸೇರಿದಂತೆ ಇಂಡಿಯಾ (I.N.D.I.A) ಮೈತ್ರಿಕೂಟ 38% ಮತಗಳನ್ನು ಪಡೆಯುವ ಸಾಧ್ಯತೆಯಿದೆ. ಮಾಯಾವತಿಯವರ ಬಹುಜನ ಸಮಾಜ ಪಕ್ಷ, ಸ್ವತಂತ್ರರು ಮತ್ತು ಇತರರು ಉಳಿದ ಮತಗಳನ್ನು ಸೆಳೆಯಬಹುದು. ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಎನ್‌ಡಿಎ 73 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಬಹುದು, ಸಮಾಜವಾದಿ ಪಕ್ಷ+ ಉಳಿದ 7 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳುತ್ತದೆ.

ಪ್ರಮುಖ ಸುದ್ದಿ :-   ಅಮಿತ್ ಶಾ ವೀಡಿಯೊ ತಿರುಚಿದ ಆರೋಪ: ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಸಿಎಂಗೆ ಸಮನ್ಸ್

ರಾಜಸ್ಥಾನ ಮತ್ತು ಗುಜರಾತ್: ಕ್ಲೀನ್ ಸ್ವೀಪ್
ರಾಜಸ್ಥಾನದಲ್ಲಿ ಬಿಜೆಪಿ ಎಲ್ಲಾ 25 ಕ್ಷೇತ್ರಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡುವ ನಿರೀಕ್ಷೆಯಲ್ಲಿದೆ. ರಾಜಸ್ಥಾನದಲ್ಲಿ ಬಿಜೆಪಿ ದೊಡ್ಡ ಬೆಂಬಲವನ್ನು ಹೊಂದಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ, ಬಿಜೆಪಿ 24 ರಲ್ಲಿ ಗೆಲುವು ಸಾಧಿಸಿತ್ತು. ಒಂದು ಸ್ಥಾನದಲ್ಲಿ ಮಾತ್ರ ಬೇರೆ ಪಕ್ಷ ಗೆಲುವು ಸಾಧಿಸಿತ್ತು. ಆದರೆ ಈ ಬಾರಿ ಸಂಪೂರ್ಣ ಎಲ್ಲ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಸಿ ವೋಟರ್‌ ಸಮೀಕ್ಷೆ ಅಂದಾಜಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯ ಗುಜರಾತ್‌ನಲ್ಲಿಯೂ ಬಿಜೆಪಿ 26 ಸ್ಥಾನಗಳಲ್ಲಿ ಕ್ಲೀನ್ ಸ್ವೀಪ್ ಮಾಡುವ ಮುನ್ಸೂಚನೆ ಇದೆ.
ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢ…
ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಂಡ ಮಧ್ಯಪ್ರದೇಶದಲ್ಲಿಯೂ ಕೇಸರಿ ಅಲೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ, ಬಿಜೆಪಿ 29 ರಲ್ಲಿ 28 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಅಂದಾಜಿಸಲಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ 1 ಸ್ಥಾನ ಗೆಲ್ಲಬಹುದು ಎಂದು ಅಂದಾಜಿಸಿದೆ.
ಛತ್ತೀಸ್‌ಗಢದಲ್ಲಿ, 11 ಲೋಕಸಭಾ ಸ್ಥಾನಗಳಲ್ಲಿ 10 ರಲ್ಲಿ ಗೆಲುವು ಸಾಧಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ಗೆ 1 ಕ್ಷೇತ್ರದಲ್ಲಿ ಗೆಲ್ಲಬಹುದು. ಬಿಜೆಪಿ 49.8% ಮತಗಳನ್ನು ಹಾಗೂ ಕಾಂಗ್ರೆಸ್ 44.4% ರಷ್ಟು ಮತಗಳನ್ನು ಪಡೆಯಬಹುದು ಎಂದು ಸಮೀಕ್ಷೆ ಹೇಳಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ಸಮಬಲದ ಸ್ಪರ್ಧೆ…
ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಮೀಕ್ಷೆಯ ಪ್ರಕಾರ, ಟಿಎಂಸಿ ಮತ್ತು ಬಿಜೆಪಿ ಎರಡೂ ತಲಾ 20 ಸ್ಥಾನಗಳನ್ನು ಗೆಲ್ಲಬಹುದು, ಕಾಂಗ್ರೆಸ್‌ ಹಾಗೂ ಇತರರು ಕೇವಲ ಎರಡು ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. 2019ರಲ್ಲಿ ಟಿಎಂಸಿ 22 ಮತ್ತು ಬಿಜೆಪಿ 18 ಸ್ಥಾನಗಳನ್ನು ಗೆದ್ದಿತ್ತು.
ಒಡಿಶಾ ಮತ್ತು ಜಾರ್ಖಂಡ್ ನಲ್ಲಿ ಕಾಂಗೆಸ್ಸಿಗೆ ಬಲವಿಲ್ಲ…
ಒಡಿಶಾದ 21 ಸ್ಥಾನಗಳ ಪೈಕಿ ಬಿಜೆಪಿ 13 ಮತ್ತು ಬಿಜೆಡಿ 7 ಸ್ಥಾನ ಗೆಲ್ಲಬಹುದು. ಕಾಂಗ್ರೆಸ್ ಒಂದು ಸ್ಥಾನ ಗೆಲ್ಲಬಹುದು. ಜಾರ್ಖಂಡ್‌ದ 14 ಸ್ಥಾನಗಳಲ್ಲಿ, ಬಿಜೆಪಿ ನೇತೃತ್ವದ ಎನ್‌ಡಿಎ 13 ಸ್ಥಾನಗಳನ್ನು ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ, ಒಂದು ಸ್ಥಾನದಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲಬಹುದು ಎಂದು ಹೇಳಿದೆ.
ಬಿಹಾರದಲ್ಲಿ…
ಬಿಹಾರದ 40 ಸ್ಥಾನಗಳಲ್ಲಿ, ಬಿಜೆಪಿ, ಜೆಡಿಯು, ಎಚ್‌ಎಎಂ, ಮತ್ತು ಆರ್‌ಎಲ್‌ಎಂನ ‘ಮಹಾಘಟಬಂಧನ’ 33 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ, ಆರ್‌ಜೆಡಿ, ಕಾಂಗ್ರೆಸ್, ಎಡಪಕ್ಷಗಳ ಮಹಾಮೈತ್ರಿಕೂಟ 7 ಸ್ಥಾನಗಳನ್ನು ಗೆಲ್ಲಬಹುದು ಎಂದು ಹೇಳಿದೆ.
ಸರ್ವೆ ಪ್ರಕಾರ, 2019 ರ ಚುನಾವಣೆಗೆ ಹೋಲಿಸಿದರೆ ಬಿಹಾರದಲ್ಲಿ ಎನ್‌ಡಿಎ 6 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. 2019 ರ ಚುನಾವಣೆಯಲ್ಲಿ ಬಿಜೆಪಿ-ಜೆಡಿ(ಯು) ಮೈತ್ರಿಕೂಟವು 39 ಸ್ಥಾನಗಳನ್ನು ಮತ್ತು ಕಾಂಗ್ರೆಸ್ ಒಂದು ಸ್ಥಾನವನ್ನು ಗೆದ್ದಿತ್ತು.

ತಮಿಳುನಾಡು, ಕೇರಳ, ತೆಲಂಗಾಣದಲ್ಲಿ….
ಕಾಂಗ್ರೆಸ್, ಡಿಎಂಕೆ ಜೊತೆಗೆ ತಮಿಳುನಾಡಿನ ಎಲ್ಲಾ 39 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. ಎಐಎಡಿಎಂಕೆ ತನ್ನ ಖಾತೆಯನ್ನು ತೆರೆಯದಿರಬಹುದು ಮತ್ತು ಎಲ್ಲಾ ಪ್ರಚಾರದ ಹೊರತಾಗಿಯೂ ಬಿಜೆಪಿ ತನ್ನ ಛಾಪು ಮೂಡಿಸುವ ಸಾಧ್ಯತೆಯಿಲ್ಲ. ಎರಡು ಪಕ್ಷಗಳು ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುತ್ತವೆ ಎಂಬ ಊಹಾಪೋಹಗಳು ಈ ಹಿಂದೆ ಇದ್ದವು, ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ.
ಕೇರಳದಲ್ಲಿ, ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಒಂದೂ ಸ್ತಾನ ಗೆಲ್ಲದಿರಬಹುದು ಮತ್ತು ಬಿಜೆಪಿಗೆ ತನ್ನ ಖಾತೆ ತೆರೆಯುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಎಲ್ಲಾ 20 ಲೋಕಸಭಾ ಸ್ಥಾನಗಳನ್ನೂ ಗೆಲ್ಲುವ ಸಾಧ್ಯತೆಯಿ ಎಂದು ಸಮೀಕ್ಷೆ ಅಂದಾಜಿಸಿದೆ.
ತೆಲಂಗಾಣದ ಒಟ್ಟು 17 ಸ್ಥಾನಗಳ ಪೈಕಿ ಆಡಳಿತಾರೂಢ ಕಾಂಗ್ರೆಸ್‌ 10 ಸ್ಥಾನಗಳನ್ನು ಗೆಲ್ಲಬಹುದು. ಬಿಜೆಪಿ ಮೈತ್ರಿಕೂಟ 5 ಮತ್ತು ಟಿಆರ್‌ಎಸ್-ಎಐಎಂಐಎಂ ತಲಾ ಒಂದು ಸ್ಥಾನದಲ್ಲಿ ಗೆಲ್ಲಬಹುದು ಎಂದು ಅದು ಅಂದಾಜಿಸಿದೆ.
ದೆಹಲಿ, ಪಂಜಾಬ್ ಮತ್ತು ಹರಿಯಾಣದಲ್ಲಿ ಏನಾಗಬಹುದು..?
ಕಾಂಗ್ರೆಸ್ ಮತ್ತು ಎಎಪಿ ನಡುವೆ ಸೀಟು ಹಂಚಿಕೆ ಒಪ್ಪಂದದ ಹೊರತಾಗಿಯೂ, ದೆಹಲಿಯಲ್ಲಿ ಬಿಜೆಪಿ ಮತ್ತೊಮ್ಮೆ ಎಲ್ಲಾ ಏಳು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ ಎಂದು ಅದು ಹೇಳಿದೆ. ದೆಹಲಿಯಲ್ಲಿ ತನ್ನ ಸರ್ಕಾರವನ್ನು ಹೊಂದಿರುವ ಎಎಪಿ (AAP) ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ, ಕಾಂಗ್ರೆಸ್ಸಿಗೆ 3 ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.
ಪಂಜಾಬ್‌ನಲ್ಲಿ 13 ಸ್ಥಾನಗಳಲ್ಲಿ ಕಾಂಗ್ರೆಸ್ ಏಳು, ಎಎಪಿ 4 ಮತ್ತು ಬಿಜೆಪಿ ಎರಡು ಸ್ಥಾನಗಳನ್ನು ಗೆಲ್ಲಬಹುದು. ಶಿರೋಮಣಿ ಅಕಾಲಿದಳ ಶೇ.16.5ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದ್ದರೂ ಅದಕ್ಕೆ ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗದೇ ಇರಬಹುದು. 2019ರಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಅಕಾಲಿ ದಳ 2 ಸ್ಥಾನಗಳನ್ನು ಗೆದ್ದಿತ್ತು.
ಹರಿಯಾಣದಲ್ಲಿ ಬಿಜೆಪಿ 10 ರಲ್ಲಿ 9 ಸ್ಥಾನಗಳನ್ನು ಹಾಗೂ ಒಂದು ಸ್ಥಾನ ಇಂಡಿಯಾ ಮೈತ್ರಿಕೂಟ ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

ಪ್ರಮುಖ ಸುದ್ದಿ :-   ವೀಡಿಯೊ....| ವಿಚ್ಛೇದನ ಪಡೆದ ಮಗಳನ್ನು ವಾದ್ಯಗಳ ಸಮೇತ ಮನೆಗೆ ಕರೆತಂದ ತಂದೆ...!

ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್…
ಮೋದಿ ಸರ್ಕಾರವು 370 ನೇ ವಿಧಿಯನ್ನು ರದ್ದುಗೊಳಿಸಿದಾಗ 2019 ರಲ್ಲಿ ಅದರ ವಿಶೇಷ ಸ್ಥಾನಮಾನ ತೆಗೆದುಹಾಕಿದಾಗಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆಯಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಮರಳಿ ಸ್ಥಾಪಿಸಬೇಕೆಂದು ಬಯಸುವ ಇಂಡಿಯಾ ಮೈತ್ರಿಕೂಟ ಐದು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಗೆಲ್ಲಬಹುದು, ಎರಡರಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಹೇಳಿದೆ.
2019 ರಲ್ಲಿ ಜೆ & ಕೆ ರಾಜ್ಯದಿಂದ ಬೇರ್ಪಟ್ಟ ಲಡಾಖ್‌ನ ಕೇಂದ್ರಾಡಳಿತ ಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್‌ ಗೆಲ್ಲಬಹುದು ಎಂದು ಅಂದಾಜಿಸಲಾಗಿದೆ.
ಈಶಾನ್ಯ ರಾಜ್ಯಗಳಲ್ಲಿ ಯಾರು ಗೆಲ್ಲುತ್ತಾರೆ..?
ಅಸ್ಸಾಂನ 14 ಸ್ಥಾನಗಳಲ್ಲಿ ಆಡಳಿತಾರೂಢ ಬಿಜೆಪಿ 12 ಮತ್ತು ಕಾಂಗ್ರೆಸ್ ಎರಡು ಸ್ಥಾನಗಳನ್ನು ಗೆಲ್ಲಬಹುದು. ಎಐಯುಡಿಎಫ್ ಇಲ್ಲಿ ತನ್ನ ಖಾತೆಯನ್ನು ತೆರೆಯುತ್ತಿರುವಂತೆ ಕಾಣುತ್ತಿಲ್ಲ. ಈಶಾನ್ಯದ ಇತರ ರಾಜ್ಯಗಳ ಒಟ್ಟು 11 ಲೋಕಸಭಾ ಸ್ಥಾನಗಳಲ್ಲಿ, ಎನ್‌ಡಿಎ 8, ಇಂಡಿಯಾ ಮೈತ್ರಿಕೂಟ ಎರಡು ಮತ್ತು ‘ಇತರರು’ ಒಂದು ಸ್ಥಾನ ಗೆಲ್ಲಬಹುದು ಎಂದು ಸಿ ವೋಟರ್‌ ಸಮೀಕ್ಷೆ ಅಂದಾಜಿಸಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement