ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ’ ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

ಬೆಂಗಳೂರು : ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆʼ ಎಂದು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿಯ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ದಾಖಲಾದ ಎರಡು ಪ್ರತ್ಯೇಕ ಎಫ್‌ಐಆರ್‌ ಮತ್ತು ಅದಕ್ಕೆ ಸಂಬಂಧಿಸಿದ ತನಿಖೆಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಹೇಳಿಕೆ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ದಾಖಲಿಸಲಾದ ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಬಸನಗೌಡ ಪಾಟೀಲ ಯತ್ನಾಳ ಅವರು ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಪೀಠ ತಡೆ ನೀಡಿದೆ.

ಪೀಠವು ಪ್ರತಿವಾದಿಗಳು, ಎಫ್‌ಐಆರ್‌ ದಾಖಲಿಸಿಕೊಂಡಿರುವ ವಿಜಯಪುರ ಗಾಂಧಿಚೌಕ್‌ ಠಾಣಾ ಪೊಲೀಸರು, ದೂರುದಾರಾದ ಸಚಿವ ದಿನೇಶ ಗುಂಡೂರಾವ್‌ ಅವರ ಪತ್ನಿ ಟಬು ರಾವ್‌ ಇತರರಿಗೆ ನೋಟಿಸ್‌ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ವರದಿ ಪ್ರಕಾರ, ಯತ್ನಾಳ ಪರ ವಕೀಲರಾದ ವೆಂಕಟೇಶ ದಳವಾಯಿ ಅವರು, ಸಚಿವ ದಿನೇಶ ಗುಂಡೂರಾವ್ ಮನಬಂದತೆ ಹೇಳಿಕೆ ನೀಡುತ್ತಾರೆ ಎಂಬ ಕಾರಣದಿಂದ ಅರ್ಜಿದಾರರು ಈ ರೀತಿ ಹೇಳಿಕೆ ನೀಡಿದ್ದಾರೆ. ಆದರೆ, ಸಚಿವರ ಪತ್ನಿ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ದಿನೇಶಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂಬುದಾಗಿ ಅರ್ಜಿದಾರರು ಹೇಳಿಕೆ ನೀಡಿದ್ದಾರೆ ಹೊರತು ಅವರ ಪತ್ನಿ ಪಾಕಿಸ್ತಾನದವರು ಎಂದಿಲ್ಲ. ಯತ್ನಾಳ್‌ ಅವರು ತನ್ನನ್ನು ಪಾಕಿಸ್ತಾನದ ಉಗ್ರಗಾಮಿಗಳಿಗೆ ಹೋಲಿಸಿರುವುದಾಗಿ ಟಬುರಾವ್‌ ಹೇಳಿರುವುದು ಕೇವಲ ಅವರ ಊಹೆಯಾಗಿದೆ ಎಂದು ವಾದಿಸಿದರು.

ಪ್ರಮುಖ ಸುದ್ದಿ :-   ಶಿರಸಿ: ಕೆಪಿಸಿಸಿ ಸದಸ್ಯ ದೀಪಕ ದೊಡ್ಡೂರು ನಿವಾಸದ ಮೇಲೆ ಐಟಿ ದಾಳಿ

ಅರ್ಜಿದಾರರ ಹೇಳಿಕೆಯಿಂದ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿರುವುದಾಗಿ ಟಬು ರಾವ್‌ ಆರೋಪಿಸಿದ್ದಾರೆ. ಆದರೆ, ಪಾಕಿಸ್ತಾನ ಒಂದು ದೇಶ, ಧರ್ಮವಲ್ಲ. ಅರ್ಜಿದಾರರು ಧರ್ಮಗಳ ನಡುವೆ ದ್ವೇಷ ಹುಟ್ಟು ಹಾಕುವ ರೀತಿಯಲ್ಲಿ ನಡೆದುಕೊಂಡಿಲ್ಲ. ಹೀಗಾಗಿ, ಅವರ ವಿರುದ್ಧದ ಎಫ್‌ಐಆರ್‌ ರದ್ದುಪಡಿಸಬೇಕಿದೆ. ಅರ್ಜಿ ಇತ್ಯರ್ಥವಾಗುವರೆಗೆ ಎಫ್‌ಐಆರ್‌ ಹಾಗೂ ತನಿಖೆಗೆ ತಡೆ ನೀಡಬೇಕು ಎಂದು ಕೋರಿದರು. ವಾದ ಆಲಿಸಿದ ನಂತರ ಪೀಠವು ಎಫ್‌ಐಆರ್‌ ಮತ್ತು ಅದಕ್ಕೆ ಸಂಬಂಧಿಸಿದ ತನಿಖೆಗೆ ತಡೆಯಾಜ್ಞೆ ನೀಡಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement