(೨೪-೦೪-೨೦೨೪ರ ಬೆಳಿಗ್ಗೆ ೧೧:೩೦ಕ್ಕೆ ಕೊಪ್ಪಿಕರ ರಸ್ತೆಯಲ್ಲಿ ಸಾಹಿತ್ಯ ಭಂಡಾರದ ನೂತನ ನವಿಕೃತಗೊಂಡ ಪುಸ್ತಕ ಮಳಿಗೆಯ ಉದ್ಘಾಟನೆಗೊಳ್ಳುತ್ತಿದೆ. ಈ ನಿಮಿತ್ತ ಲೇಖನ)
೧೯೩೪ ರ ಯುಗಾದಿಯಂದು ಮ. ಗೋವಿಂದರಾವ್ ಮತ್ತು ಮ. ಅನಂತಮೂರ್ತಿ ಅವರು ಕನ್ನಡ ಸಾಹಿತ್ಯದ ಕಂಪನ್ನು ಎಲ್ಲಡೆಗೆ ಪಸರಿಸುವ ನಿಟ್ಟಿನಿಂದ ಸಾಹಿತ್ಯ ಭಂಡಾರವನ್ನು ಆರಂಭಿಸಿದರು. ಇಂದು ೬೦೦೦ ಚದರ ಅಡಿಯಲ್ಲಿ ನವೀಕರಣಗೊಂಡ ವಿಸ್ತಾರವಾದ ೩ ಅಂತಸ್ತುಗಳಲ್ಲಿ ಓದುಗರಿಗೆ ಸೇವೆ ನೀಡಲು ಸಜ್ಜಾಗಿದೆ.
ಸಾಹಿತ್ಯಕಾರ ಯಂಡಮೂರಿ ವಿರೇಂದ್ರನಾಥ ಅವರ ಕಾದಂಬರಿಯಾದ ಕರಿಗಂಬಳಿಯಲ್ಲಿ ಮಿಡಿನಾಗರ’ ವನ್ನು ೧೯೮೬ ರಲ್ಲಿ ತಮ್ಮದೇ ಆದ ಸಾಹಿತ್ಯ ಪ್ರಕಾಶನದ ಮೂಲಕ ಪ್ರಕಟಿಸಿ, ಬಿಡುಗಡೆ ಮಾಡುವ ಮೂಲಕ ಸ್ವತಂತ್ರವಾಗಿ ಪ್ರಕಾಶನ ಉದ್ಯಮದತ್ತ ಎಂ.ಎ. ಸುಬ್ರಮಣ್ಯ ಅವರು ಮುನ್ನಡೆದರು. ಅಂದಿನಿಂದ ಈ ಸಂಸ್ಥೆ ನಿರಂತರವಾಗಿ ದಾಪುಗಾಲು ಇಡುತ್ತ ಮುನ್ನಡೆಯುತ್ತಿದೆ. ಇವರು ಕನ್ನಡ ಭಾಷೆಯ ಹಲವಾರು ಸಾಹಿತಿಗಳ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಕನ್ನಡ ಸಾರಸ್ವತ ಲೋಕದ ವ್ಯಾಪ್ತಿ ಎಲ್ಲೆಗಳನ್ನು ವಿಸ್ತರಿಸಿ, ಕನ್ನಡ ಭಾಷಾ ಸಂಸ್ಕೃತಿಯ ಬೆಳವಣಿಗೆಗೆ ನಾಂದಿ ಹಾಡಿದರು.
ಎಂ.ಎ. ಸುಬ್ರಹ್ಮಣ್ಯ
ಡಿವಿಜಿಯವರ ‘ಜೀವನ ಧರ್ಮ ಯೋಗ’ ಕೃತಿಯನ್ನು ಪ್ರಕಟಿಸುವ ಮೂಲಕ ನೂತನ ವಿಕ್ರಮವನ್ನು ಸ್ಥಾಪಿಸಿದ್ದಾರೆ.
ಸಾರಸ್ವತ ಲೋಕದ ಸುಪ್ರಸಿದ್ದ ಸಾಹಿತ್ಯಕಾರರ ಸಮಗ್ರ ಸಾಹಿತ್ಯಿಕ ಕೃತಿಗಳನ್ನು ಪ್ರಕಟಿಸಿರುವ ಕೀರ್ತಿ ಸಾಹಿತ್ಯ ಭಂಡಾರ ಮತ್ತು ಸಾಹಿತ್ಯ ಪ್ರಕಾಶನಕ್ಕೆ ಸಲ್ಲುತ್ತದೆ. ಸಾಹಿತ್ಯ ಲೋಕದ ದಿಗ್ಗಜರಾದ, ಡಿ.ವಿ. ಗುಂಡಪ್ಪ, ಎಸ್.ಎಲ್.ಭೈರಪ್ಪ, ಕೆ.ಎಸ್. ನಾರಾಯಣಾಚಾರ‍್ಯ, ಶತಾವಧಾನಿ ಆರ್. ಗಣೇಶ ಮುಂತಾದವರು ಹಾಗೂ ಖ್ಯಾತ ಕಾದಂಬರಿಕಾರರಾದ ಕೆ.ಟಿ. ಗಟ್ಟಿ, ಸುದರ್ಶನ ದೇಸಾಯಿ, ಬೀಚಿ ಅವರ ಕೃತಿಗಳನ್ನು ಪ್ರಕಟಿಸಿದರು.
ಧರ್ಮ-ಸಂಸ್ಕೃತಿ ಭಾಷೆಗೆ ಸಂಬಂದಿಸಿದಂತೆ ಪ್ರೊ. ಶ್ರೀನಿವಾಸ ತೊಫಖಾನೆ, ಶಂ. ಭಾ ಜೋಷಿ, ಡಾ. ವಿ.ಕೆ. ಗೋಕಾಕ, ಎನ್.ಕೆ. ಕುಲಕರ್ಣಿ, ಡಾ. ಗಿರಡ್ಡಿ ಗೋವಿಂದರಾಜ, ಡಾ.ಎಂ.ಎಂ. ಕಲಬುರ್ಗಿ, ಹಾರ‍್ನಳ್ಳಿ ರಾಮಸ್ವಾಮಿ ಮುಂತಾದವರು ಬರೆದ ಕೃತಿಗಳನ್ನು ರಾಜ್ಯದ ಮೂಲೆಮೂಲೆಗೆ ತಲುಪಿಸಿದ್ದಾರೆ. ಆರೋಗ್ಯ ಮತ್ತು ಆಯುರ್ವೇದಕ್ಕೆ ಸಂಬಂಧಿಸದಂತೆ ವಿಶೇಷ ಆಸಕ್ತಿ ಹೊಂದಿ ಬಿ.ಎಸ್. ಶಂಕರ, ಡಾ. ಸ.ಜ. ನಾಗಲೋತಿಮಠ ಹಾಗೂ ಪ್ರಕಾಶ ಚಂದ ಜೈನ ಇವರ ಕೃತಿಗಳನ್ನು ಪ್ರಕಟಿಸಿದ್ದಾರೆ. ರೆ.
ನಾಡೋಜ ಚನ್ನವೀರ ಕಣವಿ, ಸಂಧ್ಯಾ ಪೈ, ಪಾರ್ವತಮ್ಮ ಮಹಾಲಿಂಗಶೆಟ್ಟಿ, ಗುರುರಾಜ ಬೆನಕಲ್, ಕೃಷ್ಣಾ ಭಟ್ಟ, ಬಿ.ಎ. ಸನದಿ ಅವರ ಕೃತಿಗಳು ಹಾಗೂ ಪ್ರಕೃತಿ ಪರಿಸರ ಹಾಗೂ ನೀರು ಕೋಯ್ಲ ಕುರಿತಾಗಿ ರಾಧಾಕೃಷ್ಣ ಬಡ್ತಿ ಹಾಗೂ ಶಿವಾನಂದ ಕಳವೆ ಇವರ ಕೃತಿಗಳನ್ನು ಪ್ರಕಟಿಸಿದ್ದಾರೆ.
ಎಂ. ಎಸ್. ಋತ್ವಿಕ್
ಇವರು ಪ್ರಕಟಿಸುವ ಕೃತಿಗಳ ಬಿಡುಗಡೆ ಕಾರ್ಯಕ್ರಮಗಳು ಬಹಳ ವಿಭಿನ್ನ ಹಾಗೂ ಕಾರ್ಯಕ್ರಮದ ಸಂಘಟಿಸುವಿಕೆಯಲ್ಲಿ ಇತರ ಪ್ರಕಾಶಕರಿಗಿಂತ ಒಂದು ಹೆಜ್ಜೆ ಮುಂದೆ. ಸಾಮಾನ್ಯ ಓದುಗನಿಗೆ ಪುಸ್ತಕ ತಲುಪಲಿ ಎಂಬ ನಿಟ್ಟಿನಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಿ, ಸಮಾರಂಭಕ್ಕೆ ಗಣ್ಯ ವ್ಯಕ್ತಿಗಳನ್ನು ಕರೆಸಿದ್ದು ಅವರಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯ, ಕೇಂದ್ರ ಸಚಿವರಾಗಿದ್ದ ಅರುಣ ಜೆಟ್ಲಿ, ಅನಂತಕುಮಾರ, ಡಾ. ಸುಧಾಮೂರ್ತಿ, ಖ್ಯಾತ ಹಿಂಸುಸ್ಥಾನೀ ಸಂಗೀತದ ಗಾಯಕಿ (ದಿ) ಗಂಗೂಬಾಯಿ ಹಾನಗಲ್ಲ, ಖ್ಯಾತ ಸಾಹಿತಿ ಎಸ್.ಎಲ್. ಭೈರಪ್ಪ ಪ್ರಮುಖರು.
ಕನ್ನಡ ಸಾಹಿತ್ಯ ಹಾಗೂ ಪ್ರಕಾಶನದಲ್ಲಿ ಇವರ ಸಾಧನೆಯನ್ನು ಗಮನಿಸಿ ಬಹ್ರೇನ ದೇಶದ ಕನ್ನಡ ಸಂಘವು ಸಾರ್ಥ ಪ್ರಶಸ್ತಿ , ಬೆಂಗಳೂರು ಪುಸ್ತಕ ಮೇಳದಲ್ಲಿ “ಉತ್ತಮ ಪ್ರಕಾಶಕ’ ಇವೇ ಮೊದಲಾದ ಪ್ರಶಸ್ತಿಗಳು ಇವರಿಗೆ ಸಂದಿವೆ. ಮಂತ್ರಾಲಯದ ಶ್ರೀ ರಾಘವೇಂದ್ರ ಮಠ, ಶ್ರೀ ರಾಮಚಂದ್ರಾಪುರ ಮಠ, ಸ್ವರ್ಣಮಲ್ಲಿ ಶ್ರೀ ಮಠ ಹಾಗೂ ಇವರ ಕಾರ್ಯಕ್ಷಮತೆಗೆ ಗೌರವ ಮತ್ತು ಪುರಸ್ಕಾರಗಳನ್ನು ನೀಡಿವೆ.
ಸಾಹಿತ್ಯ ಪ್ರಕಾಶನದಲ್ಲಿಯೇ ಕುಳಿತು ಪುಸ್ತಕಗಳ ಪುಟಗಳ ಅವಲೋಕನ ಮಾಡಿ, ಪುಸ್ತಕಗಳನ್ನು ಖರೀದಿಸುವ ವ್ಯವಸ್ಥೆ ಇದೆ, ಲೇಖಕರು, ಪ್ರಕಾಶಕರು, ಕಥೆ, ಕಾದಂಬರಿ, ವ್ಯಕ್ತಿತ್ವ ವಿಕಸನ, ಆಧ್ಯಾತ್ಮಿಕ ಮುಂತಾದ ಪುಸ್ತಕಗಳನ್ನು ಅಚ್ಚುಕಟ್ಟಾಗಿ ಇಡಲಾಗಿದೆ. ಹಿರಿಯರಾದ ಎನ್.ಬಿ. ರಾಮಾಪುರ, ದಿವಂಗತ ನಿರಂಜನ ವಾಲಿಶೆಟ್ಟರ, ಲೇಖಕರು, ಸ್ನೇಹಿತರು, ಬಂಧುಗಳು ಮುಂತಾದವರ ಮಾರ್ಗದರ್ಶನ, ಪ್ರೋತ್ಸಾಹದಿಂದಾಗಿ ಕನ್ನಡದಲ್ಲಿ ಪುಸ್ತಕಗಳನ್ನು ಪ್ರಕಟಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ ಅವರು. ಪುಸ್ತಕ ಮಾರಾಟ ಕಡಿಮೆಯಾಗಿಲ್ಲ, ಅಭಿರುಚಿ ಬದಲಾಗಿದೆ ಎಂದು ಹೇಳುವ ಸುಬ್ರಹ್ಮಣ್ಯ ಅವರು ಒಳ್ಳೆಯ ಪುಸ್ತಕಗಳಿಗೆ ನಿರಂತರವಾದ ಬೇಡಿಕೆ ಇದೆ ಎನ್ನುತ್ತಾರೆ.
ಸುಬ್ಬು ಪ್ರಕಾಶನ
ಪ್ರತಿ ವರ್ಷ ತಮ್ಮ ತಂದೆ ಮ. ಅನಂತಮೂರ್ತಿ ಅವರ ಪುಣ್ಯಸ್ಮರಣೆ ಸಂದರ್ಭದಲ್ಲಿ ಪುಸ್ತಕ ಪ್ರಕಾಶಕರನ್ನು ಗುರುತಿಸಿ, ಸನ್ಮಾನಿಸುವ ವಿನೂತನ ಪರಂಪರೆಯನ್ನು ಎಂ.ಎ. ಸುಬ್ರಹ್ಮಣ್ಯ ಕಳೆದ ೨೫ ವರ್ಷಗಳಿಂದ ಮಾಡುತ್ತಿದ್ದಾರೆ. ಅವರ ಮಗ ಎಂ. ಎಸ್. ಋತ್ವಿಕ್ ಸುಬ್ಬು ಪ್ರಕಾಶನ ಮೂಲಕ ಈವರೆಗೆ ೫೦ಕ್ಕೂ ಹೆಚ್ಚಿನ ಕೃತಿಗಳನ್ನು ಪ್ರಕಟಿಸಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕನ್ನಡ ಸಂಘ ಕಾಂತಾವರ (ರಿ) ಅವರಿಂದ ಇತ್ತೀಚಿಗಷ್ಟೆ ಉಪಸನ್ಯಾಸಕಿ ಡಾ. ಸರ್ವಮಂಗಳಾ ಪಿ. ಆರ್ ಅವರ ಶ್ರೇಷ್ಠ ಸಾಹಿತ್ಯ ಪ್ರಕಾಶನ ಸಂಸ್ಥೆ ಸಾಹಿತ್ಯ ಭಂಡಾರ ಕೃತಿ ಬಿಡುಗಡೆ ಆಗಿದೆ.
ಫೋನ್, ಈ-ಮೇಲ್, ವಾಟ್ಸಾಪ್ ಮೂಲಕ ಓದುಗರಿಗೆ ಪುಸ್ತಕಗಳನ್ನು ತಲುಪಿಸಲಾಗುತ್ತಿದೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಅವರ ೧೧೬೨ ಬೃಹತ್ ಪುಟಗಳ “ಪಾಪು ಪ್ರಪಂಚ” ಪುಸ್ತಕವನ್ನು ಪ್ರಕಟಿಸಲಾಗಿದೆ. ಹಲವಾರು ಕೃತಿಗಳು ಮರು ಮುದ್ರಣವಾಗಿದ್ದು, ಕನ್ನಡ ಪುಸ್ತಕಗಳು ಪ್ರಕಟಣೆ ಮತ್ತು ವ್ಯಾಪಾರದ ಸ್ಥಳವಾಗಿ, ಸಾರ್ವಜನಿಕರಲ್ಲಿ ಓದುವ ಸಂಸ್ಕೃತಿ ಬೆಳೆಸುವ ಸಂಸ್ಥೆಯಾಗಿ ಮುನ್ನಡೆಯುತ್ತಿದೆ. ಸಾಹಿತ್ಯ ಭಂಡಾರದಿಂದ ೨೦೦ಕ್ಕೂ ಹೆಚ್ಚಿನ ಮತ್ತು ಸಾಹಿತ್ಯ ಪ್ರಕಾಶನದ ಮೂಲಕ ೭೬೦ಕ್ಕೂ ಹೆಚ್ಚಿನ ಸದಭಿರುಚಿಯ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕೃತಿಗಳು ಇಲ್ಲಿಯವರೆಗೆ ಪ್ರಕಟವಾಗಿವೆ.
-ಡಾ. ಬಿ. ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು ಹುಬ್ಬಳ್ಳಿ
ನಿಮ್ಮ ಕಾಮೆಂಟ್ ಬರೆಯಿರಿ