ರಾಹುಲ್ ಗಾಂಧಿ ಸ್ಪರ್ಧೆಯ ಸಸ್ಪೆನ್ಸ್ ನಡುವೆ ಅಮೇಥಿಯಲ್ಲಿ ರಾರಾಜಿಸುತ್ತಿರುವ “ರಾಬರ್ಟ್ ವಾದ್ರಾ ಅಬ್ ಕಿ ಬಾರ್” ಪೋಸ್ಟರ್…!

ಅಮೇಥಿ : ಉತ್ತರ ಪ್ರದೇಶದ ಅಮೇಥಿಯ ಕಾಂಗ್ರೆಸ್‌ ಅಭ್ಯರ್ಥಿಯ ಬಗ್ಗೆ ಸಸ್ಪೆನ್ಸ್ ನಡುವೆ, ಪಕ್ಷದ ಸ್ಥಳೀಯ ಕಚೇರಿಯ ಹೊರಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅವರಿಗೆ ಟಿಕೆಟ್‌ ನೀಡುವಂತೆ ಒತ್ತಾಯಿಸುವ ಪೋಸ್ಟರ್‌ಗಳು ರಾರಾಜಿಸುತ್ತಿವೆ.
ಪೋಸ್ಟರ್‌ಗಳಲ್ಲಿ “ಅಮೇಥಿ ಕಿ ಜನತಾ ಕರೇ ಪುಕಾರ್, ರಾಬರ್ಟ್ ವಾದ್ರಾ ಅಬ್ ಕಿ ಬಾರ್”, ಅಂದರೆ “ಅಮೇಥಿಯ ಜನರು ಈ ಬಾರಿ ರಾಬರ್ಟ್ ವಾದ್ರಾ ಅವರನ್ನು ಬಯಸುತ್ತಾರೆ” ಎಂದು ಬರೆಯಲಾಗಿದೆ.
ಲೋಕಸಭೆ ಚುನಾವಣೆಯ ಐದನೇ ಹಂತದ ಮತದಾನದಲ್ಲಿ ಮೇ 20 ರಂದು ಅಮೇಥಿ ಮತದಾನ ನಡೆಯಲಿದ್ದು, ಮೇ 3 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಹಾಲಿ ಸಂಸದೆ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ಬಿಜೆಪಿ ತನ್ನ ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಇನ್ನೂ ಪ್ರಕಟಿಸಿಲ್ಲ.

ಅಮೇಥಿಯು ಗಾಂಧಿಯವರ ಕುಟುಂಬದ ಭದ್ರಕೋಟೆಯಾಗಿತ್ತು. ಹಿಂದೆ ಸಂಜಯ ಗಾಂಧಿ, ರಾಜೀವ ಗಾಂಧಿ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 2019 ರ ಚುನಾವಣೆಯಲ್ಲಿ, ರಾಹುಲ್ ಗಾಂಧಿ ವಿರುದ್ಧ ಸ್ಮೃತಿ ಇರಾನಿ ಅದ್ಭುತ ಜಯ ಸಾಧಿಸಿದರು. ಈ ವರ್ಷವೂ, ರಾಹುಲ್ ಗಾಂಧಿ ‌ ವಯನಾಡ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಅಮೇಥಿಯಿಂದ ಇನ್ನೂ ಸ್ಪರ್ಧಿಸುವುದು ಬಹಿರಂಗವಾಗಿಲ್ಲ. ಮೇ 3ರವರೆಗೆ ಅಮೇಥಿಗೆ ನಾಮಪತ್ರ ಸಲ್ಲಿಸಲು ಅವಕಾಶವಿದ್ದು, ಕೇರಳದ ಚುನಾವಣೆಯ ನಂತರ ರಾಹುಲ್‌ ಗಾಂಧಿ ಅವರು ತಮ್ಮ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಆದರೆ ಅವರು ನಿರ್ಧಾರ ಏನು ಎಂಬುದು ಬಹಿರಂಗವಾಗಿಲ್ಲ. ಅಮೇಥಿಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗುತ್ತೀರಾ ಎಂದು ಇತ್ತೀಚೆಗಷ್ಟೇ ಅವರನ್ನು ಕೇಳಲಾಗಿತ್ತು. ಪಕ್ಷ ಏನು ಆದೇಶ ನೀಡುತ್ತದೋ ಅದನ್ನು ಪಾಲಿಸುತ್ತೇನೆ ಎಂದು ಅವರು ಉತ್ತರಿಸಿದ್ದರು.
ಏತನ್ಮಧ್ಯೆ, ರಾಬರ್ಟ್‌ ವಾದ್ರಾ ಅವರು, ನಾನು ಅಮೇಥಿಯಲ್ಲಿ ಸ್ಪರ್ಧಿಸಿದರೆ ಅಲ್ಲಿನ ಜನರು ನನ್ನನ್ನು ಭಾರೀ ಅಂತರದಿಂದ ಗೆಲ್ಲಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಹೇಳಿದ್ದರು. ಇದಾದ ಬೆನ್ನಲ್ಲೇ, ಅವರು ಕಾಂಗ್ರೆಸ್ ಅಭ್ಯರ್ಥಿ ಎಂದು ಆಗ್ರಹಿಸಿ ಕೆಲವು ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು.

ಪ್ರಮುಖ ಸುದ್ದಿ :-   ಮೊಬೈಲ್ ನಲ್ಲಿ ಹುಡುಗರ ಜೊತೆ ಹರಟೆ ಬೇಡ ಅಂದಿದ್ದಕ್ಕೆ ಅಣ್ಣನನ್ನೇ ಕೊಡಲಿಯಿಂದ ಹೊಡೆದು ಕೊಂದ 14 ವರ್ಷದ ಬಾಲಕಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement